ಕೋಲಾರ

ಕೋರ್ಟ್ ಬಳಿ ಲಾಂಗ್ ಹಿಡಿದು ತಿರುಗುತ್ತಿದ್ದವರ ಸೆರೆ

Published On :

ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಜು.24
ತಾಲೂಕಿನ ಜಾತವಾರ ಬಳಿ ಹಾಡಹಗಲೇ ಮನಸೋಇಚ್ಛೆ ಕಡುವೈರಿ ಸಹೋದರಿಬ್ಬರನ್ನು ಕೊಲೆಗೈದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗುತ್ತಿರುವ ತಮ್ಮ ನಾಯಕನಿಗೆ ಯಾರಾದರೂ ವಿರೋಧಿಗಳು ಸ್ಕೆಚ್ ಹಾಕಿ, ಪ್ರಾಣ ತೆಗೆಯಬಹುದೆಂಬ ಆತಂಕದಿಂದ ಆರೋಪಿ ರಕ್ಷಣೆಗಾಗಿ ಮಾರಕಾಸ್ತ್ರಗಳೊಂದಿಗೆ ನ್ಯಾಯಾಲಯದ ಆವರಣದಲ್ಲಿ ತಿರುಗಾಡುತ್ತಿದ್ದ ನಾಲ್ವರನ್ನು ನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳದ ಗೋಪಾಲಕೃಷ್ಣ (32), ಗಂಗಾಧರ್ (23), ಮುನಿರಾಜು (30), ರವಿ (25) ಬಂಧಿತರು ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಪೊಲೀಸರು ಆರೋಪಿಗಳಿಂದ 1 ಮಚ್ಚು, 1 ಚಾಕು, ಕಾರು ವಶಕ್ಕೆ ತೆಗೆದುಕೊಂಡಿದ್ದಾರೆ.
ಘಟನೆ ಹಿನ್ನೆಲೆ:  ಕಳೆದ ಎರಡ್ಮೂರು ವರ್ಷಗಳ ಹಿಂದೆ ತಾಲೂಕಿನ ಜಾತವಾರ ಬಳಿ ಸಂಭವಿಸಿದ ಶಿಡ್ಲಘಟ್ಟ ತಾಲೂಕಿನ ಸಹೋದರಿಬ್ಬರ ಬರ್ಬರ ಕೊಲೆಯನ್ನು ಪ್ರಕರಣವನ್ನು ಜಿಲ್ಲೆಯ ಜನ ಇನ್ನೂ ಮರೆತಿಲ್ಲ. ಹಾಡಹಗಲೇ ಭೀಕರವಾಗಿ ನಡೆದಿದ್ದ ಈ ಕೊಲೆ ಪ್ರಕರಣ ಜಿಲ್ಲೆ ಜನರನ್ನೇ ತಲ್ಲಣಗೊಳಿಸಿತ್ತು. ಶಿಡ್ಲಘಟ್ಟದಲ್ಲಿ ರಿಯಲ್ ಎಸ್ಟೇಟ್ ದಂಧೆ, ಅಕ್ರಮವಾಗಿ ಜೂಜಾಟ ಕೇಂದ್ರಗಳನ್ನು ನಡೆಸಿಕೊಂಡು ಬಂದು, ತಮ್ಮ ಕೆಲಸ ಕಾರ್ಯಗಳಿಗೆ ಒಂದಿಲ್ಲೊಂದು ರೀತಿ ಅಡ್ಡ ಬಂದು ತೊಂದರೆ ಮಾಡುತ್ತಿದ್ದಾರೆ ಎಂಬ ಆಕ್ರೋಶದಲ್ಲಿ ಕುಖ್ಯಾತ ರೌಡಿಗಳಾದ ದಿವಂಗತ ಬೋಧಗುರು ಮೋಹನ್, ರಂಗನಾಥ್ ನೇತೃತ್ವದ ತಂಡ ಶಿಡ್ಲಘಟ್ಟ ಪಟ್ಟಣದ ನಿವಾಸಿಗಳಾದ ಮಂಜುನಾಥ್ ಮತ್ತು ನರಸಿಂಹಮೂರ್ತಿ ರೌಡಿಶೀಟರ್ ಸಹೋದರರಿಬ್ಬರನ್ನು ಜಾತವಾರ ಬಳಿ ಬರ್ಬರವಾಗಿ ಕೊಲೆ ಮಾಡಿತ್ತು.
