ಕೋಲಾರ

ಹಾಸ್ಟೆಲ್ ಶೀಘ್ರ ಪೂರ್ಣಗೊಳಿಸಲು ಒತ್ತಾಯ

Published On :

-ಟೇಕಲ್ ಲಕ್ಷ್ಮೀಶ್
ಟೇಕಲ್:
ಮಾಲೂರು ತಾಲೂಕು ಮಾಸ್ತಿ ಗ್ರಾಮದಲ್ಲಿ ನಿರ್ಮಾಣ ಆಗುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಕಾಲೇಜು ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಟ್ಟಡ ಕಾಮಗಾರಿ ನಿಗದಿತ ವೇಳೆಗೆ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಶೀಘ್ರವೇ ಅನುಕೂಲ ಮಾಡಿಕೊಡಬೇಕೆಂದು ದಲಿತರ ಪರ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಮಾಸ್ತಿ ಗ್ರಾಮದಲ್ಲಿ ಹಲವು ವರ್ಷಗಳಿಂದ ವಿದ್ಯಾರ್ಥಿ ನಿಲಯವು ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು.
 ಆ ಕಟ್ಟಡವು ಭೂತ ಬಂಗಲೆಯಂತೆ ಕಾಣುತ್ತಿದ್ದು, ಕಟ್ಟಡದಲ್ಲಿ ಸರಿಯಾದ ರೀತಿಯಲ್ಲಿ ಕಿಟಕಿ ಬಾಗಿಲುಗಳು, ಸ್ವಚ್ಛತೆ ಸೇರಿದಂತೆ ಯಾವುದೇ ರೀತಿಯ ಮೂಲ ಸೌಲಭ್ಯಗಳಿಲ್ಲದೆ. ಅಲ್ಲಿನ ವಿದ್ಯಾರ್ಥಿಗಳು ವಂಚಿತರಾಗಿದ್ದರು.
 ಈ ಹಿನ್ನೆಲೆಯಲ್ಲಿ ದಲಿತಪರ ಸಂಘಟನೆಗಳು ಹೋರಾಟದ ಮೇರೆಗೆ ಮಾಸ್ತಿ ಗ್ರಾಮದ ಸಂತೆ ಮೈದಾನದ ಬಳಿ ಸರ್ಕಾರಿ ಜಮೀನನ್ನು ಮಂಜೂರು ಮಾಡಿ ಸರ್ಕಾರ ವಿದ್ಯಾರ್ಥಿ ನಿಲಯಕ್ಕೆ ಕಟ್ಟಡ ಕಾಮಗಾರಿ ಆರಂಭಿಸಿ, 3-4 ವರ್ಷಗಳೇ ಕಳೆದಿದೆ. ಈ ಕಟ್ಟಡ ಕಾಮಗಾರಿ ಲ್ಯಾಂಡ್‌ಆರ್ಮಿ ಎಂಜನಿಯರ್ ಅವರಿಗೆ ನೀಡಲಾಯಿತು. ಆದರೆ, ಅವರು ಸರಿಯಾದ ರೀತಿಯಲ್ಲಿ ಕಟ್ಟಡ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಸುಮಾರು 10 ತಿಂಗಳ ಹಿಂದೆ, ಸಿಎಸ್ ಜುಲ್ಫಿಕರುಲ್ಲಾ ಪರಿಶೀಲನೆ ಸಹ ಮಾಡಿದ್ದರು.
ಒಂದೆರಡು ತಿಂಗಳು ಕಟ್ಟಡ ಕಾಮಗಾರಿ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಆದರೂ, ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿ ಮಾತ್ರ ಕಳಪೆ ಇಲ್ಲದೆ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ ಎಂದು ದಲಿತಪರ ಸಂಘಟನೆಗಳು ಹೇಳುತ್ತಿವೆ.
 ಆದಷ್ಟು ಬೇಗನೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ನಿಗದಿತ ವೇಳೆಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಭೂತ ಬಂಗಲೆಯಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿ ಒತ್ತಾಯಿಸುತ್ತಿದ್ದಾರೆ.
ಆದರೆ ಸುಮಾರು 15 ದಿನಗಳ ಹಿಂದೆ ದಲಿತ ಮುಖಂಡರ ಕೆಲ ಮಧ್ಯಸ್ಥಿಕೆಗಳು ಕಾಮಗಾರಿ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ ಕೆಲಸ ನಿಲ್ಲಿಸುವಂತೆ ಬೆದರಿಸಿರುವ ಘಟನೆ ನಡೆದಿದೆ.
 ಇದರಿಂದ ಕಟ್ಟಡ ಕಾಮಗಾರಿ ನೆನೆಗುದಿಗೆ ಬೀಳುವಂತಿದೆ. ಯಾವುದೇ ಕಾರಣಕ್ಕೂ ಕಟ್ಟಡ ಕಾಮಗಾರಿಯನ್ನು ನಿಲ್ಲಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸಮತಾ ಸೈನಿಕ ದಳ ಒತ್ತಾಯ:  ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಸುಮಾರು 1 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಕಾಲೇಜು ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಕಳೆದ 15 ದಿನಗಳ ಹಿಂದೆ ದಲಿತ ಮುಖಂಡರ ಕೆಲ ಮಧ್ಯಸ್ತಿಕೆಯಿಂದ ಕಾಮಗಾರಿ ನೆನೆಗುದ್ದಿಗೆ ಬಿದ್ದಿದೆ.
ಈಗಿರುವ ವಿದ್ಯಾರ್ಥಿ ನಿಲಯದಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗಿದ್ದು, ಆದಷ್ಟು ಬೇಗನೆ ಸಂಬಂಧಪಟ್ಟ ಅಧಿಕಾರಿಗಳು ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಬೇಕಾಗಿದೆ. ಆದರೆ ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಿಸದೆ ನಿಗದಿತ ವೇಳೆಗೆ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಕರ್ನ್ನಾಟಕ ರಾಜ್ಯ ಸಮತಾ ಸೈನಿಕ ದಳದ ತಾಲೂಕು ಅಧ್ಯಕ್ಷ ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಮಿಲಿಟರಿ ರಮೇಶ್, ವರದಾಪುರ ವೆಂಕಟೇಶ್, ದೊಡ್ಡಕಲ್ಲಹಳ್ಳಿ ವೆಂಕಟೇಶ್ ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.