ಕೋಲಾರ

ವೆಂಕಟರಮಣಸ್ವಾಮಿ ದೇಗುಲ ಜೀರ್ಣೋದ್ಧಾರ

Published On :

ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀನಿವಾಸ ಸಾಗರ ಬಳಿ ನಡೆಯುತ್ತಿರುವ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ತಿರುಮಲ ತಿರುಪತಿ ದೇವಸ್ಥಾನದ ಪ್ರಧಾನ ಅರ್ಚಕರು ಮತ್ತು ಆಗಮಿಕರ ಪಂಡಿತರು ಶುಕ್ರವಾರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪಲ್ಲವರ ಕಾಲದಲ್ಲಿ ಪ್ರಾಕೃತಿಕ ಸೊಬಗಿನಿಂದ ಕೂಡಿರುವ ಶ್ರೀನಿವಾಸ ಸಾಗರ ಬಳಿ ಶ್ರೀ ವೆಂಕಟರಮಣಸ್ವಾಮಿ ದೇವಾಲಯವನ್ನು ನಿರ್ಮಿಸಿದ್ದು ಪುರಾತನ ದೇವಾಲಯದ ಕಡೆಗೆ ಯಾರೂ ಗಮನ ಕೊಡದ ಕಾರಣ ಸಮರ್ಪಕ ನಿರ್ವಹಣೆಯಿಲ್ಲದೇ ಆಲಯ ಶಿಥಿಲವಾಗಿತ್ತು. ದೇವರ ಪೂಜಾ ಕಾರ್ಯಗಳು ನಿಂತು ಹೋಗಿದ್ದವು. ಈ ಹಿನ್ನೆಲೆಯಲ್ಲಿ ಶ್ರೀ ವೆಂಕಟರಮಣಸ್ವಾಮಿ ದೇವಾಲಯ ಜೀರ್ಣೋದ್ಧಾರ ಟ್ರಸ್ಟ್ ಶಿಥಿಲಾವಸ್ಥೆಯಲ್ಲಿದ್ದ ಆಲಯದ
ವಾಸ್ತುಶಿಲ್ಪದಲ್ಲಿ ಯಾವುದೇ ಬದಲಾವಣೆಗಳಾಗದಂತೆ ಕೋಟ್ಯಂತರ ರು. ವೆಚ್ಚದಲ್ಲಿ ಆಕರ್ಷಕವಾಗಿ ಪುನರ್ ನಿರ್ಮಿಸಿದೆ.
 ಈಗಾಗಲೇ ಆಲಯ ನಿರ್ಮಾಣ ಕಾರ್ಯ ಅಂತಿಮ ಘಟ್ಟಕ್ಕೆ ಬಂದಿದ್ದು ಆಗಸ್ಟ್ 9 ರಿಂದ ಮೂರು ದಿನಗಳ ಕುಂಭಾಭಿಷೇಕ ಮತ್ತು ಸಾಮೂಹಿಕ ವಿವಾಹ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ತಿರುಮಲ ತಿರುಪತಿ ದೇವಸ್ಥಾನದ ಪ್ರಧಾನ ಅರ್ಚಕರು ಮತ್ತು ಆಗಮಿಕರು ನಡೆಸಿಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಆಲಯಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಗಮಿಕ ಪಂಡಿತ ನರಸಿಂಹಚಾರ್ಯ, ಪುರಾತನ ಶ್ರೀ ವೆಂಕಟರಮಣಸ್ವಾಮಿ ದೇವಾಲಯವು ಶಿಥಿಲಾವಸ್ಥೆಯಲ್ಲಿರುವುದನ್ನು ಮನಗಂಡು ಉದ್ಯಮಿ ಕೆ.