187 ಕೆರೆಗಳ ಪುನಶ್ಚೇತನಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಕೋಲಾರ, ಅ.1
ವಿತ್ತ ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ರಾಜ್ಯದ 12 ಸಾವಿರ ಕೆರೆಗಳು ಮತ್ತು ಕಲ್ಯಾಣಿಗಳ ಪುನಶ್ಚೇತನಗೊಳಿಸುವುದಾಗಿ ನೀಡಿದ್ದ ಭರವಸೆ ಮಹಾತ್ಮಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2 ರಂದು ಅನುಷ್ಠಾನಕ್ಕೆ ಬರುತ್ತಿದೆ.
ಈ ಯೋಜನೆಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದ ಅನುದಾನವನ್ನು ಬಳಕೆ ಮಾಡಲಾಗುವುದು.
ಜಲ ಸಂಪತ್ತು ಹೆಚ್ಚಳ, ಅಂತರ್ಜಲ ಸಮಸ್ಯೆ ನಿವಾರಣೆ,ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು, ಅಚ್ಚುಕಟ್ಟು ಪ್ರದೇಶ, ಬದುಗಳು, ಫೀಡರ್ ಚಾನಲ್‌ಗಳ ಅಭಿವೃದ್ಧಿ, ಕೆರೆಗಳಲ್ಲಿ ಹೂಳು ತೆಗೆಯುವುದು ಹಾಗೂ ಕೆರೆ ಕೋಡಿಗಳ ದುರಸ್ತಿ ಹಾಗೂ ಕಲ್ಯಾಣಿಗಳು, ಗೋಕುಂಟೆಗಳ ಸಮಗ್ರ ಅಭಿವೃದ್ಧಿಯನ್ನು ಪಡೆಸುವುದು ಸರ್ಕಾರದ ಉದ್ದೇಶವಾಗಿದೆ.
ರಾಜ್ಯ ಸರ್ಕಾರದ ಈ ಯೋಜನೆ ನೀರಾವರಿ ಪ್ರದೇಶಗಳಿಗಿಂತ ಬಯಲುಸೀಮೆ ಪ್ರದೇಶಕ್ಕೆ ಸೇರಿದ ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
ಆದರೆ. ಸದರಿ ಯೋಜನೆಯ ಕಾಮಗಾರಿಗಳ ಗುಣಮಟ್ಟದ ಕಡೆ ಸರ್ಕಾರ ನಿಗಾ ವಹಿಸದಿದ್ದರೆ ನರೇಗಾ ಹಣ ಮಣ್ಣುಪಾಲು ಆಗುವುದರಲ್ಲಿ ಸಂಶಯವಿಲ್ಲ. ತಾಲೂಕು ಪಂಚಾಯಿತಿಯ ಇಒಗಳು, ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಕಾರ್ಯದರ್ಶಿಗಳು ಜೊತೆಗೆ ಜನಪ್ರತಿನಿಧಿಗಳ ಹಾಗೂ ಜನತೆಯ ಸಹಭಾಗಿತ್ವದಲ್ಲಿ ಕೆರೆ ಮತ್ತು ಕಲ್ಯಾಣಿಗಳು ಪುನಶ್ಚೇತನಗೊಂಡಾಗ ಮಾತ್ರ ಸರ್ಕಾರದ ಉದ್ದೇಶ ಸಾರ್ಥಕವಾಗುತ್ತದೆ.
ಕೆರೆಗಳ ಮತ್ತು ಕಲ್ಯಾಣಿಗಳ ಅಭಿವೃದ್ಧಿಗೆ ಸರ್ಕಾರ ರೂಪಿಸಿರುವ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಸರ್ಕಾರ ಕೆರೆಗಳ ಒತ್ತುವರಿ ಕಾರ್ಯ ತೆರುವುಗೊಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ, ಕೇವಲ ಅಭಿವೃದ್ಧಿಯಾದರೆ ಸಾಲದು, ಪ್ರಗತಿಯು ದಾಖಲೆ ಆಗಬೇಕಾಗಿರುವುದರಿಂದ ಸರ್ಕಾರ 12 ಸಾವಿರ ಕೆರೆಗಳಲ್ಲಿ ಎಷ್ಟು ಒತ್ತುವರಿ ಆಗಿವೆ, ರಾಜ ಕಾಲುವೆಗಳ ಸ್ಥಿತಿ ಏನಾಗಿದೆ, ಮರಳು ಮಾಫಿಯಾದಿಂದ ಕೆರೆಗಳಿಗೆ ಆಗಿರುವ ಹಾನಿ ಎಷ್ಟು ಎಂಬುದನ್ನು ಅರಿತು ಯೋಜನೆ ಫಲವಾಗುವಂತೆ ಎಚ್ಚರವಹಿಸದಿದ್ದರೆ ಕೋಟ್ಯಂತರ ರುಪಾಯಿ ವ್ಯರ್ಥವಾಗುತ್ತದೆ. ಗ್ರಾಮೀಣ ಪ್ರದೇಶದ ಬಡ ಕೂಲಿಕಾರರಿಗೆ ಸದರಿ ಯೋಜನೆಯಿಂದ ಒಂದಿಷ್ಟು ಹಣ ಸಿಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಕೂಲಿ ಕಾರ್ಮಿಕರ ಹೆಸರಿನಲ್ಲಿ ಹಣ ದೋಚುವ ಮಧ್ಯವರ್ತಿಗಳ ಬಗ್ಗೆ, ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿ ರಂಗೋಲಿಯಲ್ಲಿ ನುಸುಳುವ ಕದೀಮರ ಬಗ್ಗೆ ಎಚ್ಚರವಹಿಸದಿದ್ದರೆ ಕೇಂದ್ರ ಸರ್ಕಾರ ನರೇಗಾ ಯೋಜನೆಯಲ್ಲಿ ನೀಡುವ ಹಣ ಉಳ್ಳವರ ಪಾಲು ಆಗಿ ಬಡವರು ಮತ್ತಷ್ಟು ಬಡವರಾಗಿ ಉಳಿಯುವುದಕ್ಕೆ ಅವಕಾಶವಾಗುತ್ತದೆ.
ಅ.2 ರಂದು ಕೆರೆಗಳ ಪುನಶ್ಚೇತನ ಕಾರ್ಯಕ್ಕೆ ಚಾಲನೆ ಸಿಗಲಿದ್ದು, ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಮುಗಿಸಿ ಮುಂದಿನ ಮಳೆಗಾಲದಲ್ಲಿ ಕೆರೆ ಮತ್ತು ಕಲ್ಯಾಣಿಗಳಲ್ಲಿ ನೀರು ಭರ್ತಿಯಾಗುವಂತೆ ಮಾಡಿದಲ್ಲಿ ಜನ ಮತ್ತು ಜಾನುವಾರುಗಳಿಗೆ ಉಪಯೋಗವಾಗುತ್ತದೆ.
ಕೋಲಾರದಲ್ಲಿ 22.17 ಕೋಟಿ ಯೋಜನೆ: ಯಾವುದೇ ನದಿ ನಾಲೆ ಇಲ್ಲದ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಕೆರೆಗಳು ಇದ್ದರೂ ಸರ್ಕಾರ ಪ್ರಸ್ತುತ 187 ಕೆರೆಗಳ ಹಾಗೂ 164 ಕಲ್ಯಾಣಿಗಳ ಅಭಿವೃದ್ಧಿಗೆ 22.17 ಕೋಟಿ ರು. ಬಿಡುಗಡೆ ಮಾಡಿದೆ.
ಕಾಮಗಾರಿಗಳ ವಿವರ ಇಂತಿದೆ
ತಾಲೂಕು ