ಕೋಲಾರ

ಮಾಜಿ ಸೈನಿಕರ ಆಸ್ಪತ್ರೆಗೆ ತಜ್ಞ ವೈದ್ಯರು ಸಿಗುತ್ತಿಲ್ಲ

Published On :

ಕ.ಪ್ರ.ವಾರ್ತೆ ್ಣ ಕೋಲಾರ ್ಣ ಮಾ.19
ನಗರದಲ್ಲಿ ಪ್ರಾರಂಭಿಸಿರುವ ಇಸಿಎಚ್‌ಎಸ್ ಪಾಲಿಕ್ಲಿನಿಕ್‌ಗೆ ತಜ್ಞ ವೈದ್ಯರೊಬ್ಬರನ್ನು ನೇಮಿಸಿಕೊಳ್ಳುವುದಕ್ಕಾಗಿ ಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟಿಸಿದ್ದರೂ ಯಾವುದೇ ವೈದ್ಯರಿಂದ ಅರ್ಜಿಗಳು ಬಂದಿಲ್ಲವೆಂದು ಬೆಂಗಳೂರಿನ ಯಲಹಂಕದಲ್ಲಿರುವ ಸೈನಿಕರ ಕೇಂದ್ರದ ಮುಖ್ಯ ಸಹಾಯಕ ಅಧಿಕಾರಿ ಜೆಕಾಬ್ ತಿಳಿಸಿದರು.
ಅವರು ಮಂಗಳವಾರ ನಗರದ ಇಸಿಎಚ್‌ಎಸ್ ಪಾಲಿಕ್ಲಿನಿಕ್‌ನಲ್ಲಿ ಮಾಜಿ ಸೈನಿಕರ ಕುಂದುಕೊರತೆ ಸಭೆಯಲ್ಲಿ ಬಾಗವಹಿಸಿ ಮಾತನಾಡಿ, ತಜ್ಞ ವೈದ್ಯರ ನೇಮಕ್ಕೆ ತಾವು ಈಗಾಗಲೇ ಜಾಹಿರಾತು ಪ್ರಕಟಿಸಿ ಮಾಸಿಕ 55 ಸಾವಿರ ರು. ವೇತನ ನೀಡುವುದಾಗಿ ತಿಳಿಸಿದ್ದರೂ ವೈದ್ಯರು ಯಾರು ಮುಂದೆ ಬಂದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಮಾಜಿ ಸೈನಿಕರು ತುರ್ತು ಚಿಕಿತ್ಸೆ ಅವಶ್ಯಕತೆಯಿದ್ದರೆ ಹತ್ತಿರದಲ್ಲಿರುವ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಪಡೆದು ನಂತರ ಚಿಕಿತ್ಸೆಯ ದಾಖಲೆಗಳನ್ನು ಒದಗಿಸಿದರೆ ವೈದ್ಯಕೀಯ ವೆಚ್ಚವನ್ನು ಮರು ಪಾವತಿ ಮಾಡುವುದಾಗಿ ತಿಳಿಸಿದರು.
ಬೆಂಗಳೂರಿನಲ್ಲಿರುವ ಎಂ.ಎಸ್. ರಾಮಯ್ಯ, ಹಾಸ್ಮಟ್ ಆಸ್ಪತ್ರೆಗಳಲ್ಲೂ ಮಾಜಿ ಸೈನಿಕರು ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು ನೆರವಾಗುವಂತೆ ಆ ಎರಡು ಆಸ್ಪತ್ರೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು ಇದರ ಪ್ರಯೋಜನ ಪಡೆಯುವಂತೆ ಹೇಳಿದರು.
ಕೋಲಾರದಲ್ಲಿರುವ ಆಸ್ಪತ್ರೆಯನ್ನು ಕೆಜಿಎಫ್‌ಗೆ ಸ್ಥಳಾಂತರಿಸುವ ಬಗ್ಗೆ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮಾಜಿ ಸೈನಿಕರ ಆತಂಕ ನಿವಾರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಜಿ ಸೈನಿಕರು ಕೋಲಾರ ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆಯನ್ನು ಸ್ಥಳಾಂತರಿಸುವುದು ಬೇಡ, ತಜ್ಞರ ವೈದ್ಯರನ್ನು ನೇಮಕ ಮಾಡಿ, ಎಲ್ಲಾ ಮಾಜಿ ಸೈನಿಕರಿಗೆ ಇಸಿಎಚ್‌ಎಸ್‌ಕಾರ್ಡ್ ನೀಡಬೇಡಕೆಂದು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.
