ಕೋಲಾರ

ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ

Published On :

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ರೈತ ಸಂಘದ ಕಾರ್ಯಕರ್ತರ ಒತ್ತಾಯ
ಕನ್ನಡಪ್ರಭ ವಾರ್ತೆ  ಕೋಲಾರ  ಜು.22

ಜಿಲ್ಲೆಯಾದ್ಯಂತ ಬಹುತೇಕ ಹಳ್ಳಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತ ಸಂಘದ ಮುಖಂಡರು ಸೋಮವಾರ ಜಿಲ್ಲಾ ಅಬಕಾರಿ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಹಳ್ಳಿಗಳಲ್ಲಿನ ದಿನಸಿ ಅಂಗಡಿಗಳಲ್ಲಿ ರಾಜಾರೋಷವಾಗಿ ವಿವಿಧ ಬ್ರಾಂಡುಗಳ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆಂದು ರೈತ ಸಂಘದ ಮುಖಂಡರು ದೂರಿದರು.
ಅಬಕಾರಿ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ, ಹಳ್ಳಿಗಳಲ್ಲಿ ಶಾಂತಿ-ನೆಮ್ಮದಿಯನ್ನು ಹಾಳು ಮಾಡುತ್ತಿರುವ ಮದ್ಯ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಶ್ರೀನಿವಾಸಗೌಡ ಮಾತನಾಡಿ, ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಜನತೆಯ ಶಾಂತಿ-ನೆಮ್ಮದಿಗೆ ಭಂಗ ಉಂಟಾಗಿದೆ. ಅನೇಕ ಸಾರಿ ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲಕೂರು ಹರಿಕುಮಾರ್, ವಡ್ಡಹಳ್ಳಿ ಮುಂಜುನಾಥ್, ನೀಲಕಂಠಪುರ ಮುನೇಗೌಡ, ಮಾಸ್ತಿ ಬಾಬು, ಸುರೇಶ್, ಶೇಖರ್, ಲಕ್ಷ್ಮಮ್ಮ, ಭಾಗ್ಯಮ್ಮ, ಅನಸೂಯಮ್ಮ, ಮಂಜುಳ, ಲಕ್ಷ್ಮಿದೇವಮ್ಮ, ನಾರಾಯಣಸ್ವಾಮಿ, ಕೆಂಬೋಡಿ ಕೃಷ್ಣೇ ಗೌಡ, ಪಾಪೇನಹಳ್ಳಿ ಶಿವಣ್ಣ ಇದ್ದರು.

ಮನಸೆಳೆದ ಸಂಗೀತೋತ್ಸವ
ಚಿಂತಾಮಣಿ: 
ಪುರಾಣ ಪ್ರಸಿದ್ಧ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ನಡೆಯುತ್ತಿರುವ 3 ದಿನಗಳ ಸಂಗೀತೋತ್ಸವದ 2ನೇ ದಿನ ಭಕ್ತರ ಮಹಾಸಾಗರವೇ ಹರಿದುಬಂತು. ಸಂಗೀತೋತ್ಸವದಲ್ಲಿ ಭಾಗವಹಿಸಲು ದೂರದ ಊರುಗಳಿಂದ ತಂಡೋಪತಂಡಗಳಾಗಿ ಭಕ್ತರು ಬರುತ್ತಿದ್ದಾರೆ. ಗುರುಪೂಜಾ ಸಂಗೀತೋತ್ಸವದಲ್ಲಿ ಸಂಗೀತ ರಸದೌತಣ ಸವಿಯುತ್ತಿದ್ದಾರೆ.
ಬೆಳಗ್ಗಿನಿಂದಲೇ ನಾದಸ್ವರ ವಾದನ, ತವಿಲ್ ವಾದ್ಯಗಳಿಂದ 2ನೇ ದಿನದ ಕಾರ್ಯಕ್ರಮಗಳು ಪ್ರಾರಂಭವಾದವು. ಬೆಂಗಳೂರಿನ ಶ್ವೇತ ಕೇಶವ್, ರಂಜನಿ ವಾಸುಕಿ, ಆರ್.ಜಯಶ್ರೀ- ಆರ್.ಲಕ್ಷ್ಮಿ, ಕಾಕಿನಾಡ ಆಕೊಂಡಿ ಶ್ರೀನಿವಾಸರಾಜಾ ರಾವ್, ವಿರೂಪಸಂದ್ರ ಗೋಪಾಲಕೃಷ್ಣಾಚಾರ್, ಹೈದರಾಬಾದ್ ಶ್ರೀನಿಧಿ, ತೇಜಶ್ವಿನಿ ಕೋದಂಡರಾಮ್, ರಮಣಕುಮಾರ್, ರೇಖಾ ಹರಿನಾಥ್ ಅವರಿಂದ ಗಾಯನ ಕಾರ್ಯಕ್ರಮಗಳು ಮೂಡಿಬಂದವು.
ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಎ.ವಿ. ವಿಶ್ವನಾಥ್ ಹಾರ್ಮೋನಿಯಂ ಸೋಲೋ, ಚೆನ್ನೈನ ಎನ್.ವಿಶ್ವೇಶ್ವರ ಕೊಳಲು ವಾದನ, ಮೈಸೂರಿನ ಆರ್.ಎನ್. ಶ್ರೀಲತಾ, ಅನುರಾಧಾ ಮಧುಸೂದನ್ ವೀಣಾವಾದನ ಅಮೋಘವಾಗಿತ್ತು.
ಸಂಜೆ ದೆಹಲಿಯ ಸರಸ್ವತಿ ರಾಜಗೋಪಾಲನ್ ವೀಣಾವಾದನ, ವಿಜಯವಾಡ ಮಲ್ಲಾದಿ ಸಹೋದರರಾದ ಶ್ರೀರಾಮಪ್ರಸಾದ್, ರವಿಕುಮಾರ್ ದ್ವಂದ ಗಾಯನ, ಡಾ. ಕದ್ರಿಗೋಪಾಲನಾಥನ್ ಸ್ಯಾಕ್ಸೋಫೋನ್, ಚೇತನ ಸುಂದರೇಶ್ ಅವರ ನೇತೃತ್ವದಲ್ಲಿ ಭರತನಾಟ್ಯ, ರಾತ್ರಿ ತವಿಲ್ ವಿದ್ವಾನ್ ಪದ್ಮಶ್ರೀ ಡಾ. ಹೊಳೆಪಟ್ಟಿ ಸುಬ್ರಮಣ್ಯಂ ಅವರಿಂದ ನಾದಸ್ವರ ತವಿಲ್ ವಾದನ ಸಂಗೀತ ರಸಿಕರ ಮನಸೆಳೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.