ಕೋಲಾರ

ಬೆಳಿಗ್ಗೆ ಕಾಂಗ್ರೆಸ್‌ನಲ್ಲಿ, ರಾತ್ರಿ ಕೆಜೆಪಿ 'ಕೈ'ಯಲ್ಲಿ ನಾಯಕರು

Published On :

ಚಿಂತಾಮಣಿ:  ತನ್ನ ಸ್ವಾರ್ಥ ಅಧಿಕಾರ ದಾಹಕ್ಕೆ ಕೇಂದ್ರ ಸಚಿವ ಜೆಡಿಎಸ್ ಪಕ್ಷದ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವ ಇವರು ಕಾಂಗ್ರೆಸ್ ಪಕ್ಷದಲ್ಲೆ ಇದ್ದು ರಾತ್ರಿ ವೇಳೆ ಯಡಿಯೂರಪ್ಪ ಮನೆಯಲ್ಲಿ ಇರುವುದು ಜನತೆಗೆ ಗೊತ್ತಿದೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ವಿರುದ್ಧ ಆರೋಪ ಮಾಡಿದರು.
ನಗರದ ಆಜಾದ್ ಚೌಕಿನಲ್ಲಿ ತಾಲೂಕು ಜೆಡಿಎಸ್‌ನಿಂದ ಭಾನುವಾರ ನಗರಸಭೆ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 6 ಬಾರಿ ಗೆದ್ದ ಮಂತ್ರಿಗಳು ದಲಿತ ಹಿಂದುಳಿದ ಅಲ್ಪಸಂಖ್ಯಾತರ ಹಿತಬಯಸದ ಸಚಿವರು, ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ. ಶಿಡ್ಲಘಟ್ಟದಲ್ಲಿ ಶನಿವಾರ ಜೆಡಿಎಸ್ ಪ್ರಚಾರ ಸಮಯದಲ್ಲಿ ಮಾಧ್ಯಮಗಳೆದುರು ನಮ್ಮ ಮೇಲೆ ಅಪಪ್ರಚಾರ ಮಾಡಿರುವುದು ಕೆ.ಎಚ್. ಮುನಿಯಪ್ಪ ಸ್ವಾರ್ಥ ಅಧಿಕಾರ ದಾಹಕ್ಕೆ ಸಾಕ್ಷಿಯಾಗಿದೆ ಎಂದು ತೀವ್ರವಾಗಿ ಖಂಡಿಸಿದರು.
2004ರ ಚುನಾವಣೆಯಲ್ಲಿ ನಮ್ಮ ಬೆಂಬಲ ಪಡೆದು ವಿಧಾನ ಪರಿಷತ್ ಸದಸ್ಯ ಗೆಲ್ಲಲು ನಾವು ಬೆಂಬಲಿಸಿದ ಕಾರಣವೇ ವಿನಃ ಇವರ ಪಾತ್ರ ಏನೆಂಬುದು ಆತ್ಮ ವಿಮರ್ಷೆ ಮಾಡಿಕೊಂಡು ತಾಕತ್ತಿದ್ದರೆ ಕೋಲಾರ ಅಥವಾ ಚಿಕ್ಕಬಳ್ಳಾಪುದ ಜಿಲ್ಲೆ ಯಾವುದಾದರೂ ಒಂದು ಸ್ಥಳದಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಕುಮಾರಸ್ವಾಮಿ ಸವಾಲ್ ಹಾಕಿದರು.
ಸ್ಥಳೀಯ ಶಾಸಕರ ವಿರುದ್ಧ ಅಸಮಾಧಾನ:  ನಗರದ ಸುತ್ತಮುತ್ತಲಿನ ವ್ಯಾಪ್ತಿಗಳಲ್ಲಿ ಬಡ ಪುಟ್‌ಪಾತ್ ವ್ಯಾಪಾರಿಗಳ ಮೇಲೆ ಸ್ಥಳೀಯ ಶಾಸಕ ಅಭಿವೃದ್ಧಿ ನೆಪದಲ್ಲಿ ಅವರ ಜೀವನಗಳ ಜೊತೆ ಚೆಲ್ಲಾಟವಾಡಿ ಪುಟ್‌ಪಾತ್ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿ ನಗರವನ್ನು ಸಿಂಗಾಪೂರ್ ಮಾಡಲು ಹೊರಟಿರುವ ಘನಂದಾರಿ ಕೆಲಸಕ್ಕೆ ಎಚ್.ಡಿ. ಕುಮಾರಸ್ವಾಮಿ ಪುಟ್‌ಪಾತ್ ವ್ಯಾಪಾರಿಗಳ ಮನವಿ ಪತ್ರಕ್ಕೆ ಆತ್ಮಸ್ಥೈರ್ಯ ತುಂಬಿದರು. ವಿನಾಕಾರಣ ಬಡ ಪುಟ್‌ಪಾತ್ ವ್ಯಾಪಾರಿಗಳ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡುವ ಶಾಸಕರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯ:  ನಗರದಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು 40ಕ್ಕೂ ಹೆಚ್ಚು ಅಲ್ಪಸಂಖ್ಯಾತ ಕುಟುಂಬ ಸದಸ್ಯರನ್ನು ಬಂಧಿಸಿರುವುದು ನೋವಿನ ಸಂಗತಿ. ಅಲ್ಪಸಂಖ್ಯಾತರು ಗಣೇಶ ಮೂರ್ತಿ ವಿಸರ್ಜನೆ ವೇಳೆಯಲ್ಲಿ ಹಾಗೂ ಪೊಲೀಸ್ ಪೇದೆ ಗುಂಪು ಘರ್ಷಣೆ ಸಾವಿನ ಘಟನೆಗೆ ಸಂಬಂಧಿಸಿ ವಿನಾಕಾರಣ ಅಮಾಯಕರನ್ನು ಬಂಧಿಸಿರುವ ಪೊಲೀಸರ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಕ್ಸಮರ ನಡೆಸಿದರು.
