ಒಂದೂವರೆ ವರ್ಷವಾದರೂ ಮುಗಿಯದ ಕಾಮಗಾರಿ
-ಆರ್. ರಜನೀಕಾಂತ್
ಕ.ಪ್ರ.ವಾರ್ತೆ ಕೆಜಿಎಫ್ ಜೂ. 25
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರ್ಮಾಣದ ಕಾಮಗಾರಿ ಒಂದೂವರೆ ವರ್ಷ ಕಳೆದರೂ ಇನ್ನೂ ಆಮೆಗತಿಯಲ್ಲಿ ಸಾಗುತ್ತಿದ್ದು, ಇನ್ನುವರೆಗೂ ಪೂರ್ಣಗೊಂಡಿಲ್ಲ.
ಕೆಜಿಎಫ್ನ ಉರಿಗಾಂಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಕಳೆದ 20-11- 2011ರಲ್ಲಿ ಎಸ್ಡಿಪಿ ಯೋಜನೆಯಡಿಯಲ್ಲಿ 75.63 ಲಕ್ಷ ವೆಚ್ಚದಲ್ಲಿ ಪ್ರಾಥಾಮಿಕ ಆರೋಗ್ಯ ಕೇಂದ್ರ ಕಟ್ಟಡದ ನಿರ್ಮಾಣಕ್ಕೆ ಅಂದಿನ ಶಾಸಕ ವೈ. ಸಂಪಂಗಿ ಚಾಲನೆ ನೀಡಿದ್ದರು.
ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧಿಗಳ ವಿತರಣಾ ಕೊಠಡಿ, ಪ್ರಥಮ ಚಿಕಿತ್ಸಾ ಕೊಠಡಿ, ದಾದಿಯರ ಕೊಠಡಿ, ವೈದ್ಯಕೀಯ ಕೊಠಡಿ, 9 ಹಾಸಿಗೆಯ ಸಾಮರ್ಥ್ಯದ ವಾರ್ಡ್, ವೈದ್ಯಾಧಿಕಾರಿಗಳ ಕೊಠಡಿ, ಹೆರಿಗೆ ಕೊಠಡಿ, ಶಸ್ತ್ರ ಚಿಕಿತ್ಸಾ ಕೊಠಡಿ, ಉಗ್ರಾಣ ಸೇರಿದಂತೆ ಕಚೇರಿ ಹಾಗೂ ಶೌಚಾಲಯದ ಹಲವಾರು ಸೌಲಭ್ಯವಿರುವ ಆರೋಗ್ಯ ಕೇಂದ್ರ ಕಟ್ಟಡದ ನಿರ್ಮಾಣಕ್ಕೆ ಚಾಲನೆ ನೀಡಿ ಒಂದೂವರೆ ವರ್ಷಗಳು ಕಳೆದಿದೆ. ಆದರೂ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ.
ಕೆಜಿಎಫ್ನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಮೂಲ ಸೌಕರ್ಯಗಳಿಲ್ಲ. ಉಪಕರಣಗಳಿಲ್ಲದೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆಯ ವ್ಯವಸ್ಥೆಗಳಿಲ್ಲದೆ ಪರದಾಡುತ್ತಿರುವ ಹಿನ್ನೆಲೆಯಲ್ಲಿ ನಗರ ಸಮೀಪವಿರುವ ಉರಿಗಾಂಪೇಟೆಯಲ್ಲಿ ನಿರ್ಮಿಸಲಾಗುತ್ತಿರುವ ಆರೋಗ್ಯ ಕೇಂದ್ರದಿಂದ ನಗರದ ಸ್ವಾಮಿನಾಥಪುರಂ, ಅಶೋಕ್ನಗರ, 4ನೇ ಬ್ಲಾಕ್, ಉರಿಗಾಂಪೇಟೆ ಸೇರಿದಂತೆ ಕೆಜಿಎಫ್ ಕ್ಷೇತ್ರದ 18 ಗ್ರಾಮದ ಲಕ್ಷಾಂತರ ಜನರಿಗೆ ಈ ಆಸ್ಪತ್ರೆ ಹೆಚ್ಚು ಅನುಕೂಲವಾಗಲಿದೆ. ಇದೇ ಆಸ್ಪತ್ರೆಯ ಪಕ್ಕದಲ್ಲಿ ಹಳೆಯ ಆರೋಗ್ಯ ಕೇಂದ್ರವಿದ್ದು, ರೋಗಿಗಳು, ಮಹಿಳೆಯರು, ವೃದ್ಧರು, ಮಕ್ಕಳು ಮತ್ತು ಹೆರಿಗೆಗಾಗಿ ತಿಂಗಳಿಗೆ 25- ರಿಂದ 30 ಗರ್ಭಿಣಿಯರು ಸೇರಿದಂತೆ ಪ್ರತಿದಿನ ನೂರಾರು ಮಂದಿ ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಅತಿ ಚಿಕ್ಕದಾದ ಆರೋಗ್ಯ ಕೇಂದ್ರದಲ್ಲಿ ಕೊಠಡಿಗಳು ಸೇರಿದಂತೆ ಇತರೆ ಸೌಲಭ್ಯಗಳ ಕೊರತೆಯಿಂದಾಗಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಂದ ಬರುವ ಜನಸಾಮಾನ್ಯರಿಗೆ ಆರೋಗ್ಯದ ದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ನಿರ್ಮಾಣದ ಕಾಮಗಾರಿಯನ್ನು ಬೆಂಗಳೂರಿನ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿಗೆ ಟೆಂಡರ್ ನೀಡಿ ವರ್ಷಗಳೇ ಕಳೆಯುತ್ತಿದ್ದರೂ ಕಟ್ಟಡದ ಕಾಮಗಾರಿ ಅರ್ಧ ಭಾಗಕ್ಕೆ ನಿಂತಿದೆ. ಈ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್ಗೆ ವಿಚಾರಿಸಿದಾಗ ಸೆಂಟ್ರಿಂಗ್ಗೆ ಕಾರ್ಮಿಕರು ಸಿಗುತ್ತಿಲ್ಲ ಎನ್ನುತ್ತಾರೆ. ಅದೇ ರೀತಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡದೆ ನೆಪಗಳನ್ನು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಆದ್ದರಿಂದ ಕೆಜಿಎಫ್ ಕ್ಷೇತ್ರದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಕ್ಷೇತ್ರದ ಶಾಸಕಿ ವೈ. ರಾಮಕ್ಕ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಆಸ್ಪತ್ರೆಯ ಕಾಮಗಾರಿ ಪೂರ್ಣಗೊಳಿಸಿ ಬಡವರು, ಗ್ರಾಮಸ್ಥರು, ಮಹಿಳೆಯರು ಮತ್ತು ಮಕ್ಕಳು ಈ ಆಸ್ಪತ್ರೆಯ ಸದುಪಯೋಗ ಪಡೆದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವರೆ ಎಂದು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

