ಅಂತರ್ಜಲ ಕುಸಿತ: ನೀರಿಗಾಗಿ ಪರದಾಟ
ಕ.ಪ್ರ.ವಾರ್ತೆ ್ಣ ಕೋಲಾರ ್ಣ ಮಾ.19
ನಗರದಲ್ಲಿ ಅಂತರ್ಜಲ ಕುಸಿತದಿಂದಾಗಿ ಜನತೆ ತತ್ತರಿಸುವಂತಾಗಿದೆ.
ಬೇಸಿಗೆಯ ಕಾವು ಹೆಚ್ಚಾಗುತ್ತಿರುವುದರಿಂದ ಕಳೆದ ವರ್ಷ ವಿವಿಧ ಯೋಜನೆಗಳ ಅಡಿಯಲ್ಲಿ ಕೊರೆಸಿರುವ 105 ಕೊಳವೆ ಬಾವಿಗಳಲ್ಲಿ ಇಳುವರಿ ಕಡಿಮೆ ಆಗಿರುವುದರಿಂದ ಜನತೆಯ ಬೇಡಿಕೆಗೆ ತಕ್ಕಂತೆ ನೀರು ಪೂರೈಕೆ ಮಾಡುವುದು ನಗರಸಭೆ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
ಮಳೆ ಬರುವ ತನಕ ಅಂತರ್ಜಲ ವೃದ್ಧಿಸುವುದು ಕಷ್ಟ. ಇನ್ನಷ್ಟು ಹೊಸ ಕೊಳವೆ ಬಾವಿಗಳನ್ನು ಕೊರೆಸುವುದಕ್ಕೆ ಹಣಕಾಸಿನ ಸಮಸ್ಯೆ ಇಲ್ಲ. ಆದರೆ, ಅಂತರ್ಜಲ ಪಾತಾಳ ಮುಟ್ಟಿರುವುದರಿಂದ ಭೂಮಿಯನ್ನು ಬಗೆದರೂ ಪ್ರಯೋಜನವಿಲ್ಲದಂತಾಗಿದೆ.
1250 ಅಡಿ ಭೂಮಿ ಕೊರೆದರೂ ನೀರು ಸಿಗುತ್ತಿಲ್ಲ. ಕಳೆದ ವರ್ಷ ಕೊರೆಸಿದ ಕೊಳವೆ ಬಾವಿಗಳಲ್ಲಿ ಅಲ್ಪ-ಸ್ವಲ್ಪ ನೀರು ಸಿಕ್ಕಿದ್ದರಿಂದ ಕೆಲವು ಕಡೆ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡಲು ನಗರಸಭೆಯಿಂದ ವ್ಯವಸ್ಥೆ ಮಾಡಲಾಗಿತ್ತು. ಮಳೆ ಅಭಾವದಿಂದ ಕೊಳವೆ ಬಾವಿಗಳು ಒತ್ತಿ ಹೋಗುತ್ತಿವೆ. ಸಾವಿರಾರು ರು. ಖರ್ಚು ಮಾಡಿ 20 ರಿಂದ 22 ಎಚ್.ಪಿ. ಮೋಟಾರ್ ಪಂಪ್ಸೆಟ್ಗಳನ್ನು ಅಳವಡಿಸಿದ್ದರೂ ನೀರು ಮೇಲೆತ್ತಲು ಸಾಧ್ಯವಾಗುತ್ತಿಲ್ಲ. ಜತೆಗೆ ಕೋಲಾರ ನಗರಕ್ಕೆ ದಿನಕ್ಕೆ 2 ಗಂಟೆಗಳಿಗಿಂತ ಕಡಿಮೆ ವಿದ್ಯುತ್ ಪೂರೈಕೆ ಆಗುತ್ತಿರುವುದರಿಂದ ಜನತೆಗೆ ನ್ಯಾಯ ಒದಗಿಸಲು ನಗರಸಭೆಯ ಅಧಿಕಾರಿಗಳು ಪರದಾಡುವಂತಾಗಿದೆ.
ಕೋಲಾರ ನಗರದಲ್ಲಿ ಪ್ರಸ್ತುತ 1.33 ಲಕ್ಷ ಜನ ಸಂಖ್ಯೆಯಿದ್ದು ಪ್ರತಿಯೊಬ್ಬರಿಗೆ ಸರ್ಕಾರದ ನಿಯಮದ ಪ್ರಕಾರ ದಿನಕ್ಕೆ 40 ರಿಂದ 50 ಲೀಟರ್ ನೀರು ಒದಗಿಸಬೇಕು. ಆದರೆ, ಅಂತರ್ಜಲ ಕುಸಿತ ಮತ್ತು ವಿದ್ಯುತ್ ಸಮಸ್ಯೆಯಿಂದಾಗಿ ಜನರ ಬೇಡಿಕೆ ಪೂರೈಸಲು ಆಗುತ್ತಿಲ್ಲ. ಕೋಲಾರ ನಗರಕ್ಕೆ ನೀರು ಸರಬರಾಜು ಮಾಡುತ್ತಿರುವ ಕೋಲಾರಮ್ಮ ಕೆರೆ, ಅಮ್ಮೇರಹಳ್ಳಿ ಕರೆ, ಕೋಡಿಕಣ್ಣೂರು ಕೆರೆ ಹಾಗೂ ಮಡೇರಹಳ್ಳಿ ಕೆರೆಗಳಲ್ಲಿನ ಕೊಳವೆ ಬಾವಿಗಳಲ್ಲೂ ಇಳುವರಿ ಕಡಿಮೆ ಆಗಿದೆ. ಲಭ್ಯವಿರುವ ನೀರನ್ನು ಸರಬರಾಜು ಮಾಡಲು ವಿದ್ಯುತ್ ಅಡ್ಡಿಯಾಗಿದೆ.
