ಪೊಲೀಸರಿಂದ ಕಿರುಕುಳ: ವ್ಯಾಪಾರಸ್ಥರ ಪ್ರತಿಭಟನೆ
ಕ.ಪ್ರ. ವಾರ್ತೆ ಕೆಜಿಎಫ್ ಜೂ.24
ಕಳ್ಳರು ಕಳವು ಮಾಡಿಕೊಂಡು ಬಂದ ಚಿನ್ನದ ಒಡವೆಗಳನ್ನು ತಮ್ಮ ಅಂಗಡಿಯಲ್ಲಿ ಮಾರಿರುವುದಾಗಿ ಹೇಳಿಕೊಂಡು ಪೊಲೀಸರು ವಿನಾಕಾರಣ ಚಿನ್ನದ ಅಂಗಡಿ ವ್ಯಾಪಾರಸ್ಥರಿಗೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಸೋಮವಾರ ನಗರದ ಎಲ್ಲಾ ಚಿನ್ನದ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬೆಂಗಳೂರು, ಕೋಲಾರ ಮತ್ತು ಇತರೆ ಜಿಲ್ಲೆಗಳಲ್ಲಿ ಕಳ್ಳರು ಕಳವು ಮಾಡಿಕೊಂಡಿಕೊಂಡು ಬಂದ ಚಿನ್ನದ ಒಡವೆಗಳನ್ನು ತಮ್ಮ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ ಎಂದು ಹೇಳಿಕೊಂಡು ಬೆಂಗಳೂರಿನ ಸಿಸಿಬಿ ಪೊಲೀಸರು ಮತ್ತು ಇತರೆ ಠಾಣೆಗಳ ಪೊಲೀಸರು ಯಾವುದೇ ಮಾಹಿತಿ ನೀಡದೆ ಏಕಾಏಕಿ ಅಂಗಡಿ ಮತ್ತು ಮನೆಗಳ ಮೇಳೆ ದಾಳಿ ನಡೆಸಿ ಚಿನ್ನದ ಒಡವೆಗಳನ್ನು ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ವರ್ತಕರು ಆರೋಪಿಸಿದರು. ಇದರಿಂದ ತಮಗೆ ವ್ಯಾಪಾರ ವಹಿವಾಟುಗಳನ್ನು ನಡೆಸಲು ತೊಂದರೆಯಾಗುತ್ತಿದ್ದು ತಮಗೆ ನ್ಯಾಯ ಒದಗಿಸುವಂತೆ ಕೋರಿದರು. ಅಲ್ಲದೆ ಕಳ್ಳತನದ ಆರೋಪದ ಹಿನ್ನೆಲೆಯಲ್ಲಿ ಉರಿಗಾಂ ಪೊಲೀಸರು ಜಯಕುಮಾರ್ ಮತ್ತು ರಿಂಕೊ ಎಂಬುವರನ್ನು ಬಂಧಿಸಿ ಅವರು ನೀಡಿದ ಸುಳಿವಿನ ಮೇರೆಗೆ ಒಂದನೇ ಅಡ್ಡರಸ್ತೆಯಲ್ಲಿರುವ ಚಿನ್ನದ ಅಂಗಡಿಯ ಮಾಲೀಕರ ರಮೇಶ್‌ಚಂದ್ ಎಂಬುವರ ಅಂಗಡಿಗೆ ಹೋಗಿ ಕಳ್ಳತನದ ಮಾಲನ್ನು ನೀಡುವಂತೆ ಒತ್ತಾಯಿಸಿದರು. ಒಬ್ಬ ಕಳ್ಳನನ್ನು ಹಿಡಿದುಕೊಂಡು ಬಂದು ವಿವಿಧ ಚಿನ್ನದ ಅಂಗಡಿಗಳ ಮೇಲೆ ದಾಳಿ ನಡೆಸಿ ಅಂಗಡಿಯಿಂದ ಚಿನ್ನದ ವಸ್ತುಗಳನ್ನು ವಸೂಲಿ ಮಾಡಿಕೊಂಡು ಹೋಗುತ್ತಿರುವುದರಿಂದ ರೊಚ್ಚಿಗೆದ್ದ ವರ್ತಕರು ಎರಡು ದಿನಗಳ ವರೆಗೆ ತಮ್ಮ ಎಲ್ಲಾ ಚಿನ್ನದ ಅಂಗಡಿಗಳನ್ನು ಮುಚ್ಚಲಾಗುವುದು ಎಂದು ತಿಳಿಸಿ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯನ್ನು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕದ್ದ ಮಾಲು ತೆಗೆದುಕೊಳ್ಳಬೇಡಿ:
ಇದೇ ವೇಳೆ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಸಿ. ವೆಂಕಟೇಶ್ ಚಿನ್ನದ ವರ್ತಕರು ಕಳ್ಳರು ತಂದು ಮಾರುವ ಮಾಲನ್ನು ತೆಗೆದುಕೊಳ್ಳಬಾರದು. ಕೆಲ ಅಂಗಡಿಯವರು ಕಳ್ಳರು ವಿವಿಧ ಕಡೆಗಳಿಂದ ಕಳವು ಮಾಡಿಕೊಂಡು ಬಂದು ಮಾರಾಟ ಮಾಡುವ ಕಳ್ಳರ ಬಗ್ಗೆ ಸುಳಿವು ಇದ್ದರೂ ಅವರ ಬಗ್ಗೆ ಮಾಹಿತಿ ನೀಡುವುದಿಲ್ಲ. ಅನುಮಾನ ಬರುವ ವ್ಯಕ್ತಿಗಳಿಂದ ಚಿನ್ನದ ಒಡವೆಗಳನ್ನು ತೆಗೆದುಕೊಳ್ಳಬಾರದು. ಬದಲಿಗೆ ಅವರ ಬಗ್ಗೆ ಪೊಲೀಸರಿಗೆ ತಿಳಿಸಬೇಕು. ತಮ್ಮ ಸಮಸ್ಯೆಗಳ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವಂತೆ ತಿಳಿಸಿ ಸಮಾಧಾನಪಡಿಸಿದರು.
ಈ ವೇಳೆ ಚಿನ್ನದ ವರ್ತಕರ ಸಂಘದ ಅಧ್ಯಕ್ಷ ಅಶೋಕ್ ಭಾಪ್ನ, ಕಾರ್ಯದರ್ಶಿ ಸುದರ್ಶನ್ ಬೋರಾ, ಮಂಗಲ್‌ಚಂದ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

