ಕೋಲಾರ

ನಗರಸಭೆ ಜೆಡಿಎಸ್ ವಶವಾದರೆ ಅಭಿವೃದ್ಧಿಗೆ ಆದ್ಯತೆ

Published On :

ಕೋಲಾರ: ಜೆಡಿಎಸ್ ಕೋಲಾರ ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತ, ನಮ್ಮ ಪಕ್ಷದ ಪ್ರತಿನಿಧಿಗಳು ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವರೆಂದು ಪಕ್ಷದ ಮುಖಂಡ, ಮಾಜಿ ಸಚಿವ ಕೆ. ಶ್ರೀನಿವಾಸಗೌಡ ತಿಳಿಸಿದರು.
ಅವರು ಶುಕ್ರವಾರ ನಗರಸಭಾ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಪಿ.ಸಿ.ಬಡಾವಣೆ, ಜಯನಗರದಲ್ಲಿ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ನಮ್ಮ ಪಕ್ಷ ಮೂರನೇ ಎರಡರಷ್ಟು ಬಹುಮತದಿಂದ ನಗರಸಭೆಯ ಆಡಳಿತ ಹಿಡಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ತಾವು ಶಾಸಕರಾಗಿದ್ದ ಸಮಯದಲ್ಲಿ ನಡೆದಿದ್ದ ಚುನಾವಣೆಯಲ್ಲಿ ಎರಡು ಬಾರಿ ಜನತಾಪರಿವಾರ ಅಧಿಕಾರಕ್ಕೆ ಬಂದಿತ್ತು, ಕೋಲಾರ ನಗರದ ಅಭಿವೃದ್ಧಿಗೆ ನಮ್ಮ ಸದಸ್ಯರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಅಭಿವೃದ್ಧಿ ಪರ ಕಾಳಜಿ ಇಲ್ಲದವರು ಆಯ್ಕೆಯಾದ ಪರಿಣಾಮ ನಗರಸಭೆ ಕಲುಷಿತಗೊಂಡಿತು. ಈ ಬಾರಿ ನಮ್ಮ ಪಕ್ಷದಿಂದ ಸಭ್ಯರನ್ನು ಚುನಾವಣಾ ಕಣಕ್ಕೆ ಇಳಿಸಿದ್ದೇವೆ ಎಂದರು.
ರಾಜ್ಯ ಸರ್ಕಾರದಿಂದ ನಗರಸಭೆಗೆ 100 ಕೋಟಿಗೂ ಹೆಚ್ಚು ಅನುದಾನ ಬಂದಿದ್ದರೂ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಆಗಿಲ್ಲ, ಕೆಲ ಗೂಂಡಾಗಳನ್ನು ನಗರಸಭೆಯ ಸದಸ್ಯರನ್ನಾಗಿ ಮಾಡಿ ಸಚಿವ ವರ್ತೂರ್ ಪ್ರಕಾಶ್ ನಗರಕ್ಕೆ ಅಪಕೀರ್ತಿ ತಂದಿದ್ದಾರೆ. ಈ ಬಾರಿ ನಮ್ಮ ಪಕ್ಷದಿಂದ ಸಭ್ಯರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.
ಕಳೆದ ಬಾರಿ ಕೆಲ ಸದಸ್ಯರು ಹಣ ಮತ್ತು ಅಧಿಕಾರದ ಆಸೆಯಿಂದ ಪಕ್ಷಾಂತರ ಮಾಡಿ, ಬಾಂಬೆ-ದೆಹಲಿಯ ಪ್ರವಾಸ ಭಾಗ್ಯ ಅನುಭವಿಸಿ ರಾಜಕೀಯ ವ್ಯವಸ್ಥೆಯನ್ನು ಹಾಳುಗೇಡವಿರುವುದರಿಂದ ಈ ಬಾರಿ ನಮ್ಮ ಸದಸ್ಯರು ಯಾರು ಆ ರೀತಿ ಮಾಡದ ರೀತಿಯಲ್ಲಿ ಬಂದೋಬಸ್ತ್ ಮಾಡಲಾಗಿದೆ. ಒಂದು ವೇಳೆ ನಮ್ಮ ಸದಸ್ಯರು ಯಾರಾದರೂ ನಗರದ ಅಭಿವೃದ್ಧಿಯನ್ನು ಕಡೆಗಣಿಸಿದಲ್ಲಿ ಅಂತಹ ಸದಸ್ಯರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸಚಿವರು ಪದೇ ಪದೇ ಕೋಲಾರ ನಗರ ಅಭಿವೃದ್ಧಿಯಾಗಿದೆ ಎಂದು ಹೇಳುತ್ತಿದ್ದಾರೆ. ಸರ್ಕಾರ ನೀಡಿದ ಅನುದಾನದಲ್ಲಿ ಶೇ.25 ರಷ್ಟು ಅಭಿವೃದ್ಧಿಯಾಗಿ ಇನ್ನು ಶೇ.75ರಷ್ಟು ಹಣ ಗುಳುಂ ಆಗಿದೆ ಎಂದು ಆರೋಪಿಸಿದರು.
