ಸಂತ್ರಸ್ತರ ದೇಣಿಗೆ ದುರ್ಬಳಕೆಯಾಗದಿರಲಿ
-ಪಾ.ಶ್ರೀ.ಅನಂತರಾಮ್
ಕ.ಪ್ರ. ವಾರ್ತೆ ಕೋಲಾರ ಜೂ.25
ಪ್ರಕೃತಿ ವಿಕೋಪದಿಂದ ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ನೊಂದಿರುವ ಜನರಿಗೆ ಸಾಂತ್ವನದ ಜತೆಗೆ ಪರಿಹಾರ ಕಲ್ಪಿಸಲು ಭಾರತೀಯರು ಮಾತ್ರವಲ್ಲದೆ ವಿದೇಶಿಗರು ಕೈಲಾದಷ್ಟು ದೇಣಿಗೆ ನೀಡಲಾರಂಭಿಸಿದ್ದಾರೆ. ಆದರೆ, ಈ ನಿಧಿ ದುರ್ಬಳಕೆಯಾಗದ ರೀತಿಯಲ್ಲಿ ಸಂಬಂಧಪಟ್ಟವರು ಎಚ್ಚರಿಕೆ ವಹಿಸಬೇಕಾಗಿದೆ.
ನೆರೆ ಹಾವಳಿಗೆ ಸಿಲುಕಿ ಸಾವಿರಾರು ಜನರು ಸತ್ತಿದ್ದಾರೆ. ಸಾವಿರಾರು ಯಾತ್ರಾರ್ಥಿಗಳು ನಾಪತ್ತೆಯಾಗಿದ್ದಾರೆ. ಬದುಕುಳಿಯಲು ಹಂಬಲಿಸುತ್ತಿರುವ ಸಂತ್ರಸ್ತರ ರಕ್ಷಣಾ ಕಾರ್ಯ ಮುಂದುವರಿದಿದೆ.
ಉತ್ತರಾಖಂಡದ ಸರ್ಕಾರ ಮಾತ್ರವಲ್ಲದೆ, ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ನೊಂದವರ ಸಹಾಯಕ್ಕೆ ದೇಣಿ ನೀಡಿದೆ. ವಿವಿಧ ಸಂಘ ಸಂಸ್ಥೆಗಳು, ದಾನಿಗಳು, ಉದ್ಯಮಿಗಳು, ಮಠ-ಮಾನ್ಯಗಳು ಸಹ ತಮ್ಮ ಶಕ್ತಾನುಸಾರ ದೇಣಿಗೆ ನೀಡುತ್ತಿದ್ದು, ಸಂಬಂಧಪಟ್ಟವರು ಈ ದೇಣಿಗೆ ನೊಂದವರ ಕೈ ಸೇರುವಂತೆ ಕ್ರಮ ಕೈಗೊಳ್ಳದಿದ್ದರೆ ನೊಂದವರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ.
ಸಂಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡುವುದು ಭಾರತೀಯರ ಧರ್ಮವಾಗಿದೆ. ಪ್ರವಾಹ, ಭೂಕಂಪ, ಭೂಪಾಲ್ ಅನಿಲ ದುರಂತ ಪ್ರಕರಣ, ಸಾಂಕ್ರಾಮಿಕ ರೋಗ, ಯುದ್ಧ ಇನ್ನಿತರ ಸಂದರ್ಭಗಳಲ್ಲಿ ನೊಂದವರಿಗೆ ಮಾನವೀಯತೆಯಿಂದ ನೀಡಿರುವ ದೇಣಿಗೆಗಳಿಗೆ ಲೆಕ್ಕವಿಲ್ಲ. ಆದರೆ, ಜನತೆ ನೀಡಿದ ಹಣ, ಆಹಾರ, ವಸ್ತ್ರ ಹಾಗೂ ಸಾಮಗ್ರಿಗಳು ಎಷ್ಟರ ಮಟ್ಟಿಗೆ ಸದುಪಯೋಗವಾಗಿದೆ ಎಂಬುದರ ಬಗ್ಗೆ ಪರಿಹಾರ ಕಾರ್ಯದ ಉಸ್ತುವಾರಿ ಹೊತ್ತಿದ್ದವರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. 2004ರಲ್ಲಿ ಸಂಭವಿಸಿದ ಸುನಾಮಿಯಲ್ಲಿ ಪ್ರಾಣ ಕಳೆದುಕೊಂಡವರು, ಆಸ್ತಿ- ಪಾಸ್ತಿ ನಷ್ಟ ಹೊಂದಿದವರು, ಶಾಶ್ವತ ಅಂಗವೀಕಲತೆಯಿಂದ ಈಗಲೂ ಪರಿತಪಿಸುತ್ತಿರುವವರು ಅದೆಷ್ಟೋ ಮಂದಿ.