ಜೆ.ಕೆ.ಕೃಷ್ಣಾರೆಡ್ಡಿ ಜೆಡಿಎಸ್ ಅಭ್ಯರ್ಥಿ:  ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಪರ ಅಭ್ಯರ್ಥಿಯಾಗಿ ಜೆಡಿಎಸ್‌ನ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಜೆ.ಕೆ. ಕೃಷ್ಣಾರೆಡ್ಡಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದರು.
ನಂತರ ಮಾತನಾಡಿದ ಜೆ.ಕೆ. ಕೃಷ್ಣಾರೆಡ್ಡಿ ಅವರು, ಕ್ಷೇತ್ರದಲ್ಲಿ 60 ವರ್ಷಗಳಿಂದ ಕುಟುಂಬ ರಾಜಕಾರಣ ಮಾಡುತ್ತಿರುವ ಸ್ಥಳೀಯ ಶಾಸಕರು ಅಭಿವೃದ್ಧಿ ಕಾರ್ಯಗಳೆಂದು ಹೇಳುತ್ತಾ ಜನಸಾಮಾನ್ಯರು ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರು ನಗರದಲ್ಲಿ ವಾಸಿಸಲು ಸಾಧ್ಯವಾಗದೆ ಜನ ನೊಂದಿದ್ದಾರೆ. ನಾನು ಎಂದು 'ಬಿ' ಫಾರಂಗಾಗಿ ಬೆಂಗಳೂರಿನಲ್ಲಿ ಸಚಿವರ ಮನೆಗಳ ಹತ್ತಿರ ಮನೆ ಬಾಗಿಲು ಕಾಯುವ ಕೆಲಸ ಮಾಡಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಬದುಕಲು ಹಕ್ಕಿದೆ. ಆದರೆ, ಶಾಸಕರ ಒತ್ತಡಕ್ಕೆ ಮಣಿದು ಹಲವು ಅಧಿಕಾರಿಗಳು ಏಕಪಕ್ಷೀಯವಾಗಿ ವರ್ತಿಸುತ್ತಿರುವುದು ಖಂಡನೀಯ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಎಚ್.ಡಿ. ಕುಮಾರಸ್ವಾಮಿ ಹೆಲಿಕ್ಯಾಪ್ಟರ್‌ನಲ್ಲಿ ಚಿಂತಾಮಣಿ-ಶಿಡ್ಲಘಟ್ಟ ರಸ್ತೆಯ ಫಾರಂ ಹೌಸ್‌ನಲ್ಲಿ ಲ್ಯಾಂಡ್ ಆಗಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಮುಖಂಡರು ಬೃಹತ್ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು.
ಈ ಸಂದರ್ಭ ವೇದಿಕೆಯಲ್ಲಿದ್ದ ಚಿಕ್ಕಬಳ್ಳಾಪುರ-ಕೋಲಾರ ಜೆಡಿಎಸ್ ಜಿಲ್ಲಾಧ್ಯಕ್ಷ, ಶಾಸಕ ವೆಂಕಟಶಿವಾರೆಡ್ಡಿ, ರಾಜಣ್ಣ, ಕೋಮಲ್ ನಿರ್ದೇಶಕ ಟಿ.ಎನ್.ರಾಜಗೋಪಾಲ್, ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಅಮರನಾಥ್, ಮಾಜಿ ಎಪಿಎಂಸಿ ಅಧ್ಯಕ್ಷ ವಿ.ಸುಬ್ಬಾರೆಡ್ಡಿ, ನಗರಸಭಾ ವಿರೋಧ ಪಕ್ಷದ ನಾಯಕ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಪೆದ್ದೂರು ನಾಗರಾಜರೆಡ್ಡಿ, ಅಬ್ಬಗುಂಡು ಚಲಪತಿ, ಡಿ.ಸಾದಪ್ಪ, ಬಿ.ಆರ್.ಶ್ರೀನಾಥ್, ಕೈವಾರ ಸುಬ್ಬಾರೆಡ್ಡಿ, ಗೋಪಲ್ಲಿ ರಘುನಾಥರೆಡ್ಡಿ, ಮಸಲಹಳ್ಳಿ ಮಂಜು, ರಾಘುಟ್ಟಹಳ್ಳಿ ರಘುನಾಥರೆಡ್ಡಿ, ದಿನ್ನಮಿಂದಪಲ್ಲಿ ಬೈರಾರೆಡ್ಡಿ, ರಾಚಾಪುರ ಸೀನ, ಬಂದಾರ್ಲಹಳ್ಳಿ ಮಂಜು ಸೇರಿದಂತೆ 29 ನಗರಸಭಾ ಅಭ್ಯರ್ಥಿಗಳು ಹಾಗೂ ಮುಖಂಡರು ಮತ್ತು ಸಾವಿರಾರು ಜೆಡಿಎಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.