ಕೋಲಾರ

ಕೆಜಿಎಫ್ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಜಟಾಪಟಿ

Published On :

ಕ.ಪ್ರ ವಾರ್ತೆ ್ಣ ಕೋಲಾರ ್ಣ ಮಾ.21
ಕೆಜಿಎಫ್ ಮೀಸಲು ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಾಲಿ ಶಾಸಕ ವೈ.ಸಂಪಂಗಿ ಹರಸಾಹಸ ಮಾಡುತ್ತಿದ್ದರೆ ಇವರಿಗೆ ಟಿಕೆಟ್ ತಪ್ಪಿಸಲು ವಿರೋಧಿ ಗುಂಪು ಶತ ಪ್ರಯತ್ನ ನಡೆಸುತ್ತಿದೆ.
ಈ ಬಾರಿ ಹೇಗಾದರೂ ಮಾಡಿ ಟಿಕೆಟ್ ಪಡೆಯಬೇಕೆಂದು ಪಕ್ಷದ ನಾಲ್ವರು ಕಾರ್ಯಕರ್ತರು ಪೈಪೋಟಿ ನಡೆಸಿದ್ದಾರೆ. ಇದರಿಂದಾಗಿ ಪಕ್ಷದ ವರಿಷ್ಠರು ಕೆಜಿಎಫ್ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲಾಗದೆ ಪೇಚಿಗೆ ಸಿಲುಕಿದ್ದಾರೆ.
ಶಾಸಕರ ಭವನದಲ್ಲಿ ಕೆಜಿಎಫ್ ನಿವಾಸಿಯೊಬ್ಬರಿಂದ ರು. 5 ಲಕ್ಷ ಲಂಚ ಪಡೆದ ಆರೋಪದ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ಶಾಸಕ ಸಂಪಂಗಿ ಅವರಿಗೆ ಮತ್ತೆ ಟಿಕೆಟ್ ನೀಡಿದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ. ಜತೆಗೆ, ಶಾಸಕರು ಸ್ಥಳೀಯ ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಕೆಲವು ಕಟ್ಟಡ ನೆಲಸಮ ಮಾಡುವ ಮಾಡುವ ವಿಚಾರದಲ್ಲೂ ನಾಗರಿಕರನ್ನು ಎದುರು ಹಾಕಿಕೊಂಡಿರುವುದು ಪಕ್ಷಕ್ಕೆ ಮುಜುಗರ ತಂದಿರುವುದರಿಂದ ಕೆಜಿಎಫ್ ಬಿಜೆಪಿ ಘಟಕದ ಕೆಲ ಪದಾಧಿಕಾರಿಗಳು ಸಂಪಂಗಿ ಅವರಿಗೆ ಟಿಕೆಟ್ ನೀಡದಂತೆ ವರಿಷ್ಠರಲ್ಲಿ ಒತ್ತಾಯಿಸಿರುವುದರಿಂದ ಕೆಜಿಎಫ್ ಕ್ಷೇತ್ರ ಬಿಜೆಪಿ ವರಿಷ್ಠರಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಈ ಮಧ್ಯೆ ಈ ಬಾರಿ ತಮಗೆ ಟಿಕೆಟ್ ನೀಡಬೇಕೆಂದು ಕೆಜಿಎಫ್‌ನವರೇ ಆದ ಡಾ.ದಿನಕರನ್, ಡಾ.ಹರಿವಳಗನ್, ಜಿಪಂ ಸದಸ್ಯೆ ಮುತ್ಯಾಲಮ್ಮ ಹಾಗೂ ಆನೇಕಲ್ ತಾಲೂಕಿನ ಜಿ.ನಾಗರಾಜ್ ಅರ್ಜಿ ಸಲ್ಲಿಸಿರುವುದರಿಂದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರುವುದು ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸಿದೆ.
2004ರ ಚುನಾವಣೆಯಲ್ಲಿ ಡಾ.ದಿನಕರನ್ ಸಾವಿರ ಮತಗಳ ಅಂತರದಿಂದ ಸೋತಿದ್ದರು. 2008ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿ ವೈ.ಸಂಪಂಗಿ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು. ಸಂಪಂಗಿ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡಿದಲ್ಲಿ ಪಕ್ಷದಲ್ಲಿ ಬಂಡಾಯ ಉದ್ಭವಿಸುವುದರಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬೇಕೆಂದು ಕೆಜಿಎಫ್ ಬಿಜೆಪಿ ಘಟಕದ ಪದಾಧಿಕಾರಿಗಳು ಡಾ.ದಿನಕರನ್ ಪರವಾಗಿ ಲಾಬಿ ನಡೆಸಿದ್ದಾರೆ.
ಅದೇ ರೀತಿ ವಾಜಪೇಯಿ ಪ್ರತಿಷ್ಠಾನದ ಮೂಲಕ ಸಮಾಜಿಕ ಕಾರ್ಯಕರ್ತರಾಗಿ ಗುರುತಿಸಿ ಕೊಂಡಿರುವ ಡಾ.ಹರಿವಳಗನ್ ಅವರಿಗೆ ಅವಕಾಶ ನೀಡುವುದರಿಂದ ಸ್ಥಳೀಯ ಮತದಾರರ ಬೆಂಬಲ ಸಿಗುತ್ತದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಗ್ರಾಮೀಣ ಪ್ರದೇಶದ ಸಾಮಾನ್ಯ ಮಹಿಳಾ ಕಾರ್ಯಕರ್ತೆಯಾಗಿದ್ದ ತಾವು ಪಕ್ಷಕ್ಕೆ ನೀಡಿದ ಸೇವೆಯಿಂದಾಗಿ ಜಿ.ಪಂ ಸದಸ್ಯೆಯಾಗಿ, ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು, ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ನೀಡಿದಲ್ಲಿ ಮಹಿಳಾ ಮೀಸಲಾತಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದಿರುವ ಮುತ್ಯಾಲಮ್ಮ ಈಗಾಗಲೇ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಹಾಲಿ ಶಾಸಕ ಸೇರಿದಂತೆ ನಾಲ್ವರು ಟಿಕೆಟ್‌ಗಾಗಿ ಮನವಿ ಮಾಡಿರುವುದರ ಜತೆಗೆ ಸಚಿವ ಎ.ನಾರಾಯಣಸ್ವಾಮಿ ಸಂಬಂಧಿ ಎನ್ನಲಾದ ಹಾಗೂ ಆನೇಕಲ್ ತಾಲೂಕಿನ ಹಾಲಿ ಜಿಪಂ ಸದಸ್ಯ ಜಿ.ನಾಗರಾಜ್ ಸಹ ಆಕಾಂಕ್ಷಿಯಾಗಿದ್ದಾರೆ.
ಕೆಜಿಎಫ್ ನಿಂದ ಸ್ಪರ್ಧಿಸಲು ಒಟ್ಟಾರೆ ಐದು ಮಂದಿ ಆಕಾಂಕ್ಷಿಗಳು ಇರುವುದರಿಂದ ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಹಾಲಿ ಶಾಸಕ ವೈ.ಸಂಪಂಗಿ ತಮಗೇ ಟಿಕೆಟ್ ಗ್ಯಾರೆಂಟಿ ಎಂದುಕೊಂಡು ಕ್ಷೇತ್ರ ಪರ್ಯಟನೆ  ಆರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.