ನಗರದಲ್ಲಿ ಒಟ್ಟು 319 ಕೊಳವೆ ಬಾವಿಗಳಿದ್ದು, 61 ಸಂಪೂರ್ಣವಾಗಿ ಬತ್ತಿ ಹೋಗಿವೆ. 128ರಲ್ಲಿ ಅಲ್ಪ-ಸ್ವಲ್ಪ ನೀರಿದ್ದರೂ ಮೋಟಾರ್ ಪಂಪ್ ಕೆಟ್ಟು ಹೋಗಿರುವುದರಿಂದ ದುರಸ್ತಿ ಆಗಬೇಕಾಗಿದೆ. ಇನ್ನುಳಿದ 130ರಲ್ಲಿ ಇಳುವರಿ ಕಡಿಮೆ ಆಗಿರುವುದರಿಂದ ಜನತೆಯ ಸಮಸ್ಯೆ ಅರಿತು 16 ಟ್ಯಾಂಕರ್ಗಳ ಮೂಲಕ ದಿನಕ್ಕೆ 100 ಲೋಡ್ ನೀರು ಒದಗಿಸಲಾಗುತ್ತಿದೆ. ಹೊಸದಾಗಿ ನಗರಸಭೆ ಆಯ್ಕೆಯಾಗಿರುವ ಅನೇಕ ಸದಸ್ಯರು ಕೌನ್ಸಿಲ್ ಆರಂಭಕ್ಕೆ ಮುನ್ನವೇ ನಗರಸಭೆಗೆ ಭೇಟಿ ನೀಡಿ ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ನಗರದಲ್ಲಿ ನೀರಿನ ಸಮಸ್ಯೆ ಇರುವುದೇನೋ ನಿಜ. ಆದರೆ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ನೆಪದಲ್ಲಿ ಸರ್ಕಾರ ನೀಡುವ ಅನುದಾನ ಹಾಗೂ ಜನರ ತೆರಿಗೆ ಹಣ ದುರ್ಬಳಕೆ ಆಗದಂತೆ ಸದಸ್ಯರು ಮನಸ್ಸು ಮಾಡಿದಲ್ಲಿ ಜನತೆಯ ಬೇಡಿಕೆ ಪೂರೈಸಲು ಸಾಧ್ಯವಾಗುತ್ತದೆ.
ಕಳೆದ ವರ್ಷ ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರ್ ಪ್ರಕಾಶ್ ನಗರ ವ್ಯಾಪ್ತಿಯ ಕೆರೆಗಳಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಸಿ ಪೈಪ್ಲೈನ್ ಮೂಲಕ ನಗರದ ಶೇ.75 ಭಾಗಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿದ್ದರು.
ಅನೇಕ ವರ್ಷಗಳಿಂದ ಹೂಳು ತುಂಬಿ ನಿಷ್ಕ್ರಿಯಗೊಂಡಿದ್ದ ಜೋಡಿ ನೀರಿನ ಟ್ಯಾಂಕ್ಗಳನ್ನು ಸ್ವಚ್ಛ ಮಾಡಿಸಿ ನೀರಿನ ಬವಣೆ ನಿವಾರಣೆ ಮಾಡಿದ್ದರಾದರೂ ಕಳೆದ 20 ದಿನಗಳಿಂದ ವಿದ್ಯುತ್ ಕಡಿತ ಹೆಚ್ಚಾಗುತ್ತಿರುವುದರಿಂದ ಜನತೆ ಮತ್ತೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತರ್ಜಲ ಕುಸಿತದಿಂದಾಗಿ ಮುಂದಿನ ದಿನಗಳಲ್ಲಿ ನೀರಿಗಾಗಿ ಮತ್ತಷ್ಟು ಬವಣೆ ಎದುರಾಗಿಸಬೇಕಾಗಿರುವುದರಿಂದ ನಗರಸಭೆಯವರು ಪರಿಸ್ಥಿತಿ ನಿಭಾಯಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳದಿದದ್ದರೆ ಜನತೆಯ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

