ಚಿಕ್ಕಬಳ್ಳಾಪುರ: ಆಕಾಂಕ್ಷಿಗಳ ಪ್ರಾಬಲ್ಯವನ್ನು ಸರಿಯಾಗಿ ಮಾಪನ ಮಾಡಿ ಮುಂದೆ ಗೊಂದಲ ಉಂಟಾಗದಂತೆ ಸೂಕ್ತ ವ್ಯಕ್ತಿಗೆ ಪಕ್ಷದ ಟಿಕೆಟ್ ನೀಡುವ ಕೆಲಸದಲ್ಲಿ ನಾನಾ ಪಕ್ಷಗಳ ಹೈಕಮಾಂಡ್ ತೊಡಗಿದ್ದರ ನಡುವೆ ಕ್ಷೇತ್ರಗಳಲ್ಲಿ ಹೆಚ್ಚಾಗಿರುವ ಆಕಾಂಕ್ಷಿಗಳ ಪೈಪೋಟಿಯಿಂದ ಯಾವ ಆಕಾಂಕ್ಷಿಗಳಿಗೆ ಟಿಕೆಟ್ ಪಕ್ಕಾ ಸಿಗುತ್ತದೆ ಎಂಬ ವಿಷಯವು ಎಲ್ಲರಲ್ಲೂ ತೀವ್ರವಾಗಿ ಕುತೂಹಲ ಕಾಡುವಂತೆ ಮಾಡಿದೆ.
ಈಗಾಗಲೇ ಎಲ್ಲೆಡೆ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಮುಂದಿನ ದಿನಗಳಲ್ಲಿ ತೀವ್ರ ಪೈಪೋಟಿಗೆ ಸಾಕ್ಷಿಯಾಗುವ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿರುವುದರಿಂದ ಈಗಂತೂ ರಾಜಕೀಯ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರಿಗೆ ಬಿಡುವೇ ಇಲ್ಲದಂತಾಗಿದೆ. ಟಿಕೆಟ್ ಸಿಗುವುದು ಖಾತ್ರಿಯಾಗದಿದ್ದರೂ ಹಲವರು ತಮ್ಮ ಬೆಂಬಲಿಗರನ್ನು ಜತೆಗಿರಿಸಿಕೊಂಡು ಎಲ್ಲೆಡೆ ತಿರುಗಾಡುತ್ತಿದ್ದು ಬಹುತೇಕ ಕಡೆ ಸಭೆ, ಕಾರ್ಯಕ್ರಮಗಳನ್ನು ಹೆಚ್ಚಾಗಿಯೇ ಕೈಗೊಳ್ಳುತ್ತಿದ್ದಾರೆ. ಹಾಲಿ ಶಾಸಕರು ತಮ್ಮ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರೇನೋ ಎಂಬ ಅನುಮಾನ ಬರುವಂತೆ ಪ್ರವಾಸವನ್ನು ಕೈಗೊಂಡು ಆದಷ್ಟು ಕಡೆಗೆಲ್ಲಾ ಪ್ರತಿದಿನ ಸಂಚರಿಸುತ್ತಿದ್ದಾರೆ. ಈ ವಿಷಯದಲ್ಲಿ ತಾವು ಏನೂ ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ ಇತರೆ ಆಕಾಂಕ್ಷಿಗಳು ಸಹ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದರ ಜತೆಗೆ ಪಕ್ಷದ ಟಿಕೆಟಟ್ಗಾಗಿ ನಿರಂತರವಾಗಿ ಒತ್ತಡಗಳನ್ನು ಹೇರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿಯಾದರೂ ವಿದ್ಯಮಾನಗಳು ಬದಲಾವಣೆಯಾಗುತ್ತದೆ ಎನ್ನುವುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸದ್ಯಕ್ಕೆ ಮತದಾರರನ್ನು ತಮ್ಮ ಕಡೆಗೆ ಸೆಳೆದುಕೊಳ್ಳುವ ನಿಟ್ಟಿನಲ್ಲಿ ನಯವಾಗಿ ತಮಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಪ್ರತಿಯೊಂದು ಕಡೆಯೂ ಸಹ ಜನರಿಗೆ ಚುನಾವಣೆಯದ್ದೇ ಧ್ಯಾನ. ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾರು ಈ ಬಾರಿ ಯಾರ್ಯಾರು ಆಕಾಂಕ್ಷಿಗಳು ಯಾರಿಗೆ ಕೊನೆಯಲ್ಲಿ ಟಿಕೆಟ್ ನೀಡದೇ ಪಕ್ಷ ಕೈ ಕೊಡುತ್ತದೆ ನಿನ್ನೆ ಬೆಳವಣಿಗೆಗಳು ಏನೇನಾಯಿತು ಇಂದು ಏನಾಗುತ್ತದೆ ಎನ್ನುವುದರ ಬಗ್ಗೆಯೇ ಚರ್ಚೆಗಳಾಗುತ್ತಿವೆ.