ಎಂ. ಶ್ರೀನಿವಾಸ ಮೂರ್ತಿ ಸೇರಿದಂತೆ ಇತರರು ಪರಸ್ಪರ ಸಹಕಾರದಿಂದ ಆಲಯದ ಜೀರ್ಣೋದ್ಧಾರ ಕಾರ್ಯ ಕೈಗೊಂಡಿರುವುದು ಪುಣ್ಯದ ಕೆಲಸ. ಇಲ್ಲಿನ ದೇವಾಲಯದ ಕುಂಭಾಭಿಷೇಕ ಕಾರ್ಯಕ್ರಮವನ್ನು ತಿರುಪತಿ ತಿರುಮಲ ದೇವಸ್ಥಾನ ಮ್ನುಡೆಸಿ ಕೊಡಲಿದೆ ಎಂದು ತಿಳಿಸಿದರು.  
ಟ್ರಸ್ಟ್ ಅಧ್ಯಕ್ಷ ಕೆ.ಎಂ. ಶ್ರೀನಿವಾಸಮೂರ್ತಿ ಮಾತನಾಡಿ, ಶ್ರೀನಿವಾಸ ಸಾಗರ ಬಳಿ ನಿರ್ಮಾಣವಾಗಿರುವ ಶ್ರೀ ವೆಂಕಟರಮಣಸ್ವಾಮಿ ದೇವಾಲಯವು ತನ್ನದೇ ವೈಶಿಷ್ಟ್ಯತೆ, ಇತಿಹಾಸವನ್ನು ಹೊಂದಿದೆ. ಶಿಥಿಲಾವಸ್ಥೆಯಲ್ಲಿದ್ದ ದೇವಾಲಯ ಪುನರ್ನಿರ್ಮಿಸಿರುವುದಲ್ಲದೇ ಇಲ್ಲಿ, ದೇವರ ಕೃಪೆಯಿಂದ ಸಮುದಾಯ ಭವನ, ಮತ್ಸ್ಯಾಲಯ, ಉದ್ಯಾನವನ ನಿರ್ಮಾಣವಾಗುತ್ತ ಮತ್ತಷ್ಟು ಆಕರ್ಷಕ ತಾಣವಾಗಿ ರೂಪುಗೊಳ್ಳುತ್ತಿದೆ ಎಂದರು.
 ಅಲ್ಲದೇ ಶ್ರೀ ಧರ್ಮಸ್ಥಳ ಶ್ರೀ ವೀರೇಂದ್ರ ಹೆಗಡೆರವರು ಸಹ ಇದೀಗ ಶಿಥಿಲಾವಸ್ಥೆಯಲ್ಲಿರುವ ಶಿವನ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ತಮ್ಮ ಧಾರ್ಮಿಕ ಸಂಸ್ಥೆಯಿಂದ ಕೈಗೊಳ್ಳುವ ಭರವಸೆ ನೀಡಿರುವುದು ಸಂತಸದ ವಿಷಯವಾಗಿದೆ ಎಂದರು.  
ಶ್ರೀ ವೆಂಕಟರಮಣಸ್ವಾಮಿ ದೇವಾಲಯ ಜೀರ್ಣೋದ್ಧಾರ ಟ್ರಸ್ಟ್ನ ಅಧ್ಯಕ್ಷ ಕೆ.ಎಂ. ಶ್ರೀನಿವಾಸಮೂರ್ತಿ, ಸಂಚಾಲಕ ಎಂ. ಜಯರಾಮ್ ಮತ್ತು ಸದಸ್ಯರು, ತಿರುಮಲ ತಿರುಪತಿ ದೇವಸ್ಥಾನಮನ ಪ್ರಧಾನ ಅರ್ಚಕರಾದ ಶ್ರೀ ಸುಂದರಭಟ್ಟಾಚಾರ್ಯರು, ಆಗಮಿಕರಾದ ನರಸಿಂಹಚಾರ್ ಸೇರಿದಂತೆ ಪಂಡಿತರನ್ನು ಸ್ವಾಗತಿಸಿದರು. ಆಲಯದ ಸಮಗ್ರ ಇತಿಹಾಸವನ್ನು ವಿವರಿಸಿದರು. ನಂತರ ಟ್ರಸ್ಟ್ ಆಗಮಿಕರನ್ನು ಆತ್ಮೀಯವಾಗಿ ಸತ್ಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.