ಆನೆ ಹಾವಳಿ ತಡೆಗೆ ತಡೆಗೋಡೆ ನಿರ್ಮಾಣ
ಕ.ಪ್ರ.ವಾರ್ತೆ ಮಾಲೂರು ಜೂ. 25
ಕೋಲಾರ ಜಿಲ್ಲೆಯ ಮಾಲೂರು- ಬಂಗಾರಪೇಟೆ ಕಡೆ ಆನೆಗಳ ದಾಳಿ ತಡೆಯಲು ಚಾಮರಾಜ ನಗರ, ಹಾಸನಗಳಲ್ಲಿ ಅಳವಡಿಸುತ್ತಿರುವ ಯೋಜನೆಗಳಂತೆ ಈ ಪ್ರದೇಶಗಳಲ್ಲೂ ಕಂದಕ, ತಡೆಗೋಡೆ ನಿರ್ಮಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ತಾಲೂಕಿನಲ್ಲಿ ಆನೆಯ ದಾಳಿಗೆ ತುತ್ತಾಗಿ ಮೃತಪಟ್ಟ ಚೂಕ್ಕಂಡಹಳ್ಳಿ ಗ್ರಾಮದ ರಾಮಕೃಷ್ಣಪ್ಪ ಮನೆಗೆ ಮಂಗಳವಾರ ಭೇಟಿ ನೀಡಿ ಒಂದು ಲಕ್ಷ ಮೊತ್ತದ ಚೆಕ್ ವಿತರಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಪತ್ರಕರ್ತರೊಡನೆ ಮಾತನಾಡಿ, ಸದ್ಯಕ್ಕೆ ಒಂದು ಲಕ್ಷ ರು.ಚೆಕ್ ನೀಡಿದ್ದು, ಉಳಿದ ನಾಲ್ಕು ಲಕ್ಷ ರು.ಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದರು.
ರಾಜ್ಯದ ಇತರೆ ಹಲವು ಭಾಗದಲ್ಲಿ ಪಟ್ಟಣಗಳಲ್ಲಿ ಆನೆಗಳ ಪ್ರವೇಶ ಸಾಮಾನ್ಯವಾಗಿದ್ದು, ಬೆಳೆ ಹಾನಿ ಮಾಡಲು ಬಂದಾಗ ಮನುಷ್ಯ ಹಾಗೂ ಆನೆಗಳೊಡನೆ ಘರ್ಷಣೆಯಾಗುತ್ತಿದೆ. ಆದರೆ, ಈ ಭಾಗದಲ್ಲಿ ಆನೆಗಳ ದಾಳಿ ಇದುವರೆಗೂ ನಡೆದಿರಲಿಲ್ಲ.
ಕಳೆದ ಮೂರು ತಿಂಗಳಿಂದ ಆನೆಗಳ ಹಾವಳಿ ಪದೇ ಪದೇ ನಡೆಯುತ್ತಿದೆ. ಈ ಭಾಗದಲ್ಲಿ ಕಾಡಿನಿಂದ ನಾಡಿಗೆ ಆನೆ ಬಂದಾಗ ಜನರಲ್ಲಿ ಕುತೂಹಲ ಸಾಮಾನ್ಯ.
ಅವುಗಳನ್ನು ಹೋಗುವಾಗ ದೂರದಲ್ಲಿ ನಿಂತು ಸುಮ್ಮನೆ ನೋಡಿದರೆ ಯಾವುದೇ ಪ್ರಾಣಪಾಯ ಇರುವುದಿಲ್ಲ. ಆದರೆ, ಆನೆಗಳ ಹತ್ತಿರ ಹೋಗಬೇಕೆಂಬ ಜನರ ಆಸೆ ಪ್ರಾಣಾಪಾಯ ತಂದೊಡ್ಡಿಕೊಳ್ಳುತ್ತಿದ್ದಾರೆ. ಜನರು ಆನೆಯನ್ನು ಹತ್ತಿರದಿಂದ ನೋಡಬೇಕೆಂಬ ಕುತೂಹಲ ಬಿಡಬೇಕು ಎಂದು ಮನವಿ ಮಾಡಿದರು.
ಈ ಭಾಗದ ಶಾಸಕರೊಡನೆ ಚರ್ಚೆ ನಡೆಸಿ ಪರಿಸ್ಥಿತಿ ಅವಲೋಕಿಸಿ ಆನೆಗಳ ಹಾವಳಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ನಂತರ ಆನೆ ದಾಳಿಗೆ ಸಿಲುಕಿ ಮೃತಪಟ್ಟ ಕಾಟೇರಿ ಗ್ರಾಮದ ಮಲ್ಲಯ್ಯ ಹಾಗೂ ಮಲ್ಲಪ್ಪನಹಳ್ಳಿಯ ಚಂದ್ರಪ್ಪ ಕುಟುಂಬಕ್ಕೆ ತಲಾ ಒಂದು ಲಕ್ಷ ರು.ಗಳ ಚೆಕ್ ವಿತರಿಸಿದರು.
ಶಾಸಕ ಮಂಜುನಾಥ್ ಗೌಡ,ರಾಜ್ಯ ಅರಣ್ಯ ಸಂರಕ್ಷಣಾಧಿಕಾರಿ ರಂಗೇಗೌಡ, ಜಿಲ್ಲಾ ಅರಣ್ಯಾಧಿಕಾರಿ ಮುನೇಗೌಡ, ತಾಲೂಕು ಅರಣ್ಯಾಧಿಕಾರಿ ಸುಬ್ಬರಾವ್, ರಾಜ್ಯ ಪ್ರಧಾನ ವನ್ಯ ಜೀವಿ ಅರಣ್ಯಾಧಿಕಾರಿ ದಿಲೀಪ್ ಶರ್ಮ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲೋಕೇಶ್, ಆಶೋಕ್ ಕುಮಾರ್, ಪ್ರಮೀಣ್ ಕುಮಾರ್, ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

