ಅಂತಾರಾಷ್ಟ್ರೀಯ ಹಿರಿಯ ಕ್ರೀಡಾಪಟು ಮಾರಪ್ಪಗೆ ಸನ್ಮಾನ
ಕೋಲಾರ: ಹಿರಿಯ ಕ್ರೀಡಾಪಟು ಮೂರಂಡಹಳ್ಳಿ ವಿ. ಮಾರಪ್ಪ ಸೋಲಿಲ್ಲದ ಸರದಾರ, ಪ್ರತಿ ಸಾರಿ ಅಂತಾರಾಷ್ಟ್ರೀಯ ಹಿರಿಯರ ಕೂಟದಲ್ಲಿ ಭಾಗವಿಸಿದಾಗಲೆಲ್ಲ ಪದಕ ಇಲ್ಲದೆ ದೇಶಕ್ಕೆ ವಾಪಸ್ ಆಗಿಲ್ಲ, ಇವರ ಸಾಧನೆ ಜಿಲ್ಲೆಗೆ ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ಥಾಯ್ಲ್ಯಾಂಡ್ನ ಕೋನ್ಕೀನ್ನಲ್ಲಿ ನಡೆದ 18ನೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕ ಗೆದ್ದ ವಿ. ಮಾರಪ್ಪಗೆ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಾರಪ್ಪ ಕೋಲಾರ ಜಿಲ್ಲೆಯ ಕ್ರೀಡಾ ಕ್ಷೇತ್ರವನ್ನು ಅಂತಾರಾಷ್ಟ್ರೀಯ ಮಟ್ಟದವರೆಗೂ ತಲುಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆಂದ ಅವರು, ಇದುವರೆಗೂ 97 ಪದಕಗಳನ್ನು ಗೆದ್ದಿರುವುದರ ಹಿಂದೆ ಅವರ ಕಷ್ಟ, ಪರಿಶ್ರಮ ಸಾಕಷ್ಟು ಇದ್ದು ಇದಕ್ಕೆ ಜಿಲ್ಲೆಯ ಜನತೆಯ ಕ್ರೀಡಾಭಿಮಾನಿಗಳು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು. ಜಿಲ್ಲೆಯ ಕ್ರೀಡಾ ಇಲಾಖೆಯಿಂದಲೇ ಮಾರಪ್ಪನವರಿಗೆ ಅರ್ಥಪೂರ್ಣ ಸನ್ಮಾನ ಕಾರ್ಯಕ್ರಮ ನಡೆಸಬೇಕಾಗಿತ್ತು, ಸರ್ಕಾರದಿಂದ ಕ್ರೀಡಾ ಇಲಾಖೆಗೆ ಪ್ರತಿ ವರ್ಷ ಸಾಕಷ್ಟು ಸಾಕಷ್ಟು ಬರುತ್ತಿದೆ. ಆದರೆ, ಈ ಹಣ ಏನಾಗುತ್ತಿದೆಯೋ ಎಂದು ಅನುಮಾನ ವ್ಯಕ್ತಪಡಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿ ಅಂತಾರಾಷ್ಟ್ರೀಯ ಕ್ರೀಡಾಪಟು ವಿ.ಮಾರಪ್ಪ ಸುಮಾರು 10 ವರ್ಷಗಳಿಂದ ಹಿರಿಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಇದುವರೆಗೂ 97 ಪದಕಗಳನ್ನು ಗೆದ್ದಿದ್ದು, ಈ ಸಾಧನೆಗೆ ತಮ್ಮ ಪತ್ನಿ ಮತ್ತು ಕುಟುಂಬ ಕಾರಣ ಎಂದರು. ತಾವು ಇಷ್ಟು ಪದಕಗಳನ್ನು ಗೆದ್ದಿದ್ದರೂ ಇದರಿಂದ ತಮಗೆ ಯಾವುದೇ ಲಾಭವಾಗಲೀ,ನಷ್ಟವಾಗಲೀ ಇಲ್ಲ, ಕೇವಲ ಆರೋಗ್ಯದ ದೃಷ್ಟಿಯಿಂದ ತಾವು ಮಾಡುತ್ತಿರುವುದಾಗಿ ಹೇಳಿದರು. ಹೊರದೇಶಗಳಿಗೆ ತಾವು ಪ್ರತಿ ಬಾರಿ ಹೋಗಲು ಹಣದ ವ್ಯವಸ್ಥೆಗೆ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿರುವುದಾಗಿ ಹೇಳಿದ ಅವರು, ಕ್ರೀಡಾ ಇಲಾಖೆಯಿಂದ ಯಾವುದೇ ಅನುದಾನ ಸಿಗುತ್ತಿಲ್ಲ ಎಂದರು. ಥಾಯ್ಲ್ಯಾಂಡ್ಗೆ ಹೋಗಲು ತಮಗೆ ಬಂಗಾರಪೇಟೆಯ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ 45 ಸಾವಿರ ನೀಡಿದರು.ಇದರಿಂದ ತಾವು ಹೆಚ್ಚಿನ ತರಬೇತಿಯನ್ನು ಬೆಂಗಳೂರಿನಲ್ಲಿ ಪಡೆದ ಹಿನ್ನೆಲೆಯಲ್ಲಿ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಎತ್ತರ, ಉದ್ದ ಮತ್ತು ಟ್ರಿಪಲ್ ಜಂಪ್ನಲ್ಲಿ ಚಿನ್ನದ ಪದಕವನ್ನು ಪಡೆದು ದಾಖಲೆ ನಿರ್ಮಿಸಲು ಸಹಕಾರಿಯಾಯಿತು ಎಂದರು.
ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಜಯದೇವ್, ಬುಸನಹಳ್ಳಿ ಆಂಜಿನಪ್ಪ, ಡಾ.ಸಿ. ಮೋಹನ್, ಹಿರಿಯ ಕ್ರೀಡಾಪಟುಗಳಾದ ಗೌಸಖಾನ್, ನಾರಾಯಣಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