ಒಳಗೊಳಗೆ ತಳಮಳ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್ ಸಿಗುತ್ತದೆ ಎನ್ನುವುದರ ವಿಷಯದಲ್ಲಿ ಹಲವರು ಬೆಟ್ಟಿಂಗ್ ಹಾಕಿಕೊಂಡಿದ್ದು ಕೇಂದ್ರ ಸಚಿವ ವೀರಪ್ಪ ಮೊಯ್ಲಿರವರು ಪ್ರಭಾವದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ. ಆಂಜಿನಪ್ಪಗೆ ಈ ಬಾರಿ ಟಿಕೆಟ್ ಪಕ್ಕಾ ಅಂತಾ ಹೇಳುವವರಿಗೆ ಪ್ರತಿಯಾಗಿ ಆಂಜಿನಪ್ಪ ಟಿಕೆಟ್ ಬೇರೆಯವರಿಗೆ ( ಜಿ.ಹೆಚ್.ನಾಗರಾಜ್) ಬಿಟ್ಟು ಕೊಡುತ್ತಾರೆ ನೋಡು ಎಂದು ಸವಾಲು ಹಾಕುವಂತಹುದು ನಡೆಯುತ್ತಿದೆ. ಮತ್ತೊಂದೆಡೆ ದೆಹಲಿಯಲ್ಲಿ ಶ್ರೀಲಂಕಾ ವಾಣಿಜ್ಯ ಪ್ರತಿನಿಧಿ ಕೆ. ಸುಧಾಕರ್ ಹೈಕಮಾಂಡ್ ಮನವೊಲಿಸಲಿದ್ದಾರೆ ಎಂದೇಳುವ ಮಾತುಗಳಿಗೂ ಏನೂ ಕಮ್ಮಿ ಇಲ್ಲ. ಹೀಗೆ ಅಂತೆ ಕಂತೆಗಳ ಮಾತುಗಳಲ್ಲಿ ಕೊನೆಗೆ ಯಾರಿಗೆ ಟಿಕೆಟ್ ಸಿಗುತ್ತದೆ ಎಂದು ಕಾದು ನೋಡುತ್ತಿರುವವರಲ್ಲಿ ತಳಮಳ ಜಾಸ್ತಿಯಾಗಿದೆ. ಜೆಡಿಎಸ್ ವಿಷಯಕ್ಕೆ ಬಂದರೆ, ಶಾಸಕ ಕೆ.ಪಿ. ಬಚ್ಚೇಗೌಡ ಮತ್ತು ಕೆಎಂಎಫ್ ನಿರ್ದೇಶಕ ಕೆ.ವಿ.ನಾಗರಾಜ್ ನಡುವೆ ತೀವ್ರ ಪೈಪೋಟಿ ಉಂಟಾಗಿದ್ದು ಇವರಲ್ಲಿ ಕಾಂಗ್ರೆಸ್‌ಗೆ ಯಾರು ಎದುರಾಳಿಯಾಗಿ ಚುನಾವಣೆಗೆ ನಿಲ್ಲುತ್ತಾರೆ ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ.ಇದಕ್ಕೆ ಬಚ್ಚೇಗೌಡರವರೇ ಎಂದು ಅನೇಕರು ಹೇಳುತ್ತಿದ್ದರೂ ಕೆ.ವಿ. ನಾಗರಾಜ್ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹೈಕಮಾಂಡ್ ನೀಡಿದ ಭರವಸೆ ಸುಳ್ಳಾಗುವುದಿಲ್ಲ ಎನ್ನುವುದು ಹಲವರ ವಾದವೂ ಆಗಿದೆ.
ಇನ್ನೂ ಕ್ಷೇತ್ರದಲ್ಲಿ ಇದುವರೆಗೂ ಅರಳದ ಕಮಲ(ಬಿಜೆಪಿ) ಪಕ್ಷಕ್ಕೆ ಜಿ.ಹೆಚ್. ನಾಗರಾಜ್ ಗುಡ್‌ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಕಮಲದ ಚಿಹ್ನೆಯಡಿ ಚುನಾವಣೆಯನ್ನು ಎದುರಿಸುವವರು ಯಾರು ಎನ್ನುವುದು ಸಹ ಕೇಳಿ ಬರುತ್ತಿದೆ. ಉಳಿದಂತೆ ಕೆಜೆಪಿಯಿಂದ ಲಕ್ಷ್ಮೀಬಾಬು ಫಿಕ್ಸ್ ಆಗಿದ್ದು ಸದ್ಯ ಸದ್ದಿಲ್ಲದಿದ್ದರೂ ಈ ಮೊದಲೇ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಂ. ಶಿವಾನಂದ ಎಂದು ಹೇಳಲಾಗಿದೆ. ಒಟ್ಟಾರೆ, ಟಿಕೆಟ್ ವಿಷಯಕ್ಕೆ ಸಂಬಂಧಪಟ್ಟಂತೆ ಆಕಾಂಕ್ಷಿಗಳಲ್ಲಿ ಯಾರಿಗೆ ನಾಮ ಯಾರಿಗೆ ಪ್ರಸಾದ ಸಿಗುತ್ತದೆ ಎನ್ನುವ ಕುತೂಹಲ ದೂರವಾಗಲು ಪಕ್ಷಗಳು ಅಧಿಕೃತವಾಗಿ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಬೇಕಾಗಿದೆ.