ಕೋಲಾರ

ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ಸಿಬ್ಬಂದಿ ಹಲ್ಲೆ: ಪ್ರತಿಭಟನೆ

Published On :

ಬಾಗೇಪಲ್ಲಿ: ಪಟ್ಟಣದ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿನ ವಿದ್ಯಾರ್ಥಿಗಳ ಮೇಲೆ ಸಿಬ್ಬಂದಿ ವರ್ಗದವರು ಹಲ್ಲೆ ಮಾಡಿರುವುದನ್ನು ಖಂಡಿಸಿ ಹಾಗೂ ಹಲ್ಲೆ ಮಾಡಿರುವ ಸಿಬ್ಬಂದಿ ವರ್ಗದವರನ್ನು ಕೂಡಲೇ ಅಮಾನತ್ ಪಡಿಸಬೇಕೆಂದು ಒತ್ತಾಯಿಸಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಮುಂದೆ ವಿದ್ಯಾರ್ಥಿಗಳು, ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಲ್ಲೆಗೊಳಗಾಗಿರುವ ವಿದ್ಯಾರ್ಥಿ ಡಿ.ಕೆ.ನಾಗರಾಜ್ ಮಾತನಾಡಿ, ಡಾ ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 250 ವಿದ್ಯಾರ್ಥಿಗಳು ಇದ್ದು ಗುರುವಾರ ರಾತ್ರಿ ನನಗೂ ಸೇರಿದಂತೆ ಸುಮಾರು 15 ವಿದ್ಯಾರ್ಥಿಗಳಿಗೆ ಊಟವಿಲ್ಲ, ಊಟ ನೀಡುವಂತೆ ಅಕೌಂಟೆಂಟ್ ನಾರಾಯಣಸ್ವಾಮಿ ರವರನ್ನು ಕೇಳಿದಕ್ಕೆ ಅವರು ನಾವು ನಿಮಗೆ ಭಿಕ್ಷೆ ಹಾಕುತ್ತಿರುವುದು. ನೀವು ನಿಮಗೆ ಇಷ್ಟ ಬಂದಾಗಲ್ಲೆಲ್ಲಾ ಊಟವನ್ನು ನೀಡಲು ಸಾಧ್ಯವಿಲ್ಲ. ರಾತ್ರಿ 7 ಗಂಟೆಗೆ ಊಟ ಮುಗಿದೆ ಎಂದರು. ಅದಕ್ಕೆ ನಾವು ರಾತ್ರಿ 7.30 ರವರೆಗೂ ಊಟದ ಸಮಯವಿದೆಯಲ್ಲಾ ಎಂದು ಕೇಳಿದಾಗ ಕುಡಿದ ಅಮಲಿನಲ್ಲಿದ್ದ ಅವರು ನಿಮಗೆ ಇಷ್ಟ ಬಂದಂತೆ ಮಾಡಿಕೋ ಯಾರಿಗಾದರೂ ಹೇಳಿಕೋ ಈಗ ಊಟವನ್ನು ನೀಡಲು ಮಾತ್ರ ಸಾಧ್ಯವಿಲ್ಲ ಎಂದರು. ಶುಕ್ರವಾರ ಬೆಳಗ್ಗೆ ತಿಂಡಿ ಸರಿಯಿಲ್ಲವೆಂದು ಕೇಳಿದಕ್ಕೆ ರಾತ್ರಿ ಊಟ ನೀಡಿಲ್ಲವೆಂದು ಈಗ ತಿಂಡಿ ಚೆನ್ನಾಗಿಲ್ಲವೆಂದು ಗಲಾಟೆ ಮಾಡುತ್ತಿದ್ದೀಯಾ, ಇತ್ತೀಚೆಗೆ ನಿನ್ನದು ಜಾಸ್ತಿಯಾಯಿತು. ಹೊರೆಗೆ ನಡೆಯೆಂದು ದೌರ್ಜನ್ಯದಿಂದ ನನ್ನ ಕಾಲರ್ ಹಿಡಿದು ಹೊರಕ್ಕೆ ತಳ್ಳಿದ್ದಾರೆ. ಇದೇ ಸಂದರ್ಭದಲ್ಲಿ ಅಡುಗೆಯವರೂ ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ರವಿ ಮಾತನಾಡಿ, ಪಟ್ಟಣದ ಅಂಬೇಡ್ಕರ್ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ರಾತ್ರಿಯ ಊಟದ ಸಮಯದಲ್ಲಿ ಅಕೌಟೆಂಟ್ (ಲೆಕ್ಕಾಧಿಕಾರಿ) ನಾರಾಯಣಸ್ವಾಮಿ ವಿದ್ಯಾರ್ಥಿಗಳನ್ನು ನಿಂದಿಸಿ ಹಲ್ಲೆ ನಡೆಸಿರುವುದನ್ನು ಖಂಡಿಸಿದರು.
ಅವ್ಯವಸ್ಥೆ ಬಗ್ಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಿಲ್ಲ. ಅಕೌಟೆಂಟ್‌ನಾರಾಯಣಸ್ವಾಮಿ ಸೇರಿ ಬಹುತೇಕ ಸಿಬ್ಬಂದಿ ವರ್ಗ ಸುರಪಾನ ಪ್ರಿಯರಾಗಿ ತೂರಾಡುತ್ತಾ ವಿದ್ಯಾರ್ಥಿ ನಿಲಯಕ್ಕೆ ಬಂದು ಅಸಭ್ಯವಾಗಿ ವರ್ತಿಸುತ್ತಿದ್ದಾರೆ, ಊಟ ಬಡಿಸುವ ಸಮಯದಲ್ಲಿ ಎಲೆ ಅಡಿಕೆ ಜಿಗಿಯುತ್ತಾ ಎಲ್ಲೆಂದರಲ್ಲಿ ಉಗಿಯುತ್ತಾರೆ, ಬೀಡಿ ಸೇದುತ್ತಾರೆ ಎಂದರು.
ವಿದ್ಯಾರ್ಥಿ ನಿಲಯದಲ್ಲಿ ಸ್ವಚ್ಛತೆಯಿಲ್ಲದೆ ದುರ್ನಾತ ಬೀರುತ್ತಿದೆ, ಅನ್ನದಲ್ಲಿ ಹುಳು ಇರುತ್ತೆ, ಅನ್ನ ಸರಿಯಾಗಿ ಬೇಯಿಸಿರುವುದಿಲ್ಲ, ಕಳೆಪೆ ತರಕಾರಿಯಿಂದ ಸಾಂಬರ್ ಮಾಡಿ ಹಾಕುತ್ತಾರೆ. ಸ್ನಾನಕ್ಕೆ ನೀರಿಲ್ಲದಿರುವುದರಿಂದ 10 ದಿನಗಳಾದರೂ ಸಹ ಸ್ನಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿ ಮುಖಂಡರಾದ ಜಯಂತ್, ನರಸಿಂಹಪ್ಪ, ಗೋಪಿ, ವಿದ್ಯಾರ್ಥಿಗಳಾದ ಶಿವ, ನಾಗರಾಜು, ರಮಣ, ಆದಿ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.