ಸುನಾಮಿ ಸಂತ್ರಸ್ತರಿಗೆ ಆಗ ವಿವಿಧ ಕಡೆಗಳಿಂದ ಹರಿದು ಬಂದ ದೇಣಿಗೆಗೆ ಇನ್ನು ಲೆಕ್ಕ ಸಿಕ್ಕಿಲ್ಲ. ಕರ್ನಾಟಕದಿಂದಲೂ ಸಾಕಷ್ಟು ನಿಧಿ ಸಂಗ್ರಹ ಆಗಿತ್ತು. ಅನೇಕರು ನೆರೆ ಸಂತ್ರಸ್ತರಿಗಾಗಿ ತಮ್ಮ ಮನೆಯಲ್ಲಿದ್ದ ಬಟ್ಟೆಗಳನ್ನು ದಾನ ಮಾಡಿದರು. ಕೆಲವರು ನಮ್ಮ ಮನೆಯಲ್ಲಿನ ಹಳೆ ಬಟ್ಟೆಗಳು ಖಾಲಿಯಾದರೆ ಸಾಕೆಂದು ಚಿಂದಿ ಬಟ್ಟೆ ನೀಡಿ ಉದಾರಿಗಳೆಂದು ಕರೆಸಿಕೊಂಡರು. ಆದರೆ, ಈ ಬಟ್ಟೆಗಳು ಸಕಾಲಕ್ಕೆ ಸುನಾಮಿಪೀಡಿತ ಪ್ರದೇಶಗಳಿಗೆ ಸಾಗಾಣೆ ಮಾಡಲು ಆಗಲೇ ಇಲ್ಲ. ಕೆಲವು ಗುಜರಿ ಅಂಗಡಿಗಳವರು ದಾನ ಮಾಡುವುದರಲ್ಲಿ ನಾವೇನು ಕಡಿಮೆ ಇಲ್ಲವೆಂದು ಸಂಗ್ರಹಿಸಿದ ಬಟ್ಟೆಗಳನ್ನು ಬೆಂಗಳೂರಿನ ಶಿವಾಜಿನಗರದ ಫುಟ್ಪಾತ್ಗಳಲ್ಲಿ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಂಡರೆ ಮತ್ತೆ ಕೆಲವರು ಹಳೆ ಬಟ್ಟೆಗಳನ್ನು ರಾಶಿ ಹಾಕಿ ಯಾರು ಬೇಕಾದರೂ ತೆಗೆದುಕೊಂಡು ಹೋಗಬಹುದೆಂದು ಫಲಕ ಹಾಕಿದ್ದು ಉಂಟು.
ಎಷ್ಟೋ ಮಂದಿ 500, 1000 ಗಳನ್ನು ಚೆಕ್ ಮೂಲಕ ನೀಡಿದ್ದರಾದರೂ ಬ್ಯಾಂಕುಗಳಲ್ಲಿ ಅವು ತಿರಸ್ಕಾರಗೊಂಡಿದ್ದವು, ಕೆಲವರು ದೇಣಿಗೆ ಸಂಗ್ರಹ ಮಾಡಿ ಪ್ರಚಾರ ಗಿಟ್ಟಿಸಿಕೊಂಡು ಸದರಿ ಹಣವನ್ನು ಸರ್ಕಾರ ಇಲ್ಲವೇ ಸಂತ್ರಸ್ತರಿಗೆ ತಲುಪಿಸದ ನಿದರ್ಶಗಳಿಗೆ ಲೆಕ್ಕವಿಲ್ಲ.