ಚಿಕ್ಕಬಳ್ಳಾಪುರದ ನ್ಯಾಯಾಲಯಕ್ಕೆ ಮಾರುತಿ ಆಮ್ನಿಯಲ್ಲಿ ಬರುತ್ತಿದ್ದ ಸಹೋದರರಿಗೆ ಬೋಧಗುರು ಮೋಹನ್ ಮತ್ತು ಅವರ ತಂಡ ಟಾಟಾ ಸುಮೋದಿಂದ ಡಿಕ್ಕಿ ಹೊಡೆದಿತ್ತು. ಉರುಳಿ ಬಿದ್ದ ವಾಹನದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಇಬ್ಬರ ಜೀವ ತೆಗೆಯಲಾಗಿತ್ತು. ಘಟನೆ ನಡೆದು ಎರಡ್ಮೂರು ದಿನಗಳ ನಂತರ ನಾವೇ ಮಂಜುನಾಥ್ ಮತ್ತು ನರಸಿಂಹಮೂರ್ತಿ ಕೊಲೆ ಮಾಡಿದ್ದು ಎಂತಲೂ ಸಹ ನಿರ್ಭಯವಾಗಿಯೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದರಿಂದ ಪೊಲೀಸರು ಕೊಲೆ ಆರೋಪಿಗಳಾದ ಬೋಧಗುರು ಮೋಹನ್ ಮತ್ತು ರಂಗನಾಥ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇಷ್ಟಾದರೂ ಸಹ ಪರಸ್ಪರ ಎರಡು ತಂಡಗಳವರು ಸ್ಕೆಚ್‌ಗಳ ಮೇಲೆ ಸ್ಕೆಚ್‌ಗಳನ್ನು ಹಾಕಿ, ರಕ್ತ ಹರಿಸಲು ಕಾಯುತ್ತಿದ್ದರು.
ಕೊಲೆಯಾದ ಸಹೋದರರ ಕಡೆಯ ಬೆಂಬಲಿಗರು ತಮ್ಮ ಸೇಡು ತೀರಿಸಿಕೊಳ್ಳದೇ ಬಿಡುವುದಿಲ್ಲ ಎಂದು ಕಿಡಿಕಾರಿದ್ದರು. ಈ ನಡುವೆ ಜೈಲಿನಿಂದ ಬಿಡುಗಡೆಗೊಂಡಿದ್ದ ಬೋಧಗುರು ಮೋಹನ್‌ನನ್ನು ಮಂಜುನಾಥ್ ಮತ್ತು ನರಸಿಂಹಮೂರ್ತಿ ಕೊಲೆಯ ಪ್ರತಿಕಾರವಾಗಿ ಕಳೆದ ಕೆಲ ತಿಂಗಳುಗಳ ಹಿಂದೆ ಯಾರೋ ದುಷ್ಕರ್ಮಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಸಮೀಪ ಮಾರಕಾಸ್ತ್ರಗಳಿಂದ ಕೊಚ್ಚಿ ಆತನ ಜೀವ ತೆಗೆದಿದ್ದರು. ಈ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಕ್ತಚರಿತ್ರೆ ಗಲಾಟೆ ಸದ್ದು ಮಾಡಿತ್ತು.
ಇನ್ನು ಬೋಧಗುರು ಮೋಹನ್ ದಾರುಣ ಹತ್ಯೆ ಬಗ್ಗೆ ತಿಳಿದಿದ್ದ ರಂಗನಾಥ್ ಜೈಲಿನಲ್ಲಿಯೇ ಇದ್ದು ಬುಧವಾರ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ನೀಡುವ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿ ರಂಗನಾಥನನ್ನು ನ್ಯಾಯಾಲಯಕ್ಕೆ ಪೊಲೀಸರು ಕರೆದುಕೊಂಡು ಬಂದಿದ್ದರು. ಈ ನಡುವೆ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳದ ಗೋಪಾಲಕೃಷ್ಣ, ಗಂಗಾಧರ್, ಮುನಿರಾಜು ಮತ್ತು ರವಿ ಕೆ.ಎ.35.ಎ.5808 ಇಂಡಿಕಾ ಕಾರಿನಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ರಂಗನಾಥನ ರಕ್ಷಣೆಗೆ ತಿರುಗಾಡುತ್ತ ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶಕುಮಾರ್, ನಗರ ಠಾಣೆ ಪಿಎಸ್‌ಐ ವಸಂತ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ, ನಾಲ್ವರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.