ಚಿಂತಾಮಣಿ: ನಾಯಿಗಳು ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿ 10 ಕುರಿಗಳನ್ನು ಕೊಂದು 5 ಕುರಿಗಳನ್ನು ಗಾಯಗೊಳಿಸಿರುವ ಘಟನೆ ಚಿಂತಾಮಣಿ ತಾಲೂಕಿನ ಕುರುಬೂರು ಗ್ರಾಮದಿಂದ ವರದಿಯಾಗಿದೆ.
ಶುಕ್ರವಾರ ಎಂದಿನಂತೆ ಕುರಿಗಳನ್ನು ಹಿಂಡಿಯಲ್ಲಿ ಭದ್ರಪಡಿಸಿ ಮಲಗಿದ್ದ ವೇಳೆ ನಾಯಿಗಳು ಕಿಂಡಿನೊಳಗೆ ಪ್ರವೇಶಿಸಿ 10 ಕುರಿಗಳನ್ನು ಕೊಂದು ತಿಂದಿದ್ದು, 5 ಕುರಿಗಳನ್ನು ಗಾಯಗೊಳಿಸಿವೆ.
ಶನಿವಾರ ಬೆಳಿಗ್ಗೆ ಮಾಲೀಕ ರಾಮಚಂದ್ರ ಕುರಿಗಳು ಸತ್ತಿರುವುದನ್ನು ಕಂಡು ಸುತ್ತಮತ್ತಲಿನವರನ್ನು ಕೂಗಿಕೊಂಡ ತಕ್ಷಣ ನಾಯಿಗಳು ಕಾಲ್ಕಿತ್ತವೆಂದು ವಿವರಿಸಿದ್ದಾರೆ. ರೈತನ ಕುಟುಂಬಕ್ಕೆ ಜೀವನಾಧಾರವಾಗಿದ್ದ ಕುರಿಗಳ ಸಾವಿನಿಂದ ಸುಮಾರು 50 ಸಾವಿರ ರೂ.ಗಳ ನಷ್ಟವುಂಟಾಗಿದ್ದು ರೈತನ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರೈತನಿಗೆ ಸೂಕ್ತ ಪರಿಹಾರ ದೊರಕಿಸುವುದರ ಜೊತೆಗೆ ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.