ಕೋಲಾರ

ರಸ್ತೆಗಳು ಓಕೆ...ಫುಟ್ಪಾತ್‌ಗಳು ಹೀಗೇಕೆ..?

Published On :

ಕನ್ನಡಪ್ರಭ ವಾರ್ತೆ ಕೋಲಾರ ಜೂ.28
ಡಾಂಬರೀಕರಣದಿಂದ ನಗರದ ಕೆಲ ಪ್ರಮುಖ ರಸ್ತೆಗಳು ಫಳ ಫಳಗುಟ್ಟಿದ್ದರೆ, ಸಂಚಾರ ದಟ್ಟಣೆ ಹೆಚ್ಚಾಗಿರುವ ರಸ್ತೆಗಳಲ್ಲಿ ಫುಟ್ಪಾತ್‌ಗಳು ಒತ್ತುವರಿಯಾಗಿರುವುದರಿಂದ ಜನತೆಯ ಪರದಾಟ ತಪ್ಪದಂತಾಗಿದೆ.
ಎಂ.ಜಿ.ರಸ್ತೆ, ಎಲೆ ಬೀದಿ, ಸರ್ಕಾರಿ ಬಾಲಕರ ಕಾಲೇಜಿನ ಹಿಂಭಾಗದ ರಸ್ತೆ ಸೇರಿದಂತೆ ವಿವಿಧ ಕಡೆ ನಗರಸಭೆಯಿಂದ ನಡೆದಿರುವ ಡಾಂಬರೀಕರಣದಿಂದಾಗಿ ರಸ್ತೆಗಳಲ್ಲಿ ಕಾಣುತ್ತಿದ್ದ ಗುಂಡಿಗಳು ಮಾಯವಾಗಿವೆ. ಆದರೆ, ಎಂ.ಜಿ. ರಸ್ತೆಯಲ್ಲಿ ಕಳೆದ ಒಂದು ವಾರದ ಹಿಂದೆ ಹಾಕಿದ್ದ ಡಾಂಬರು ಶುಕ್ರವಾರ ಬಿದ್ದ ಸಣ್ಣ ಮಳೆಗೆ ಕಿತ್ತು ಬಂದಿರುವುದಕ್ಕೆ ವ್ಯಾಪಾರಿಗಳು, ವಾಹನ ಸವಾರರು ಬೇಸರ ವ್ಯಕ್ತಪಡಿಸಿ, ಗುಣಮಟ್ಟ ಕಾಪಾಡಲು ನಗರಸಭೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಅನೇಕ ವರ್ಷಗಳಿಂದ ರಸ್ತೆಗಳು ಹಾಳಾಗಿದ್ದು ನಗರಸಭೆಯವರು ತಡವಾದರೂ ಡಾಂಬರೀಕರಣ ಕೈಗೆತ್ತಿಕೊಂಡಿರುವುದು ಸಮಾಧಾನದ ವಿಚಾರ. ಆದರೆ, ಗುಣಮಟ್ಟ ಕಾಪಾಡದಿದ್ದರೆ ಸರ್ಕಾರದ ಹಣ ಕೊಚ್ಚಿ ಹೋಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಸ್ತೆಗಳ ಡಾಂಬರೀಕರಣದ ಜತೆಗೆ ಎಂ.ಜಿ.ರಸ್ತೆ, ಕಾಳಮ್ಮ ಗುಡಿ ಬೀದಿ, ಅಮ್ಮವಾರಿಪೇಟೆ ಮುಖ್ಯ ರಸ್ತೆ,ದೊಡ್ಡಪೇಟೆ, ಶಾರದಾ ಚಿತ್ರ ಮಂದಿರ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ಕ್ರಮಬದ್ಧ ಸ್ಥಳ ಹಾಗೂ ಗುರುತು ಹಾಕಬೇಕು.
ಏಕ ಮುಖ ಸಂಚಾರ ವ್ಯವಸ್ಥೆಯನ್ನು ಕಾನೂನು ರೀತಿಯಲ್ಲಿ ಅನುಷ್ಠಾನಕ್ಕೆ ತರಬೇಕು, ದೊಡ್ಡಪೇಟೆ, ಶಾರದಾ ಚಿತ್ರ ಮಂದಿರ ರಸ್ತೆ, ಕಾಳಮ್ಮ ಗುಡಿ ಬೀದಿ,ಬ್ರಾಹ್ಮಣರ ಬೀದಿ ಸೇರಿದಂತೆ ಅನೇಕ ಕಡೆ ಜನತೆ ಓಡಾಡಲು ಸಾಧ್ಯವಾಗದ ರೀತಿಯಲ್ಲಿ ಫುಟ್ಪಾತ್‌ಗಳು ಒತ್ತುವರಿಯಾಗಿದ್ದು ನಗರಸಭೆಯ ಸದಸ್ಯರು ತಮ್ಮ ವಾರ್ಡುಗಳ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ರಸ್ತೆಗಳ ಅಭಿವೃದ್ಧಿ ಜತೆಗೆ ಫುಟ್ಪಾತ್ ಒತ್ತುವರಿ ತೆರವು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು, ನಗರಸಭೆ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದಿಂದ ರಸ್ತೆಗಳ ಅಗಲೀಕರಣ, ಫುಟ್ಪಾತ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಕೋಲಾರ ನಗರವನ್ನು ಮಾದರಿ ನಗರವನ್ನಾಗಿ ಮಾಡುವುದಕ್ಕೆ ಒಗ್ಗಟ್ಟು ಪ್ರದರ್ಶಿಸಬೇಕೆಂದು ಜನತೆ ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ರಸ್ತೆ ಕಾಮಗಾರಿಗಳು ಬೇಡವೆ ಬೇಡ, ರಸ್ತೆಗಳಿಗೆ ಡಾಂಬರು ಹಾಕಲು ಗುತ್ತಿಗೆ ಪಡೆದಿರುವವರು ಗುಣಮಟ್ಟ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಆದೇಶ ನೀಡಬೇಕು, ಫುಟ್ಪಾತ್‌ಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡು ಕೋಲಾರ ನಗರ ಅಡ್ಡಾದಿಡ್ಡಿಯಾಗಿ ಬೆಳೆಯದಂತೆ ಎಚ್ಚರ ವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ನಗರಸಭೆಯ ಕೆಲ ಸದಸ್ಯರು ಜನರು ಮತ್ತು ವಾಹನಗಳು ಓಡಾಡುವ ರಸ್ತೆಗಳಿಗೆ ಸಿಮೆಂಟ್ ರಸ್ತೆ ಹಾಕಿ ಅಭಿವೃದ್ಧಿಪಡಿಸುವ ಬದಲು ಗಲ್ಲಿಗಳಿಗೆ ಸಿಮೆಂಟ್ ಹಾಕುವ ಮೂಲಕ ಜನತೆಯ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದು, ಇನ್ನು ಮುಂದೆ ಇಂತಹ ಕೆಲಸಕ್ಕೆ ನಗರಸಭೆಯ ಅಧಿಕಾರಿಗಳು ಅವಕಾಶ ನೀಡದಂತೆಯೂ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.