ಟೇಕಲ್ ಆಸ್ಪತ್ರೆಗೆ ಜಿಪಂ ಸದಸ್ಯೆ ಭೇಟಿ
ಆಸ್ಪತ್ರೆಯಲ್ಲಿಲ್ಲದ ವೈದ್ಯಾಧಿಕಾರಿಗೆ ಕರೆ ಮಾಡಿ ತರಾಟೆ ತೆಗೆದುಕೊಂಡ ನಂಜೇಗೌಡರು
ಕ.ಪ್ರ. ವಾರ್ತೆ ಟೇಕಲ್ ಜೂ. 28
ಮಾಲೂರು ತಾಲೂಕಿನಾದ್ಯಂತ ಹಬ್ಬಿರುವ ಡೆಂಘೀ ಭೀತಿಯಿಂದ ಟೇಕಲ್ ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡ ಹಾಗೂ ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡರು ಟೇಕಲ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.
ಈ ವೇಳೆ ಟೇಕಲ್ ಆಸ್ಪತ್ರೆಯ ವೈದ್ಯಾಧಿಕಾರಿ ಆಸ್ಪತ್ರೆಯಲ್ಲಿರಲಿಲ್ಲ. ಕೆ.ವೈ. ನಂಜೇಗೌಡರು ವೈದ್ಯರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಸಭೆಗಳಿಗೆ ಹೋಗುವುದನ್ನು ಸ್ವಲ್ಪ ನಿಲ್ಲಿಸಿ ಆಸ್ಪತ್ರೆಯಲ್ಲಿ ದಿನನಿತ್ಯ ರೋಗಿಗಳಿಗೆ ಚಿಕಿತ್ಸೆ ನೀಡಬೇಕೆಂದು ತಿಳಿಸಿದರು. ಹಾಗೂ ಟೇಕಲ್ ಆಸ್ಪತ್ರೆ ಒಳಗೆ ಮತ್ತು ಹೊರಗೆ ಬಹಳ ಅನೈರ್ಮಲ್ಯದಿಂದ ಕೂಡಿದ್ದು ಕೆಲಸ ನಿರ್ವಹಿಸುವ ವಹೀದ್ ಎಂಬವರಿಗೆ ಆಸ್ಪತ್ರೆ ಸ್ವಚ್ಛತೆ ಕಾಪಾಡಲು ತಿಳಿಸಿದರು. ಜಿಪಂ ವತಿಯಿಂದ ಆಸ್ಪತ್ರೆಯ ಮೇಲ್ಚಾವಣಿಗೆ ಕಾಂಕ್ರಿಟ್ ಮಾಡಲು ಎರಡುವರೆ ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದು ಕಾಮಗಾರಿಯ ಪ್ರಗತಿಯನ್ನು ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡರು ಇದೇ ವೇಳೆಯಲ್ಲಿ ವೀಕ್ಷಿಸಿದರು.
ಸ್ಥಳೀಯ ಕೆ.ಜಿ.ಹಳ್ಳಿ ಗ್ರಾಪಂನ ಮಾಜಿ ಅಧ್ಯಕ್ಷ ಮಂಜುನಾಥ್ರವರು ರಾತ್ರಿ ವೇಳೆಯಲ್ಲಿ ವೈದ್ಯರ ಕೊರತೆ ಇದ್ದು ದಯಮಾಡಿ ನಿರಂತರ ಸೇವೆಗಾಗಿ ವೈದ್ಯರನ್ನು ನೇಮಿಸಬೇಕಾಗಿ ಜಿಪಂ ಸದಸ್ಯೆಗೆ ಮನವಿ ಮಾಡಿದರು ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯೆ ರತ್ನಮ್ಮ ನಂಜೇಗೌಡರು ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ಬಳಿ ಮಾತನಾಡುವುದಾಗಿ ತಿಳಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ವಿ. ಚಂದ್ರಶೇಖರ್ ಗೌಡ, ಟೇಕಲ್ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಜಿ. ರಾಮಮೂರ್ತಿ, ರಾಮಕೃಷ್ಣಪ್ಪ, ಮುಖಂಡ ಟೇಕಲ್ ಆಂಜಿನಪ್ಪ, ಆರೋಗ್ಯ ಇಲಾಖೆಯ ಸೆಲ್ವಿ ಮುಂತಾದವರು ಉಪಸ್ಥಿತರಿದ್ದರು.