ಪಾಲಿ ಕ್ಲಿನಿಕ್‌ನ್ನು ಕೆಲವರು ಕೆಜಿಎಫ್‌ಗೆ ವರ್ಗಾಯಿಸಲು ಹುನ್ನಾರ ನಡೆಸುತ್ತಿದ್ದು, ಒಂದು ವೇಳೆ ಸ್ಥಳಾಂತರಿಸಿದರೆ ಸಾಕಷ್ಟು ಮಂದಿಗೆ ತೊಂದರೆಯಾಗಲಿದೆ ಎಂದು ಮಾಜಿ ಸೈನಿಕರು ದೂರಿದರು.
ಕೋಲಾರ, ಹೊಸಕೋಟೆ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಹಾಗೂ ಆಂಧ್ರದ ಗಡಿಭಾಗದ ಮಾಜಿ ಸೈನಿಕರು ಕೋಲಾರಕ್ಕೆ ಬಂದು ಆರೋಗ್ಯ ಸೇವೆಯನ್ನು ಪಡೆದುಕೊಂಡು ಹೋಗುತ್ತಿದ್ದಾರೆ. ಈ ಘಟಕವನ್ನು ಕೆಜಿಎಫ್ ಗೆ ಸ್ಥಳಾಂತರಿಸಿದ್ದರೆ ಸಾಕಷ್ಟು ಮಾಜಿ ಸೈನಿಕರು ಸೌಲಭ್ಯದಿಂದ ವಂಚಿತರಾಗುತ್ತಾರೆ ಎಂದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜಗನ್ನಾಥ್ ಮಾತನಾಡಿ, ಕೋಲಾರ ಕೇಂದ್ರದಲ್ಲಿರುವ ಕಟ್ಟಡ ಸಾಕಷ್ಟು ಚಿಕ್ಕದಾಗಿರುವುದರಿಂದ ಇಲ್ಲಿಗೆ ಬರುವಂತಹ ಸೈನಿಕರಿಗೆ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ ಎಂದರು.
ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ನಿವೇಶನಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. 100್ಢ700 ಅಡಿ ಅಳತೆಯ ನಿವೇಶನ ಮಂಜೂರು ಮಾಡಿದಲ್ಲಿ ಸುಸಜ್ಜಿತ ಕಟ್ಟಡದ ನಿರ್ಮಾಣದ ಜೊತೆಗೆ ಕ್ಯಾಂಟಿನ್ ವ್ಯವಸ್ಥೆ ಮಾಡಬಹುದೆಂದು ಅಭಿಪ್ರಾಯಪಟ್ಟರು.
ಈ ಸಂಬಂಧ ತಾವು ಈಗಾಗಲೇ ಈ ಭಾಗದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರು ಪ್ರಕಾಶ್ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕೆಲವು ವೈದ್ಯರು ದಂತ ಚಿಕಿತ್ಸೆ, ಸ್ಕ್ಯಾನಿಂಗ್ ವ್ಯವಸ್ಥೆ ಆಗಬೇಕಾಗಿದೆ ಎಂದು ಒತ್ತಾಯಿಸಿದರು.
ವಾಯು ಸೇನೆಯ ನಿವೃತ್ತ ಅಧಿಕಾರಿ ನಾಯ್ಡು, ಗ್ರೂಫ್ ಕ್ಯಾಪ್ಟನ್ ಪ್ರೇಮಕುಮಾರ್, ಡಾ.ಬಾಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.