ಯರಗೋಳ್ ಯೋಜನೆಗೆ ಚಾಲನೆ ಸಿಗುವ ಮುನ್ನವೇ ಪೈಪ್‌ಲೈನ್ ಹಾಕಿ ಸಚಿವರು ಕಮಿಷನ್ ಪಡೆದಿದ್ದಾರೆ. ಈ ಯೋಜನೆ ನಾನು ಶಾಸಕ ಮತ್ತು ಸಚಿವನಾಗಿದ್ದಾಗ ರೂಪಿಸಿದ್ದು ಸಚಿವರು ಕೇಂದ್ರ ಸರ್ಕಾರದಿಂದ ಬಂದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂದು ದೂರಿದರಲ್ಲದೆ, ಅಧಿಕಾರಿಗಳು ಸಹ ಲಂಚಾವತಾರದಲ್ಲಿ ಶಾಮೀಲು ಆಗಿದ್ದಾರೆಂದರು.
ಇತ್ತೀಚೆಗೆ ಕೋಲಾರ ತಹಸೀಲ್ದಾರ್ ಕೃಷ್ಣಪ್ಪ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ತಮಗೆ ಈ ವಿಚಾರವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವುದಕ್ಕೆ ಇಷ್ಟವಿಲ್ಲ. ಆದರೆ, ಮೃತರ ಪತ್ನಿಗೆ ತಾವು ದೂರವಾಣಿ ಮುಖೇನ ಸಾಂತ್ವನ ಹೇಳಿದ ಸಂದರ್ಭದಲ್ಲಿ ಅವರು ಕ್ಯಾಲನೂರಿನಲ್ಲಿ ಸಚಿವರು ನಡೆಸಿದ ಸಮಾವೇಶಕ್ಕೆ ಹಣ ನೀಡಲಿಲ್ಲವೆಂಬ ಕಾರಣಕ್ಕೆ ಸಚಿವರು ತಮ್ಮ ಪತಿಯ ಜತೆ ಒರಟಾಗಿ ನಡೆದುಕೊಂಡಿದ್ದರಂತೆ ಇದರಿಂದ ಮಾನಸಿಕವಾಗಿ ನೊಂದು ಅನಾರೋಗ್ಯಪೀಡಿತರಾಗಿ ನಿಧನರಾಗಿದ್ದಾರೆಂದು ಆರೋಪ ಮಾಡಿರುವುದಾಗಿ ತಿಳಿಸಿದರು.