ಸುನಾಮಿ ನಂತರ ದೇಶದಲ್ಲಿ ಅತಿ ದೊಡ್ಡ ಪ್ರವಾಹ ಉತ್ತರಾಖಂಡದಲ್ಲಿ ಉಂಟಾಗಿ ಸಾವಿರಾರು ಮಂದಿ ಸತ್ತಿದ್ದಾರೆ. ಕೋಟ್ಯಂತರ ರು. ಆಸ್ತಿ-ಪಾಸ್ತಿ ನಷ್ಟವಾಗಿದೆ. ರಸ್ತೆ, ಸೇತುವೆ, ಮನೆ, ಗುಡಿ-ಗೋಪುರಗಳ ನಿರ್ಮಾಣವಾಗಲು ಸಾಕಷ್ಟು ಹಣ ಮತ್ತು ಪುನರ್ವಸತಿ ಕಾರ್ಯಗಳು ಮುಗಿಯಲು ವರ್ಷಗಳು ಹಿಡಿಯುವುದರಿಂದ ಸಹೃದಯಿಗಳು ಈಗಾಗಲೇ ದೇಣಿಗೆ ನೀಡುವುದಕ್ಕೆ ಆರಂಭಿಸಿದ್ದಾರೆ.
ಪರಿಹಾರ ನಿಧಿಗಾಗಿ ಕೇಂದ್ರ ಸರ್ಕಾರವು ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ. ನೊಂದವರಿಗೆ ಸಹಾಯ ಮಾಡುವ ಮನಸ್ಸು ದೇಶವಾಸಿಗಳಲ್ಲಿ ಇರುವುದರಿಂದ ಸಾಕಷ್ಟು ನಿಧಿ ಸಂಗ್ರಹಣೆ ಆಗುವುದರಲ್ಲಿ ಅನುಮಾನವಿಲ್ಲ. ಆದರೆ, ಜನತೆ ನೀಡುವ ಹಣವನ್ನು ಮಧ್ಯವರ್ತಿಗಳು, ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳದ ರೀತಿಯಲ್ಲಿ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳದಿದ್ದರೆ ಪುನರ್ವಸತಿ ಯೋಜನೆಗಳಿಗೆ ಬೆಲೆ ಇರುವುದಿಲ್ಲ.
ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ನಿಧಿ ಸಂಗ್ರಹ ಮಾಡುವವರು ಕಡ್ಡಾಯವಾಗಿ ಸರ್ಕಾರದ ಅನುಮತಿ ಪಡೆಯಬೇಕು, ಸಂಗ್ರಹಣೆ ಮಾಡಿದ ಹಣವನ್ನು ಸಾರ್ವಜನಿಕರ ಮುಂದೆ ಲೆಕ್ಕ ಹಾಕಿ ಒಟ್ಟು ಮೊತ್ತವನ್ನು ಪ್ರಕಟಿಸಬೇಕು, ನಿಧಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ರಸೀದಿ ಪಡೆಯಬೇಕು, ಜಿಲ್ಲಾ ಆಡಳಿತದಿಂದ ನಿಧಿಯು ಸಕಾಲಕ್ಕೆ ಸಂಬಂಧಪಟ್ಟವರಿಗೆ ತಲುಪಿದೆಯೇ ಇಲ್ಲವೇ ಎಂಬುದರ ಬಗ್ಗೆ ನಿಗಾ ವಹಿಸಬೇಕು, ಅನಧಿಕೃತ ಸಂಘ- ಸಂಸ್ಥೆಗಳು ಹಣ ಸಂಗ್ರಹ ಮಾಡುವುದಕ್ಕೆ ಕಡಿವಾಣ ಹಾಕಿದಾಗ ಮಾತ್ರ ದಾನಿಗಳು ನೀಡುವ ಹಣ ನೊಂದವರಿಗೆ ತಲುಪಿಸಲು ಸಾಧ್ಯ.
