ಕ್ಯಾಟ್ಫಿಶ್ ಸಾಕಾಣಿಕೆ ನಿಲ್ಲಿಸಲು ಆದೇಶ
ಚಿಕ್ಕಬಳ್ಳಾಪುರ: ನಿಷೇಧದ ನಡುವೆಯೂ ರಾಜಾರೋಷವಾಗಿ ಜಿಲ್ಲೆಯ ವಿವಿಧೆಡೆ ಕ್ಯಾನ್ಸರ್ ರೋಗವನ್ನು ತರಬಲ್ಲ ಮಾರಕ ಆಫ್ರಿಕನ್ಕ್ಯಾಟ್ಫಿಶ್ ಸಾಕಾಣಿಕೆ ನಡೆಯುತ್ತಿರುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಜಿಲ್ಲಾಡಳಿತ, ಆಫ್ರಿಕನ್ ಕ್ಯಾಟ್ಫಿಶ್ ಸಾಕಾಣಿಕೆಯನ್ನು ನಿಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಜಿಲ್ಲೆಯ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಸೇರಿದಂತೆ ಹಲವೆಡೆ ರಾಜಾರೋಷವಾಗಿ ಆಫ್ರಿಕನ್ಕ್ಯಾಟ್ಫಿಶ್ಅನ್ನು ಸಾಕಾಣೆ ಮಾಡುತ್ತಿರುವುದರ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಇದರಿಂದ ಅಧಿಕಾರಿಗಳು ಆಗಾಗ ಅನಿರೀಕ್ಷಿತವಾಗಿ ದಾಳಿ ನಡೆಸುತ್ತಿದ್ದರೂ ನಿಯಂತ್ರಣಕ್ಕೆ ಬಂದಿಲ್ಲ. ರೈತರ ಜಮೀನುಗಳಲ್ಲಿ ಸಾಮಾನ್ಯ ಮೀನುಗಳನ್ನು ಸಾಕಾಣೆ ಮಾಡುವ ಹೆಸರಿನಲ್ಲಿ ಕ್ಯಾಟ್ಫಿಶ್ ಸಾಕಾಣಿಕೆ ಮಾಡಲಾಗುತ್ತಿದೆ. ಹಾಗೆಯೇ ಕದ್ದು ಮುಚ್ಚಿ ಮಾರಾಟ ಮಾಡಲಾಗುತ್ತಿದೆ. ಅಮಾಯಕರು ಕ್ಯಾಟ್ಫಿಶ್ ಸೇವನೆಯಿಂದಾಗುವ ಅನಾಹುತಗಳನ್ನು ಅರಿಯದೇ ಕೊಂಡುಕೊಳ್ಳುತ್ತಿದ್ದು ಆರೋಗ್ಯದ ಮೇಲೆ ಮುಂದೆ ದುಷ್ಪರಿಣಾಮ ಬೀರುತ್ತದೆ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳುತ್ತಿಲ್ಲ.
ಮಾರಕವಾದುದು: ಕ್ಯಾಟ್ಫಿಶ್ ಸಾಕಾಣಿಕೆಯನ್ನು ಸಮರ್ಪಕ ರೀತಿಯಲ್ಲಿ ಕೈಗೊಳ್ಳಲಾಗುವುದಿಲ್ಲ. ದುಬಾರಿ ವೆಚ್ಚದ ನಿರ್ವಹಣೆಯ ಹಿನ್ನೆಲೆಯಲ್ಲಿ ಕ್ಯಾಟ್ಫಿಶ್ ಸಾಕಾಣೆ ಮಾಡುವವರು ನಾನಾ ಕಾಯಿಲೆಗಳಿಂದ ಸತ್ತ ಕೋಳಿಗಳನ್ನು ಅತಿ ಕಡಿಮೆ ದರದಲ್ಲಿ ಖರೀದಿಸಿ, ಕ್ಯಾಟ್ಫಿಶ್ಗಳಿಗೆ ಆಹಾರವಾಗಿ ಹಾಕುತ್ತಾರೆ. ಪ್ರಮುಖವಾಗಿ ಸತ್ತ ನಾಯಿಗಳ ದೇಹವನ್ನು ಸಹ ಬಿಡುವುದಿಲ್ಲ. ಹೀಗೆ ಕಾಯಿಲೆ ಸೋಂಕಿತ ಕ್ಯಾಟ್ಫಿಶ್ಗಳನ್ನು ಸಾಕಾಣೆ ಮಾಡುತ್ತಿದ್ದು ಇವುಗಳನ್ನು ಸೇವಿಸುವವರಿಗೆ ಮಾರಕ ಕ್ಯಾನ್ಸರ್ ಕಾಯಿಲೆ ಬರುತ್ತದೆ. ನಿಧಾನವಾಗಿ ಆರೋಗ್ಯವು ಹದಗೆಡುತ್ತದೆ. ನೀರನ್ನು ಶುದ್ದೀಕರಿಸುವ ಸಾಮಾನ್ಯ ಮೀನುಗಳನ್ನೂ ಕ್ಯಾಟ್ಫಿಶ್ಗಳು ತಿಂದು ಹಾಕುವುದು ಇವುಗಳ ಸಾಕಾಣೆಯನ್ನು ನಿಲ್ಲಿಸುತ್ತಿರುವುದರ ಕಾರಣಗಳಲ್ಲೊಂದಾಗಿದೆ.
ನಿರ್ದಾಕ್ಷಿಣ್ಯ ಕ್ರಮ: ದುಷ್ಪರಿಣಾಮವನ್ನು ಬೀರುವ ಕ್ಯಾಟ್ಫಿಶ್ ಸಾಕಾಣಿಕೆಯನ್ನು ರಾಜ್ಯ ಉಚ್ಛ ನ್ಯಾಯಾಲಯವು ಕಳೆದ ಫೆಬ್ರವರಿ ತಿಂಗಳಿನಲ್ಲಿ ನಿಷೇಧಿಸಿದ್ದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕ್ಯಾಟ್ಫಿಶ್ ಸಾಕಾಣಿಕೆ ಮಾಡದಂತೆ ಎಚ್ಚರ ವಹಿಸಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಅಕ್ರಮವಾಗಿ ಆಫ್ರಿಕಕ್ಯಾಟ್ಫಿಶ್ ಸಾಕಾಣಿಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಲ್ಲದೇ ಸಾಕಾಣಿಕೆ ಮಾಡುವವರ ಜಮೀನನ್ನು ಸಹ ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆಯನ್ನು ನೀಡಿದೆ.
ಖಡಕ್ ಎಚ್ಚರಿಕೆ: ನಗರದಲ್ಲಿನ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಹಸೀಲ್ದಾರ್ ನಟೇಶ್, ಯಾವುದೇ ಕಾರಣಕ್ಕೂ ಕ್ಯಾಟ್ಫಿಶ್ಅನ್ನು ಯಾರೂ ಸಾಕಾಣೆ ಮಾಡಬಾರದು. ಒಂದು ವೇಳೆ ಸಾಕಾಣೆ ಜತೆಗೆ ಮಾರಾಟ ಮಾಡುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೇಷ್ಮೆ ಇಲಾಖೆ ಉಪ ನಿರ್ದೇಶಕ ಚಂದ್ರಪ್ಪ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

