ಕೋಲಾರ: ಜನತೆಯ ಕಷ್ಟ-ಕಾರ್ಪಣ್ಯಗಳಿಗೆ ಸಾಂತ್ವನ ಹೇಳಲು ಹಾಗೂ ಪರಿಹಾರ ಕಲ್ಪಿಸುವ ಕೇಂದ್ರವಾಗಬೇಕಾಗಿದ್ದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಕಳೆದ 8 ವರ್ಷಗಳಿಂದ ಇದ್ದು ಇಲ್ಲದಂತಾಗಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಎಸ್.ಎಂ. ಕೃಷ್ಣರವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ 1999ರಿಂದ 2004ರವರೆಗೆ ಗಣಿ ಮತ್ತು ಭೂ ವಿಜ್ಞಾನ ಖಾತೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಿಭಾಜಿತ ಕೋಲಾರ ಜಿಲ್ಲೆಗೆ ಸೇರಿದ್ದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವಿ. ಮುನಿಯಪ್ಪನವರು ಗ್ರಾಮೀಣ ಜನತೆಯ ಅಹವಾಲು ಸ್ವೀಕರಿಸಲು ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯವನ್ನು ಪ್ರಾರಂಭಿಸಿದರು.
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ, ಕೆಡಿಪಿ ಸಭೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಗಳಿಗೆ ಹಾಗೂ ಜನಸ್ಪಂದನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋಲಾರಕ್ಕೆ ಬಂದಾಗ ವಿ. ಮುನಿಯಪ್ಪ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಭೇಟಿ ನೀಡಿ ಜಿಲ್ಲೆಯ ವಿವಿಧ ಕಡೆಗಳಿಂದ ಸಮಸ್ಯೆಗಳನ್ನು ಹೊತ್ತು ಬರುತ್ತಿದ್ದ ಬಡವರಿಂದ ಅರ್ಜಿಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತಿದ್ದರು.
ವಿ. ಮುನಿಯಪ್ಪ ತಮ್ಮ ಅಧಿಕಾರದ ಅವಧಿಯ ಉದ್ದಕ್ಕೂ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ನಿರಂತರವಾಗಿಯೇನು ಭೇಟಿ ನೀಡುತ್ತಿರಲಿಲ್ಲ. ಆದರೆ, ಇವರ ನಂತರ ಜಿಲ್ಲಾ ಉಸ್ತುವಾರಿ ಸಚಿವರಾದವರಿಗೆ ಹೋಲಿಕೆ ಮಾಡಿದಲ್ಲಿ ಪರವಾಗಿಲ್ಲವೆಂದರೆ ತಪ್ಪಾಗಲಾರದು.
2004ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಕೆ. ಶ್ರೀನಿವಾಸಗೌಡರು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲ ತಿಂಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಆದರೆ, ತಮ್ಮ ಮನೆಯನ್ನೇ ಕಾರ್ಯಾಲಯ ಮಾಡಿಕೊಂಡಿದ್ದರಿಂದ ಸರ್ಕಾರ ಒದಗಿಸಿದ್ದ ಕಚೇರಿಗೆ ಹಾಜರಾಗಿ ಜನತೆಯ ಸಮಸ್ಯೆ ಆಲಿಸಲು ಗಮನ ನೀಡಲಿಲ್ಲ.
ಭೇಟಿ ಅಪರೂಪ: ಇವರ ನಂತರ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆಲಂಗೂರು ಶ್ರೀನಿವಾಸ್ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯಕ್ಕೆ ಪೂಜೆ ಸಲ್ಲಿಸಿ ಜನತೆಯಲ್ಲಿ ಭರವಸೆ ಮೂಡಿಸಿದ್ದರಾದರೂ ಇವರಿಂದಲೂ ಕಚೇರಿಗೆ ನಿರಂತರ ಭೇಟಿ ಸಾಧ್ಯವಾಗಲಿಲ್ಲ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದ ಚಲುವರಾಯಸ್ವಾಮಿ, ಬಾಲಚಂದ್ರ ಜಾರಕಿಹೊಳಿ, ಬಿಜೆಪಿ ಸರ್ಕಾರದಲ್ಲಿ ಕೋಲಾರ ಜಿಲ್ಲೆಯವರೇ ಆದ ಎಸ್.ಎನ್. ಕೃಷ್ಣಯ್ಯಶೆಟ್ಟಿ ಬಿಜೆಪಿ ಸರ್ಕಾರ ರಚನೆಯ ಬಳಿಕ ಮುಜರಾಯಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲವು ತಿಂಗಳು ಅಧಿಕಾರ ನಡೆಸಿದ್ದರು. ಆದರೆ, ತಮ್ಮ ಅಧಿಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಭೇಟಿ ನೀಡಿರುವುದು ಅಪರೂಪ.
