ಕೋಲಾರ

'ರಸ್ತೆಗಳು ಕೆಸರು ಗದ್ದೆಗಳೇ.. ನಗರಸಭೆ ಜೀವಂತವಿದೆಯೇ..'

Published On :

ಚಿಕ್ಕಬಳ್ಳಾಪುರ: ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ನಿರ್ಲಕ್ಷ್ಯ ವಹಿಸುವ, ಲಂಚಕ್ಕಾಗಿ ಪೀಡಿಸುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲು ಕರೆದಿದ್ದ ಸಭೆಯಲ್ಲಿ ಲೋಕಾಯುಕ್ತರು ಸ್ಥಳೀಯ ನಗರಸಭೆಯನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.
ಹದಗೆಟ್ಟ ರಸ್ತೆಗಳು, ಅಸ್ವಚ್ಛತೆಯಿಂದ ಪರದಾಡುತ್ತಿರುವ ಸಾರ್ವಜನಿಕರು ಹಿಡಿಶಾಪವನ್ನು ಹಾಕುತ್ತಿದ್ದರೂ ತಲೆ ಕೆಡಿಸಿಕೊಳ್ಳದೇ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಸಮಂಜಸವಲ್ಲ ಎಂದು ಕಿಡಿಕಾರಿದರು.
ನಗರದ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಹೆಚ್ಚಿಗೆ ನಗರಸಭೆಯ ಬಗ್ಗೆ ಚರ್ಚೆಯಾಯಿತು.
ಲೋಕಾಯುಕ್ತ ಸಬ್ ಇನ್ಸೆಪೆಕ್ಟರ್ ಮಂಜೇಗೌಡ ಮಾತನಾಡಿ, ಚಿಕ್ಕಬಳ್ಳಾಪುರ ನಗರ ಜಿಲ್ಲಾ ಕೇಂದ್ರವಾದರೂ ಸಹ ಎಲ್ಲಿ ನೋಡಿದರೂ ರಸ್ತೆಗಳು ಹಳ್ಳಗುಂಡಿಗಳಿಂದ ಕೂಡಿರುತ್ತವೆ. ವಾಹನ ಸಂಚಾರಕ್ಕೆ ಯೋಗ್ಯವಿಲ್ಲದೇ ಸವಾರರು ಪರದಾಡುತ್ತಿದ್ದಾರೆ. ಇನ್ನೂ ಮಳೆ ಬೀಳುತ್ತಿರುವ ಪ್ರಸ್ತುತ ದಿನಗಳಲ್ಲಿ ಕಂಡು ಬರುತ್ತಿರುವ ರಸ್ತೆಗಳ ದುಸ್ಥಿತಿ ಬಗ್ಗೆ ವಿಶೇಷವಾಗಿ ಹೇಳುವುದೇ ಬೇಡ. ರಸ್ತೆಗಳು ಕೆಸರು ಗದ್ದೆಗಳಂತೆ ಕಾಣುತ್ತವೆ. ಇಂತಹ ರಸ್ತೆಯಲ್ಲಿ ಮಕ್ಕಳು ಮತ್ತು ವೃದ್ಧರು ಓಡಾಡುವುದಾದರೂ ಹೇಗೆ ಅನೇಕ ಬಾರಿ ಹಲವರು ಮುಗ್ಗರಿಸಿ ಬೀಳುತ್ತಿರುವುದರ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಅಲ್ಲದೇ ನಗರಸಭೆ ಅಧಿಕಾರಿಗಳು ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ಈ ನಡುವೆ ಹೆಚ್ಚಾಗಿ ಕೇಳಿ ಬರುತ್ತಿದ್ದು ನಗರದಲ್ಲಿ ತುಂಬಿ ತುಳುಕಾಡುತ್ತಿರುವ ಸಮಸ್ಯೆಗಳನ್ನು ನೋಡಿದರೆ ನಗರಸಭೆ ಜೀವಂತವಾಗಿದೆಯೇ ಎಂಬ ಅನುಮಾನ ಕಾಡುತ್ತದೆ ಎಂದು ತಿಳಿಸಿದರು.
ಹಾಳಾದ ರಸ್ತೆಗಳನ್ನು ಸರಿಪಡಿಸುವ ಗೋಜಿಗೆ ನಗರಸಭೆ ಏಕೆ ಹೋಗುತ್ತಿಲ್ಲ. ತಮಗೂ ಹದಗೆಟ್ಟ ರಸ್ತೆಗಳಿಗೂ, ಅಸ್ವಚ್ಛತೆಗೂ ಸಂಬಂಧವಿಲ್ಲ ಎನ್ನುವಂತೆ ನಗರಸಭೆ ಅಧಿಕಾರಿಗಳು ವರ್ತಿಸುತ್ತಿರುವುದಾರದರೂ ಏಕೆ ಏನು ಅಧಿಕಾರಿಗಳು ನಿದ್ದೆ ಹೋಗುತ್ತಿದ್ದಾರೆಯೇ ಎಂದು ವ್ಯಂಗ್ಯವಾಡಿದರು.
ನಮಗೇ ಸ್ಪಂದಿಸುತ್ತಿಲ್ಲ: ಸಾರ್ವಜನಿಕರ ಅಹವಾಲುಗಳನ್ನು ಸ್ವೀಕಾರ ಸಭೆಯಲ್ಲಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಪ್ರತಿ ಸಭೆಯಲ್ಲೂ ಸೂಚನೆ ನೀಡಲಾಗುತ್ತಿದೆ. ಸಭೆಯ ನಂತರ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರವನ್ನು ಬರೆದು ಸಲ್ಲಿಕೆಯಾದ ಅರ್ಜಿಗಳನ್ನು ಇತ್ಯರ್ಥಪಡಿಸಿದಕ್ಕೆ ಸಂಬಂಧಪಟ್ಟಂತೆ ಪ್ರಗತಿ ವಿವರಗಳನ್ನು ನೀಡಬೇಕೆಂದು ಕೇಳಲಾಗುತ್ತದೆ. ಆದರೆ, ಬಹಳಷ್ಟು ಇಲಾಖೆಯ ಮುಖ್ಯಸ್ಥರು ಲೋಕಾಯುಕ್ತರಿಗೆ ಉತ್ತರವೇ ನೀಡುತ್ತಿಲ್ಲ. ಇನ್ನೂ ಜನ ಸಾಮಾನ್ಯರ ಅಹವಾಲುಗಳಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದ ಮಂಜೇಗೌಡ, ಪದೇ ಪದೇ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ಕೊಡುತ್ತ ಇರಲು ಸಾಧ್ಯವಿಲ್ಲ. ನಿಗದಿತ ಅವಧಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ತಮ್ಮ ಇಲಾಖೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಕ್ರಮವಾಗಿ ನಿವೇಶನ ಮತ್ತು ಕೆರೆ ಒತ್ತುವರಿ, ಪಡಿತರ ವಿತರಣೆಯಲ್ಲಿ ಲೋಪ, ನಗರಸಭೆಯ ನಿರ್ಲಕ್ಷ್ಯ ಸೇರಿದಂತೆ ಪ್ರಮುಖ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಬೆಳಕು ಚೆಲ್ಲಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.