ಕಳೆದ ಸಾರಿ ಗೆದ್ದ ತಮ್ಮ ಪಕ್ಷದ ಕೆಲ ಸದಸ್ಯರು ಸಹ ಪಕ್ಷಾಂತರ ಮಾಡಿ ಉಚ್ಚಾಟನೆಗೊಂಡಿದ್ದರು. ಅಂತಹವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ರಾಜಕೀಯ ಕಾರಣಗಳಿಂದಾಗಿ ಕೆಲ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಕಳೆದ ಫೆ.17 ರಂದು ತಾಲೂಕಿನ ಕ್ಯಾನಲೂರಿನಲ್ಲಿ ಸಚಿವ ವರ್ತೂರ್ ಪ್ರಕಾಶ್ ಅವರು ತಮ್ಮ ಬೆಂಬಲಿಗರ ಸಮಾವೇಶದಲ್ಲಿ ಮಾತನಾಡಿ, ಕೋಲಾರ ನಗರಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಮತಯಾಚಿಸಲಿದ್ದಾರೆ, ಹಣ-ಹೆಂಡ ಹಂಚುವುದಿಲ್ಲವೆಂದು ಘೋಷಣೆ ಮಾಡಿರುವುದಲ್ಲದೆ, ಚುನಾವಣೆ ಮುಗಿಯುವ ತನಕ ಕೋಲಾರದಿಂದ ಹೊರಗಡೆ ಇರುವುದಾಗಿ ತಿಳಿಸಿದ್ದಾರೆ. ಸಚಿವರು ತಮ್ಮ ಮಾತಿಗೆ ಬದ್ಧರಾಗಿರುವುದಾದರೆ ತಾವು ಸಹ ಚುನಾವಣೆ ಮುಗಿಯುವವರೆಗೆ ಕೋಲಾರದಿಂದ ದೂರ ಉಳಿಯುವುದಾಗಿ ಸವಾಲು ಹಾಕಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಕುಡಿಯುವ ನೀರು, ಸಿಮೆಂಟ್ ರಸ್ತೆ, ಒಳಚರಂಡಿ, ಡಾಂಬರು ರಸ್ತೆಗಳಿಗೆ ಆದ್ಯತೆ ನೀಡುವುದಾಗಿ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಭರವಸೆ ನೀಡಿದರು.
ವಾರ್ಡ್ 13ರಲ್ಲಿ ಟಿಕೆಟಟ್ಸಿಗದೆ ಬಂಡಾಯವಾಗಿ ಸ್ಪರ್ಧಿಸಿರುವ ಮಂಜುನಾಥ್ ಅವರು ಅಧಿಕೃತ ಅಭ್ಯರ್ಥಿಯ ಪರವಾಗಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಯಬೇಕು, 16 ಮತ್ತು 19ನೇ ವಾರ್ಡಿನಿಂದ ಬಂಡಾಯವಾಗಿ ಸ್ಪರ್ಧಿಸಿದ್ದ ಅಕ್ಬರ್ ಮತ್ತು ಅನ್ವರ್ ನಿವೃತ್ತಿ ಘೋಷಣೆ ಮಾಡಿದ್ದಾರೆಂದು ತಿಳಿಸಿದರು.
ಸಚಿವರ ಬೆಂಬಲಿಗರು 5ನೇ ವಾರ್ಡಿನಿಂದ ಸ್ಪರ್ಧಿಸಲು ಉದ್ದೇಶಿಸಿದ್ದ ಕಾಂಗ್ರೆಸ್‌ನ ಚಂಗೋಲಿ ನಾರಾಯಣಸ್ವಾಮಿ ಅವರನ್ನು ಅಪಹರಿಸಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಂತರ ಬಿಡುಗಡೆ ಮಾಡಿದ್ದಾರೆ. ಇಂದು 28ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಮುನಿರಾಜು ನಾಪತ್ತೆ ಆಗಿದ್ದಾರೆಂದು ದೂರಿದ ಅವರು, ಸಚಿವರು ನಗರಸಭೆಯನ್ನು ತಮ್ಮ ಹಿಡಿತಕ್ಕೆ ಪಡೆಯಲು ವಾಮಮಾರ್ಗ ಅನುಸರಿಸುತ್ತಿದ್ದಾರೆಂದು ಟೀಕಿಸಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಎಂ.ಮುನಿಯಪ್ಪ, ಜಿ.ಪಂ ಅಧ್ಯಕ್ಷೆ ಚೌಡೇಶ್ವರಿ, ಜಿ.ಪಂ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ, ವಕೀಲ ಕಲ್ಲಂಡೂರು ಲೋಕೇಶ್, ಮುಖಂಡರಾದ ಸುಧಾಕರ್, ಬಣಕನಹಳ್ಳಿ ನಟರಾಜ್, ಎಪಿಎಂಸಿ ಅಧ್ಯಕ್ಷ ಈರಪ್ಪ, ಅಲ್ಪಸಂಖ್ಯಾತರ ವಿಭಾಗದ ಇಬ್ರತ್ ವುಲ್ಲಾಖಾನ್ ಹಾಗೂ ವಿವಿಧ ವಾರ್ಡುಗಳ ಅಭ್ಯರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.