ಪ್ರವಾಹ ಸಂತ್ರಸ್ತರಿಗಾಗಿ ಬಿಜೆಪಿ ನಿಧಿ ಸಂಗ್ರಹ
ಕೋಲಾರ: ಉತ್ತರಾಖಂಡದ ಪ್ರವಾಸ ಸಂತ್ರಸ್ತರಿಗಾಗಿ ಜಿಲ್ಲಾ ಬಿಜೆಪಿಯಿಂದ ಮಂಗಳವಾರ ನಿಧಿ ಸಂಗ್ರಹಣೆ ಮಾಡಲಾಯಿತು.
ನಗರದ ಮಹಾತ್ಮಗಾಂಧಿ ಉದ್ಯಾನವನದಿಂದ ನಿಧಿ ಸಂಗ್ರಹಣೆಗಾಗಿ ಪಾದಯಾತ್ರೆ ಆರಂಭಿಸಿದ ಬಿಜೆಪಿ ಮುಖಂಡರು ಎಂ.ಜಿ.ರಸ್ತೆ ಮೂಲಕ ದೊಡ್ಡಪೇಟೆ, ಶಾರದಚಿತ್ರ ಮಂದಿರ ರಸ್ತೆ, ಕಾಳಮ್ಮಗುಡಿ ಬೀದಿ, ಅಮ್ಮವಾರಪೇಟೆ ಮೂಲಕ ನಲ್ಲಗಂಗಮ್ಮ ವೃತ್ತದವರೆಗೆ ತೆರಳಿ ಸಾರ್ವಜನಿಕರು, ವ್ಯಾಪಾರಿಗಳಿಂದ ನಿಧಿ ಸಂಗ್ರಹಣೆ ಮಾಡಿದರು.
ನಂತರ ನಿಧಿಯನ್ನು ಸಾರ್ವಜನಿಕರ ಎದುರು ಲೆಕ್ಕ ಹಾಕಿ 31230 ದೇಣಿಗೆ ಸಂಗ್ರಹಣೆ ಆಗಿದ್ದು, ಇದನ್ನು ರಾಜ್ಯ ಬಿಜೆಪಿ ಕಚೇರಿ ಮೂಲಕ ಕೇಂದ್ರ ಬಿಜೆಪಿ ಕಚೇರಿಗೆ ತಲುಪಿಸುವುದಾಗಿ ನಿಧಿ ಸಂಗ್ರಹಣೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೀಲಿ ಕೆ.ಜಯಶಂಕರ್ ತಿಳಿಸಿದರು.
ನೊಂದ ಜನರಿಗೆ ಕೇವಲ ಒಂದು ದಿನದಲ್ಲಿ ನಿರೀಕ್ಷೆಗೆ ಮೀರಿ ದೇಣಿಗೆ ನೀಡಿರುವ ಜನತೆಗೆ ಅವರು ಕೃತಜ್ಞತೆ ಅರ್ಪಿಸಿ, ಇದೇ ರೀತಿ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡುವ ಮೂಲಕ ನೆರೆ ಸಂತ್ರಸ್ತರಿಗೆ ಸಹಾಯ ಮಾಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡ ಜೆ.ಎಸ್. ಪಾರ್ಥಸಾರಥಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಓಂಶಕ್ತಿ ಚಲಪತಿ, ಕಾರ್ಯಾಲಯ ಕಾರ್ಯದರ್ಶಿ ಮು.ರಾಘವೇಂದ್ರ ಮುಖಂಡರಾದ ಸುಬ್ಬರಾಯಪ್ಪ, ಜಯರಾಮರೆಡ್ಡಿ, ಅಮರನಾರಾಯಣರೆಡ್ಡಿ, ಬೆಗ್ಲಿ ಸಿರಾಜ್, ಲಕ್ಷಣ್ ಗೌಡ, ನರಸಿಂಹಮೂರ್ತಿ, ಕೀಲುಕೋಟೆ ರವಿ, ತಿಮ್ಮರಾಯಪ್ಪ, ರಮೇಶ್, ಮಂಜು, ಸತೀಶ್, ಸಿ.ಎಂ. ನಾರಾಯಣಸ್ವಾಮಿ, ಹರೀಶ್, ರತ್ನಮ್ಮ, ಮಂಜುಳ, ಮಮತ, ಅಪ್ಪಿ ಗೌಡ, ಕನಕ ಮಂಜು ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