ಸಚಿವರಾಗಿದ್ದ ಬಿ.ಎನ್. ಬಚ್ಚೇಗೌಡ, ಅರವಿಂದ ಲಿಂಬಾವಳಿ, ಎ. ನಾರಾಯಣಸ್ವಾಮಿ ಅವರುಗಳು ಸಹ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆಯಾದರೂ ತಮಗಾಗಿ ಕಾದಿರಿಸಿದ್ದ ಕಚೇರಿಯಲ್ಲಿ ಅರ್ಧ ಗಂಟೆ ಕುಳಿತು ಸಾರ್ವಜನಿಕರ ಕುಂದುಕೊರತೆ ಆಲಿಸಲಿಲ್ಲ.
ಇವರಾದ ನಂತರ ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರದಲ್ಲಿ ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ವರ್ತೂರ್ ಪ್ರಕಾಶ್ ಅವರು ಸಹ ಸರ್ಕಾರಿ ನೀಡಿದ್ದ ಕಚೇರಿಗೆ ಒಮ್ಮೆಯೂ ಭೇಟಿ ನೀಡಿದ ನಿದರ್ಶನಗಲಿಲ್ಲ. ಕೋಲಾರದ ಸಿ. ಭೈರೇಗೌಡರ ಬಡಾವಣೆಯಲ್ಲಿನ ತಮ್ಮ ನಿವಾಸದಲ್ಲೇ ಅರ್ಜಿಗಳ ಸ್ವೀಕಾರ, ಅಧಿಕಾರಿಗಳೊಂದಿಗೆ ಸಮಾಲೋಚನೆ, ಕಡತ ಪರಿಶೀಲನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ ಬೆದರುಗೊಂಬೆಯಾಗಿ ಉಳಿಯುವಂತೆ ಮಾಡಿದ್ದಾರೆ.
ಸರ್ಕಾರ ಈ ಕಚೇರಿಗೆ ಪ್ರತಿ ತಿಂಗಳು ವಿದ್ಯುತ್ ಹಾಗೂ ಫೋನ್ ಬಿಲ್ ಪಾವತಿ ಮಾಡಿದೆ, ಸಿಬ್ಬಂದಿಗೆ ಸಂಬಳ ನೀಡಿದೆ. ಆದರೆ ಸಾರ್ವಜನಿಕರು ಮಾತ್ರ ಇಲ್ಲಿಂದ ಯಾವುದೇ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ. ಕೋಲಾರದಲ್ಲಿ ಅನೇಕ ಸರ್ಕಾರಿ ಕಚೇರಿಗಳು ಸ್ವಂತ ಕಟ್ಟಡಗಳು ಇಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸರ್ಕಾರ ಇನ್ನು ಮುಂದೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕೃತ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಜನತೆಯ ಸಮಸ್ಯೆ ಆಲಿಸದಿದ್ದಲ್ಲಿ ಬೇರೆ ಯಾವುದಾದರೊಂದು ಇಲಾಖೆಗೆ ಕಟ್ಟಡ ನೀಡಿದಲ್ಲಿ ಸರ್ಕಾರಕ್ಕೆ ಆಗುತ್ತಿರುವ ನಷ್ಟ ತಪ್ಪುತ್ತದೆ ಎಂಬುದು ಜನತೆಯ ಅಭಿಪ್ರಾಯವಾಗಿದೆ.