ಸಬ್ಇನ್ಸ್ಪೆಕ್ಟರ್ ವರ್ತನೆ ವಿರುದ್ಧ ಆಕ್ರೋಶ
ಚಿಂತಾಮಣಿ: ದಲಿತರ ಬಗ್ಗೆ ಕಾಳಜಿಯಿಲ್ಲದೆ, ಠಾಣೆಗೆ ಬಂದ ಪಿರ್ಯಾದುದಾರರಿಗೆ ನ್ಯಾಯ ಒದಗಿಸಿಕೊಡುವಲ್ಲಿ ವಿಫಲಗೊಂಡ ಗ್ರಾಮಾಂತರ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಕಾರ್ಯವೈಖರಿ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾಧಿಕಾರಿ ಶಿವಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಯಂತ್ರಣ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಸ್ಪಂದಿಸುವಲ್ಲಿ ವಿಫಲಗೊಂಡ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಬಗ್ಗೆ ಹಲವಾರು ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶಿವಪ್ರಸಾದ್ ಸಭೆಯಲ್ಲಿಯೇ ಸಬ್ಇನ್ಸ್ಪೆಕ್ಟರ್ ತಮ್ಮ ವರ್ತನೆ ಸರಿಪಡಿಸಿಕೊಳ್ಳಲು ಹೇಳಿದರು.
ತಾಲೂಕಿನ ಅಟ್ಟೂರು ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ನಾರಾಯಣಪ್ಪ ಎಂಬವರು ಕಳೆದ 2 ತಿಂಗಳ ಹಿಂದೆ ಜಮೀನು ವಿಷಯಕ್ಕೆ ಸಂಬಂಧಿಸಿ ದೂರು ನೀಡಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಇರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಇಂತಹ ಹಲವು ಪ್ರಕರಣಗಳು ಗ್ರಾಮಾಂತರ ಠಾಣೆಯ ಪೊಲೀಸ್ ಠಾಣೆಯಲ್ಲಿ 700 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 200 ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿವೆ ಇದಕ್ಕೆ ಠಾಣಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.
ಪೊಲೀಸರ ನಿರ್ಲಕ್ಷ್ಯ: ತಾಲೂಕಿನ ವ್ಯಾಪ್ತಿಯಲ್ಲಿ ಬಡ ದಲಿತ ಕಾಲೋನಿಗಳಲ್ಲಿ ಮದ್ಯ ಮಾರಾಟ ಹಗಲಿರಳು ಮಾರಾಟ ದಂಧೆಯಿಂದ ಕೂಲಿ ಕಾರ್ಮಿಕರ ಬಡ ಕುಟುಂಬಗಳು ಬೀದಿ ಪಾಲಾಗುತ್ತಿದ್ದರೂ, ಸ್ಥಳೀಯ ಪೊಲೀಸರ ಹಾಗೂ ಅಬಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಡವರು ಸಂಪಾದನೆ ಮಾಡಿದ ಹಣವೆಲ್ಲಾ ಮದ್ಯ ಸೇವನೆಗಾಗಿ ವ್ಯರ್ಥವಾಗುತ್ತಿರುವ ಬಗ್ಗೆ ದಲಿತ ಮುಖಂಡರು ಸಭೆಯಲ್ಲಿ ಟೀಕಿಸಿದರು.
ಪೊಲೀಸ್ ಸಿಬ್ಬಂದಿ ಕೊರತೆ: ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ. ತಾತಯ್ಯ ಅವರ ಕರ್ಮಭೂಮಿಯಾದ ಕೈವಾರ ಗ್ರಾಮಕ್ಕೆ ರಾಜ್ಯ ಮತ್ತು ಅಂತಾರಾಜ್ಯಗಳಿಂದ ಸಾವಿರಾರು ಭಕ್ತಾಧಿಗಳು,ಪ್ರವಾಸಿಗರು, ಸಮಾಜದ ಅತಿ ಮುಖ್ಯ ಗಣ್ಯರು ಬರುತ್ತಿರುವುದರಿಂದ ಕೈವಾರ ಗ್ರಾಮದ ಹೊರ ಪೊಲೀಸ್ ಠಾಣೆಯಲ್ಲಿ ನಾಮ್ಕಾವಸ್ತೆ ಇಬ್ಬರು ಅಥವಾ ಮೂವರು ಮಾತ್ರ ಪೇದೆಗಳು ಇರುವುದರಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿಗಳ ಸಮಕ್ಷಮದಲ್ಲಿ ಸಾರ್ವಜನಿಕರು ದೂರಿದರು.
ಜಿಲ್ಲಾ ರಕ್ಷಣಾಧಿಕಾರಿ ಶಿವಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿಯೇ ದೊಡ್ಡ ವಾಣಿಜ್ಯ ಕೇಂದ್ರವಾದ ಚಿಂತಾಮಣಿ ಪಟ್ಟಣಕ್ಕೆ ಶೀಘ್ರವೇ ಉನ್ನತ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಸಂಚಾರಿ ನಿಯಂತ್ರಣ ದೀಪಗಳು, ಪೊಲೀಸ್ ಸಿಬ್ಬಂದಿ ಹಾಗೂ ಟ್ರಾಫಿಕ್ ಪೊಲೀಸ್ ಠಾಣೆ ತೆರೆಯಲಾಗುವುದು ಎಂದು ತಿಳಿಸಿದರು.
ಪೊಲೀಸ್ ವೃತ್ತ ನಿರೀಕ್ಷರಾದ ನಂಜಪ್ಪ, ಕೃಷ್ಣಪ್ಪ, ಸಬ್ಇನ್ಸ್ ಪೆಕ್ಟರ್ಗಳಾದ ಮುರಳಿ, ಅನಿಲ್ಕುಮಾರ್, ರಾಘವೇಂದ್ರ,ಪ್ರವೀಣ್ಕುಮಾರ್, ಆನಂದ್ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

