ಕೋಲಾರ

ಅತಿಥಿ ಉಪನ್ಯಾಸಕರ ಸೇವೆ ಅನುಮೋದನೆಗೆ ಒತ್ತಾಯಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಕೋಲಾರ, ಮಾ.21
ವಿವಿಧ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರಾಗಿ ಆಯ್ಕೆಯಾಗಿರುವ ಉಪನ್ಯಾಸಕರ ಸೇವೆ ಅನುಮೋದಿಸಲು ಒತ್ತಾಯಿಸಿ ಗುರುವಾರ ನಗರದಲ್ಲಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು.
ಉನ್ನತ ಶಿಕ್ಷಣ ಇಲಾಖೆ ಜಂಟೆ ಆಯುಕ್ತರ ಆದೇಶದಂತೆ 2012-13ನೇ ಶೈಕ್ಷಣಿಕ ಸಾಲಿನಲ್ಲಿ ಸಂದರ್ಶನದ ಮೂಲಕ ಆಯಾ ಕಾಲೇಜು ಪ್ರಾಂಶುಪಾಲರ ಸಮ್ಮುಖದಲ್ಲಿ ಆಯ್ಕೆಯಾಗಿರುವ ಎಲ್ಲಾ ಅತಿಥಿ ಉಪನ್ಯಾಸಕರು ಸೇವೆ ಮುಂದುವರೆಸಲು ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಉಪನ್ಯಾಸಕರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯನವರಿಗೆ ಮನವಿ ಸಲ್ಲಿಸಿದರು.
ಸುಮಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಾ, ಸರ್ಕಾರ ಕೊಡುವ ಅಲ್ಪ ಸಂಬಳದಲ್ಲಿ ಕಷ್ಟಕರ ಜೀವನ ಮಾಡುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಕಾಯಂ ಅಥವಾ ಸೇವಾ ಭದ್ರತೆಗಾಗಿ ಅನೇಕ ಸಲ ಮನವಿ ಪ್ರತಿಭಟನೆಗಳನ್ನು ಹಮ್ಮಿಕೊಂಡರು ಯಾವುದೇ ಪ್ರಯೋಜವಿಲ್ಲ ಎಂದು ಆರೋಪಿಸಿದರು.
2012-13ನೇ ಸಾಲಿಗೆ ರಾಜ್ಯಾದ್ಯಂತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹೆಚ್ಚುವರಿ ಕಾರ್ಯಭಾರ ಇರುವ ಕಡೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದಂತೆ ಸಂದರ್ಶನ ಮೂಲಕ ಪ್ರಾಂಶುಪಾಲರ ಸಮ್ಮುಖದಲ್ಲಿ ಆಯ್ಕೆ ಮಾಡಿ 8 ತಿಂಗಳ ನಂತರ ಜಂಟೆ ನಿರ್ದೇಶಕರು ಮತ್ತು ಪ್ರಿನ್ಸಿಪಾಲರು ಕೊಟ್ಟಿರುವ ಕಾರ್ಯಭಾರ ಸರಿಯಿಲ್ಲ ಎಂದು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ಕಾರ್ಯಭಾರವನ್ನು ಕಡಿತಗೊಳಿಸಲು ಸರ್ಕಾರ ಹೊರಡಿಸಿರುವ ಆದೇಶ ಕರಾಳ ಶಾಸನವಾಗಿದೆ ಎಂದು ದೂರಿದರು.
ಈ ಆದೇಶದಿಂದ ಸುಮಾರು 4500 ಅತಿಥಿ ಉಪನ್ಯಾಸಕರು ಎಂಟು ತಿಂಗಳು ಕೆಲಸ ನಿರ್ವಹಿಸಿ ಸಂಬಳವಿಲ್ಲದೆ ಬರಿಗೈಯಲ್ಲಿ ಕರ್ತವ್ಯದಿಂದ ಬಿಡುಗಡೆಯಾಗುವಂತಾಗಿದೆ ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ರಾಜ್ಯಾಧ್ಯಕ್ಷ ರವಿಕುಮಾರ್, ನಾಗನಾಳ ಮುನಿಯಪ್ಪ, ಎಸ್.ಎಂ. ರಮಾನಂದ, ಚೌಡೇಗೌಡ, ಸಂದೀಪ್, ಯಲ್ಲಪ್ಪ, ಕೆ.ಎನ್.ರಮೇಶ್, ಶ್ರೀನಿವಾಸ್, ನೂರ್ ಅಹಮದ್, ನಳಿನಿ, ಕಿರಣ್‌ಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.