'ಮಾದಕ ವಸ್ತುಗಳಿಂದ ಭವಿಷ್ಯ ಹಾಳು'
ಕನ್ನಡಪ್ರಭ ವಾರ್ತೆ ಕೋಲಾರ ಜೂ.28
ಮಾದಕ ವಸ್ತುಗಳ ಸೇವನೆಯಿಂದ ಯುವಜನತೆಯ ಭವಿಷ್ಯ ಹಾಳಾಗುತ್ತಿದೆ. ಮಾನಸಿಕ ಮತ್ತು ದೈಹಿಕ ಬಲ ಕುಂದಿಸುವ ಮಾದಕ ವಸ್ತುಗಳಿಂದಾಗಿ ಸಾಮಾಜಿಕ ಅಧಃಪತನಕ್ಕೆ ಕಾರಣವಾಗುತ್ತದೆ ಎಂದು ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಟಿ.ಆರ್. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು. ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗ್ರಾಮಾಂತರ ಠಾಣೆ ಮತ್ತು ಸರ್ಕಾರಿ ಪ್ರೌಢಶಾಲೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಮಾದಕ ದ್ರವ್ಯ ಸೇವನೆ ವಿರೋಧಿ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಪ್ರಪಂಚದಲ್ಲೇ ಯುವಶಕ್ತಿಯನ್ನು ಹೆಚ್ಚು ಹೊಂದಿರುವ ಶ್ರೀಮಂತ ದೇಶ ಭಾರತವಾಗಿದೆ ಎಂದ ಅವರು, ಈ ಶಕ್ತಿ ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಕೊಡುಗೆಯಾಗಬೇಕೆ ಹೊರತೂ ಮಾದಕ ವಸ್ತುಗಳ ಸೇವನೆಯಿಂದ ಹೊರೆಯಾಗಬಾರದು ಎಂದರು.
ಮಾದಕ ದ್ರವ್ಯ ಸೇವನೆಯಿಂದ ಬದುಕು ನಾಶವಾಗುತ್ತದೆ, ಅನೇಕ ರೋಗಗಳಿಗೆ ತುತ್ತಾಗಿ ನರಕವಾಗುತ್ತದೆ ಎಂದು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಶಾಲಾ ಆವರಣದಿಂದ 200ಮೀ. ವ್ಯಾಪ್ತಿಯಲ್ಲಿ ಧೂಮಪಾನದ ನಿಷೇಧವಿದೆ ಎಂದ ಅವರು, ಯಾವುದೇ ಅಂಗಡಿಗಳಲ್ಲಿ ಮಕ್ಕಳಿಗೆ ತಂಬಾಕು ಮಾರಾಟ ಮಾಡುವುದು ಸಹಾ ಶಿಕ್ಷಾರ್ಹ ಅಪರಾಧ ಎಂದು ತಿಳಿಸಿದರು.
ಮಾದಕ ದ್ರವ್ಯಗಳ ಸೇವನೆಯಿಂದ ಕ್ಯಾನ್ಸರ್, ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆಂಬ ಸತ್ಯವನ್ನು ಇದರ ಸೇವನೆಗೆ ಬಲಿಯಾಗಿರುವವರಿಗೆ ಮನಮುಟ್ಟುವಂತೆ ತಿಳಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪ್ರತಿ ವಿದ್ಯಾರ್ಥಿ ಕನಿಷ್ಠ ಒಬ್ಬರನ್ನಾದರೂ, ಧೂಮಪಾನ, ಮದ್ಯಪಾನದಂತಹ ಚಟಗಳಿಂದ ಬಿಡಿಸಲು ಪ್ರಯತ್ನಿಸಬೇಕು, ನಿಮ್ಮ ಪೋಷಕರಿಗೂ ಈ ಬಗ್ಗೆ ತಿಳಿಹೇಳಬೇಕೆಂದರು. ವರ್ಷಕ್ಕೆ ಶೇ.8 ರಷ್ಟು ಮಂದಿ ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿದ್ದು, ಇದನ್ನು ತಪ್ಪಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರದೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಗ್ರಾಮಾಂತರ ಠಾಣೆ ಪಿಎಸ್ಐ ಕೆ.ಎಸ್. ದೇವೇಂದ್ರಪ್ಪ, ಪೋಷಕರು, ಹಿರಿಯರು ಯಾರೇ ಆಗಲಿ ತಂಬಾಕು, ಮಾದಕ ವಸ್ತುಗಳನ್ನು ಖರೀದಿಸಿ ತರುವಂತೆ ಸೂಚಿಸಿದರೆ ತಿರಸ್ಕರಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಾನ್ ಮಸಾಲ, ಗುಟ್ಕಾ, ಗಾಂಜಾ, ಅಪೀಮು ಮತ್ತಿತರ ವಸ್ತುಗಳ ಬಳಕೆ, ಮಾರಾಟ ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಕಿವಿಮಾತು ಹೇಳಿದರು. ನಗರಠಾಣೆ ಪಿಎಸ್ಐ ಜಗದೀಶ್ ಹಾಜರಿದ್ದು, ಮುಖ್ಯ ಶಿಕ್ಷಕಿ ಡಿ. ಆಶಾ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಶಿಕ್ಷಕ ಲೋಕೇಶಪ್ಪ ದಟ್ಟೇರ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿ.ಎಂ. ವೆಂಕಟರವಣಪ್ಪ, ಎಂ. ವೆಂಕಟೇಶ್, ಸತೀಶ್ ಎಸ್. ನ್ಯಾಮತಿ ಮತ್ತಿತರರು ಇದ್ದರು.ಎಸ್. ರಘುನಾಥ್ ನಿರೂಪಿಸಿ, ಸಿ.ಎಲ್.ಶ್ರೀನಿವಾಸಲು ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

