ಕೋಲಾರ

ಸಹಯೋಗ್ ಉದ್ಯೋಗ ಮೇಳದಲ್ಲಿ 93 ವಿದ್ಯಾರ್ಥಿನಿಯರಿಗೆ ಉದ್ಯೋಗ

Published On :

ಕ.ಪ್ರ.ವಾರ್ತೆ , ಕೋಲಾರ , ಜು.31
ಕಾಲೇಜು ಶಿಕ್ಷಣ ಇಲಾಖೆಯಿಂದ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಹೊಸ ಹೆಜ್ಜೆ ಯೋಜನೆಯಡಿ ಹಮ್ಮಿಕೊಂಡಿದ್ದ ಸಹಯೋಗ್ ಉದ್ಯೋಗ ಮೇಳದಲ್ಲಿ 93 ವಿದ್ಯಾರ್ಥಿನಿಯರು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವುದಕ್ಕೆ ಆಯ್ಕೆಯಾಗಿದ್ದಾರೆ.
ಒಟ್ಟು 650 ಮಂದಿ ಅಂತಿಮ ಪದವಿ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಸ್ಥಳದಲ್ಲೇ 93 ಮಂದಿ ವಿದ್ಯಾರ್ಥಿನಿಯರಿಗೆ ಉದ್ಯೋಗ ದೊರೆತಿದ್ದು, 250 ಮಂದಿಗೆ ಕೌಶಲ್ಯ ತರಬೇತಿ ನೀಡಿ ನಂತರ ಉದ್ಯೋಗಾವಕಾಶ ಕಲ್ಪಿಸಲು ಕಂಪನಿಗಳಿಂದ ಬಂದಿದ್ದ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇದೇ ಪ್ರಪ್ರಥಮ ಬಾರಿಗೆ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆದಿದ್ದು ಅಂತಿಮ ಪದವಿ ವಿದ್ಯಾರ್ಥಿನಿಯರು ಅತ್ಯಂತ ಉತ್ಸಾಹದಿಂದ ಸಂದರ್ಶನದಲ್ಲಿ ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ ಮೆಚ್ಚುಗೆ ಸಂಪಾದಿಸಿದರು.
ಉದ್ಯೋಗ ಮೇಳವನ್ನು ಉದ್ಘಾಟಿಸಿದ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಮೊಲಿಕಾ ಘೋಷ್ ಅವರು, ಈ ಮುಂಚೆ ಅಭ್ಯರ್ಥಿಗಳೇ ವ್ಯಾಸಂಗ ಮುಗಿದ ನಂತರ ಉದ್ಯೋಗಕ್ಕಾಗಿ ಅರ್ಜಿಗಳನ್ನು ಹಿಡಿದು ಕಂಪನಿಗಳನ್ನು ಸುತ್ತಬೇಕಾಗಿತ್ತು. ಈಗ ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆಯು ವಿವಿಧ ಕಂಪನಿಗಳ ಜತೆ ಚರ್ಚಿಸಿ ನಿಮ್ಮ ಬಳಿಗೆ ಬಂದು ಸಂದರ್ಶನ ನಡೆಸಿ ಉದ್ಯೋಗ ನೀಡುತ್ತಿರುವುದು ಸಂತಸ ಉಂಟು ಮಾಡಿದೆ ಎಂದರು.
ಉದ್ಯೋಗ ಅರ್ಜಿ ಹಾಕಿದವರಿಗೆಲ್ಲ ಸಿಗುವುದಿಲ್ಲ, ಯಾರಲ್ಲಿ ಉತ್ತಮ ಪ್ರತಿಭೆ, ಕೌಶಲ್ಯ ಹಾಗೂ ಜ್ಞಾನವಿರುತ್ತದೋ ಅಂತಹವರಿಗೆ ಸುಲಭವಾಗಿ ಒಳ್ಳೆಯ ಕಂಪನಿಗಳಲ್ಲಿ ಕೆಲಸ ಸಿಗುತ್ತದೆ, ವಿದ್ಯಾರ್ಥಿನಿಯರು ಅತ್ಮಸ್ಥೈರ್ಯ ಹಾಗೂ ವಿಶ್ವಾಸದಿಂದ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಸಂದರ್ಶನ ಎದುರಿಸಬೇಕೆಂದು ತಿಳಿಸಿದರು.
ಅಂತಿಮ ಪದವಿ ಮುಗಿಯುವ ವೇಳೆಗೆ ಉದ್ಯೋಗ ಅವಕಾಶ ನಿಮ್ಮ ಬಳಿಗೆ ಬರಲಿ ಎಂಬ ಉದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದು ವಿದ್ಯಾರ್ಥಿನಿಯರು ಧೈರ್ಯದಿಂದ ಮೇಳದಲ್ಲಿ ಭಾಗವಹಿಸುವ ಮೂಲಕ ಉತ್ತಮ ಭವಿಷ್ಯ ಕಂಡುಕೊಳ್ಳುವಂತೆ ಸಲಹೆ ನೀಡಿದರು.
ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ನಂದವಾಡಗಿ ಅವರು ಉದ್ಯೋಗ ಮೇಳದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಒಟ್ಟು 30 ಕಂಪನಿಗಳಿಂದ ಅಧಿಕಾರಿಗಳು ಸಂದರ್ಶನ ನಡೆಸಲು ಬಂದಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ, ಕಾಯಕ ಸಂಸ್ಥೆಯ ನೀಲಕಂಠ ಇದ್ದರು. ಕಾಲೇಜಿನ ಉಪನ್ಯಾಸಕಿ ವಿಜಯ ವಂದಿಸಿ, ಹೇಮಮಾಲಿನಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.