ಕೋಲಾರ

ಅನುಷ್ಠಾನ ಖಾತ್ರಿ ಸಮಗ್ರ ಪರಿಶೀಲನೆ

Published On :

ಕನ್ನಡಪ್ರಭ ವಾರ್ತೆ ಕೋಲಾರ ಜೂ.27
ಕೇಂದ್ರ ಸರ್ಕಾರದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಾಲೂಕಿನ ವಿವಿಧ ಕಡೆ ನಡೆದಿರುವ ಕಾಮಗಾರಿಗಳು, ಅವುಗಳ ಗುಣಮಟ್ಟ, ಕೂಲಿಕಾರರಿಗೆ ನೀಡಲಾಗಿರುವ ಜಾಬ್ ಕಾರ್ಡ್‌ಗಳ ಪರಿಶೀಲನೆಗಾಗಿ ಸಾಮಾಜಿಕ ಪರಿಶೋಧನೆ ನಡೆಸಿ. ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸುವುದಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿ ಲೋಕೇಶ್ ತಿಳಿಸಿದ್ದಾರೆ.
 ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳ ಸಾಮಾಜಿಕ ಪರಿಶೋಧನೆ ಕುರಿತು ಗ್ರಾಮ ಸಂಪನ್ಮೂಲ ವ್ಯಕ್ತಿಗಳಿಗೆ ಹಮ್ಮಿಕೊಂಡಿದ್ದ 2 ದಿನಗಳ ತರಬೇತಿ ಅಂಗವಾಗಿ ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಯೋಜನೆ ಅನುಷ್ಠಾನ ಕುರಿತು ಪರಿಶೀಲನೆಗೆ ಆಗಮಿಸಿದ್ದ 35 ಸದಸ್ಯರ ತಂಡದ ನೇತೃತ್ವ  ವಹಿಸಿದ್ದ ಅವರು ಮಾತನಾಡಿದರು.
ಮನೆ, ಮನೆಗೆ ಭೇಟಿ: ತಮ್ಮೊಂದಿಗೆ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ರಾಜಶೇಖರ್, ಶ್ರೀಕಂಠ, ಅನಿತಾ ಮತ್ತಿತರರು ಪಾಲ್ಗೊಂಡಿದ್ದು, ಗ್ರಾಮ ಪಂಚಾಯತಿ ಕಚೇರಿಯಲ್ಲಿ ನರೇಗಾ ಯೋಜನೆ ಅನುಷ್ಠಾನದ ಕಡತಗಳ ಪರಿಶೀಲನೆ, ಕಾಮಗಾರಿ ವೀಕ್ಷಣೆ, ಕೂಲಿ ಕಾರ್ಮಿಕರ ಪ್ರತಿಯೊಂದು ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.
ಕಡತಗಳ ಪರಿಶೀಲನೆ: ಪರಿಶೀಲನೆಗಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡ ಗ್ರಾಮ ಪಂಚಾಯಿತಿಯಲ್ಲಿನ ಕಡತಗಳ ಪರಿಶೀಲನೆ ನಡೆಸಿ ನಡೆದಿರುವ ಕಾಮಗಾರಿಗಳ ವಿವರ, ಬಿಡುಗಡೆಯಾಗಿರುವ ಅನುದಾನ, ಪ್ರಗತಿ ಮತ್ತಿತರ ಅಂಶಗಳನ್ನು ದಾಖಲಿಸಿತು.
ಮೆಚ್ಚುಗೆ: ಮತ್ತೊಂದು ತಂಡ ಗ್ರಾಮದಲ್ಲಿ ನಡೆದಿರುವ ನರೇಗಾ ಕಾಮಗಾರಿಗಳನ್ನು ಪರಿಶೀಲಿಸಿತು. ಈ ತಂಡ ಗ್ರಾಮದಲ್ಲಿ ಬೆಟ್ಟದ ತಪ್ಪಲಿಂದ ಸರಾಗವಾಗಿ ನೀರು ಹೋಗಲು ನಿರ್ಮಿಸಿರುವ ಚರಂಡಿ ಕಾಮಗಾರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿತು.ಜಾಬ್ ಕಾರ್ಡ್ ಪರಿಶೀಲನೆ: ಮೂರನೇ ತಂಡ ಗ್ರಾಮದ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದಿರುವ ಕೂಲಿ ಕಾರ್ಮಿಕರ ಮನೆಗಳಿಗೆ ಭೇಟಿ ನೀಡಿ ವಿವರ ದಾಖಲಿಸಿತು. ಜಾಬ್ ಕಾರ್ಡ್ ಇಲ್ಲದಿರುವುದು, ಕೆಲವರಿಗೆ ಜಾಬ್ ಕಾರ್ಡ್ ಮಾಹಿತಿ ಕೊರತೆ, ಬ್ಯಾಂಕ್ ಪಾಸ್‌ಬುಕ್ ಇಲ್ಲದಿರುವುದು ಮತ್ತಿತರ ಅಂಶಗಳನ್ನು ಸಂಗ್ರಹಿಸಿತು.
ಹಲವು ಕೊರತೆಗಳ ನಡುವೆಯೇ ಕೂಲಿ ಕಾರ್ಮಿಕರಿಗೆ ರು.155  ಕೂಲಿಯನ್ನು ಸಮರ್ಪಕವಾಗಿ ವಿತರಿಸಿರುವ ಕುರಿತು ಸದಾಭಿಪ್ರಾಯ ವ್ಯಕ್ತವಾಯಿತು.  
ನರೇಗಾ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಗ್ರಾಮಸಭೆ ನಡೆಸಿರುವುದು, ಕ್ರಿಯಾ ಯೋಜನೆ ತಯಾರು, ಕಾರ್ಯಾನುಷ್‌ಠಾನ, ಅಂದಾಜು ಪಟ್ಟಿ ತಯಾರಿಕೆ, ಆಡಳಿತಾತ್ಮಕ ಮಂಜೂರಾತಿ ಪಡೆದಿರುವುದು, ಕಾಮಗಾರಿ ಪ್ರಾರಂಭ ಪತ್ರ, ಯಂತ್ರಗಳನ್ನು ಬಳಸಿದ್ದರೆ ಅದಕ್ಕೆ ಅನುಮತಿ ಪತ್ರ ಮತ್ತಿತರ ದಾಖಲೆಗಳನ್ನು ಸಹ ತಂಡ ಈ ಸಂದರ್ಭದಲ್ಲಿ ಪರಿಶೀಲಿಸಿತು.
ಯೋಜನೆ ಅನುಷ್‌ಠಾನದಲ್ಲಿ ಹಣಕಾಸು ನಿರ್ವಹಣೆ, ಕಾಮಗಾರಿಯ ಗುಣಮಟ್ಟ, ಅಳತೆ ಪರಿಶೀಲನೆ, ಕೂಲಿಕಾರರ ಬ್ಯಾಂಕ್ಖಾತೆಗಳಿಗೆ ಕೂಲಿ ಪಾವತಿ, ಸಾಮಗ್ರಿ ಬಿಲ್ಲುಗಳ ಪಾವತಿ, ಕಾಮಗಾರಿಯ ಮೂರು ಹಂತದ ಛಾಯಾಚಿತ್ರಗಳು, ಮುಕ್ತಾಯದ ಪ್ರಮಾಣ ಪತ್ರ ಹೀಗೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ದಾಖಲಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಪಂ ಕಚೇರಿ ಸಹಾಯಕ ನಿರ್ದೇಶಕ ಚನ್ನಬಸವಣ್ಣ, ಸಮಾಜಕ್ಕೆ ಉದ್ಯೋಗದ ಖಾತರಿ ನೀಡುವ ಈ ಯೋಜನೆಯ ಸಮರ್ಪಕ ಅನುಷ್ಟಾನದ ಚಿತ್ರಣ, ಲೋಪ ದೋಷಗಳನ್ನು ತಂಡ ಪಟ್ಟಿ ಮಾಡುತ್ತಿದ್ದು, ಇದರಿಂದ ಮುಂದೆ ಯೋಜನೆ ಜಾರಿಗೆ ಸಹಾಯವಾಗಲಿದೆ ಎಂದರು.
ತಂಡದೊಂದಿಗೆ ನಿರ್ಮಲ ಭಾರತ ಅಭಿಯಾನದ ಸಂಯೋಜಕ ಜಿ.ಶ್ರೀನಿವಾಸ್, ಜಿಲ್ಲಾ ಸಂಯೋಜಕ ವೆಂಕಟರಮಣಪ್ಪ ಮತ್ತಿತರರು ಇದ್ದರು. ತಂಡದ ಪರಿಶೀಲನೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ರತ್ನಮ್ಮ, ಪಿಡಿಒ ಮಂಜುನಾಥಸ್ವಾಮಿ, ಕಾರ್ಯದರ್ಶಿ ನಾರಾಯಣಪ್ಪ ಮತ್ತಿತರರು ಸಹಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.