ಅಭ್ಯರ್ಥಿ ನಾಪತ್ತೆ: ಪ್ರತಿಭಟನೆ
ಕೋಲಾರ: ಕಳೆದ ಮೂರು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿರುವ ಕೋಲಾರ ನಗರಸಭಾ ವ್ಯಾಪ್ತಿಯ 28ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಮುನಿರಾಜು ಅವರನ್ನು ಕೂಡಲೇ ಹುಡುಕಿಕೊಡಬೇಕೆಂದು ಒತ್ತಾಯಿಸಿ ಅಭ್ಯರ್ಥಿಯ ಪತ್ನಿ ನಾಗಮ್ಮ ಹಾಗೂ ಬೆಂಬಲಿಗರು ಭಾನುವಾರ ಪ್ರತಿಭಟನೆ ನಡೆಸಿದರು. ನಗರದ ಟೌನ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಮುನಿರಾಜು ಪತ್ನಿ ಮತ್ತು ಬೆಂಬಲಿಗರು ಮಾರ್ಚ್ 1ರಂದು ಬೆಳಿಗ್ಗೆ 5.30ರಲ್ಲಿ ಮನೆಯಿಂದ ಹೊರಗಡೆ ಹೋದ ಮುನಿರಾಜು ಮತ್ತೆ ಮನೆಗೆ ವಾಪಸ್ ಬಂದಿಲ್ಲ. 28ನೇ ವಾರ್ಡಿನ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಕಾಶಿ ಅವರ ಮೇಲೆ ಅನುಮಾನವಿರುವುದರಿಂದ ಪೊಲೀಸರು ಆತನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು. ಮತದಾನಕ್ಕೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇರುವುದರಿಂದ ಮುನಿರಾಜು ಅವರನ್ನು ಎಲ್ಲೇ ಬಚ್ಚಿಟ್ಟಿದ್ದರೂ ಹುಡುಕಿಕೊಡಬೇಕೆಂದು ತಿಳಿಸಿದ್ದಾರೆ.
ನಾಳೆ ಚುನಾವಣಾ ಪ್ರಚಾರ ಅಂತ್ಯ
ಗೌರಿಬಿದನೂರು: ಸ್ಥಳೀಯ ಸಂಸ್ಥೆಗೆ ಮಾ.7ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಈ ಅವಧಿಗಿಂತ 48 ಗಂಟೆ ಮುನ್ನವೇ ಯಾವುದೇ ರೀತಿಯ ಚುನಾವಣಾ ಪ್ರಚಾರ ಕೈಗೊಳ್ಳುವಂತಿಲ್ಲ ಎಂದು ಚುನಾವಣಾ ಆಯೋಗವು ಕಟ್ಟುನಿಟ್ಟಾಗಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಅಥವಾ ಪಕ್ಷಗಳ ನಾಯಕರು ಬಹಿರಂಗ ಪ್ರಚಾರ, ಸಭೆ, ಸಮಾರಂಭ, ಮೆರವಣಿಗೆ, ಟಿವಿ, ಮುದ್ರಣ, ಶ್ರವಣ, ಎಲೆಕ್ಟ್ರಾನಿಕ್ ಮಾಧ್ಯಮ, ಮೊಬೈಲ್, ಮೆಸೇಜ್ನಲ್ಲಿ ಪ್ರಚಾರ ಸೇರಿದಂತೆ ಇನ್ನಿತರ ಪ್ರಚಾರ ಕೈಗೊಳ್ಳುವಂತಿಲ್ಲ. ಅಲ್ಲದೆ, ರಾಜಕೀಯ ಪಕ್ಷಗಳ ಮುಖಂಡರು, ತಾರಾ ಪ್ರಚಾರಕರು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಿಂದ, ಅಭ್ಯರ್ಥಿಗಳ ಪರ ಮತ ಯಾಚಿಸುವ ಆ ವಾರ್ಡ್ನ ಮತದಾರರಲ್ಲದ ಏಜೆಂಟರು ಮತ್ತು ವಾರ್ಡ್ ಮತದಾರರು ಅಲ್ಲದವರು ಮಾ.5ರಂದು ಬೆ.7 ಗಂಟೆಯೊಳಗಾಗಿ ವಾರ್ಡ್ ವ್ಯಾಪ್ತಿಯನ್ನು ಬಿಡತಕ್ಕದ್ದು ಎಂದು ಚುನಾವಣಾ ಅಧಿಕಾರಿಗಳು ಕೋರಿದ್ದಾರೆ.
ಮಾನಸಿಕ ಅಸ್ವಸ್ಥೆ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಇಲ್ಲಿನ ಕೋಟೆ ವ್ಯಾಪ್ತಿಯ ಮಾನಸಿಕ ಅಸ್ವಸ್ಥ ಗೃಹಿಣಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಂಜುಳ (40) ಮೃತಪಟ್ಟವರು. ಕೆಲ ದಿನಗಳಿಂದ ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಕೆಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಯಾರೂ ಇಲ್ಲದ ವೇಳೆ ಬಾವಿಗೆ ಹಾರಿ ಮಂಜುಳಾ ಆತ್ಮಹತ್ಯೆ ಮಾಡಿದ್ದಾರೆ. ನಂತರ ಬಾವಿಯಿಂದ ಶವವನ್ನು ಅಗ್ನಿಶಾಮಕ ದಳ ಹೊರಗೆ ತೆಗೆದರು. ಸ್ಥಳಕ್ಕೆ ಡಿವೈಎಸ್ವಿ ದೇವಯ್ಯ ಭೇಟಿ ನೀಡಿದರು. ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

