ಕೋಲಾರ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 23 ಡೆಂಘೀ ಪ್ರಕರಣಗಳು ಪತ್ತೆ

Published On :

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 23 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಇದುವರೆಗೂ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಬಾಬುರೆಡ್ಡಿ ತಿಳಿಸಿದರು.  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಡೆಂಘಿ ಜ್ವರ, ಚಿಕುನ್‌ಗುನ್ಯಾ, ಮಲೇರಿಯಾ ರೋಗಗಳ ತಡೆಗಟ್ಟುವಿಕೆ ಕುರಿತ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು ತಮ್ಮ ತಾಲೂಕುಗಳಲ್ಲಿನ ಡೆಂಘಿ ಹಾಗೂ ಇತರ ಸಾಂಕ್ರಾಮಿಕ ರೋಗಗಳ ಪರಿಸ್ಥಿತಿ, ಹತೋಟಿ ಕ್ರಮಗಳ ಕುರಿತಂತೆ ಪವರ್ ಪಾಯಿಂಟ್ ಪ್ರದರ್ಶನ ನೀಡಿದರು.  ಜಿಲ್ಲೆಯ ಶಿಡ್ಲಘಟ್ಟದಲ್ಲೇ ಅತಿ ಹೆಚ್ಚು ಡೆಂಘಿ ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಚರ್ಚಿಸಲಾಯಿತು.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್. ಶೇಖರಪ್ಪ ಮಾತನಾಡಿ, ಡೆಂಘಿ ಜ್ವರ ತಡೆಗಟ್ಟಲು ಎಲ್ಲಾ ಇಲಾಖೆಗಳ ಸಮನ್ವಯ ಮುಖ್ಯ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ, ಆಶಾ ಕಾರ್ಯಕರ್ತರು ಶ್ರಮಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗಸ್ವಾಮಿ ಉಪಸ್ಥಿತರಿದ್ದರು.
ಚಿಕ್ಕಬಳ್ಳಾಪುರ: ಮಲೇರಿಯಾ ವಿರೋಧಿ ಮಾಸಾಚರಣೆ, ಡೆಂಘಿ ಜ್ವರದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಗೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗಸ್ವಾಮಿ ಚಾಲನೆ ನೀಡಿದರು.
ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಿಂದ ಆರಂಭವಾದ
ಜಾಥಾದಲ್ಲಿ, ಡೆಂಘಿ ಕುರಿತು ಅರಿವು ಮೂಡಿಸುವ ಮಾಹಿತಿಯ ಭಿತ್ತಿಫಲಕಗಳೊಂದಿಗೆ ಶಾಲಾ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಸೊಳ್ಳೆ ನಿಯಂತ್ರಣ ನಿಮ್ಮಿಂದ, ನಿಮಗಾಗಿ ಎಂಬ ಘೋಷಣೆಯನ್ನು ಕೂಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಕಾಯಿಲೆಗಳು ಹರಡುವುದನ್ನು ಮುನ್ನೆಚ್ಚರಿಕೆ ಕ್ರಮಗಳಿಂದ ತಡೆಯಬಹುದು. ಕಾಯಿಲೆಗಳು ಬಂದ ಮೇಲೆ ಕಷ್ಟಪಡುವ ಬದಲು, ಕಾಯಿಲೆಗಳು ಬಾರದಂತೆ ಎಚ್ಚರವಹಿಸಿ ಆರೋಗ್ಯಕರ ಜೀವನವನ್ನು ನಡೆಸಬೇಕೆಂದು ಸಲಹೆ ನೀಡಿದರು. ಡೆಂಗ್ಯು, ಮಲೇರಿಯಾ ಕಾಯಿಲೆಗಳು ಸೊಳ್ಳೆಗಳಿಂದ ಹರಡುತ್ತವೆ. ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಲು ಸ್ವಚ್ಛತೆಯನ್ನು ಕಾಪಾಡದಿರುವುದಾಗಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆಯನ್ನು ಕಾಪಾಡಲು ಮೊದಲು ಆದ್ಯತೆ ನೀಡಬೇಕೆಂದರು. ಈ ಸಂದರ್ಭದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಬಾಬುರೆಡ್ಡಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ಹರೀಶ್, ವೈದ್ಯ ದಿವಾಕರ್, ತಾ.ಪಂ. ಇಓ ಶಶಿಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.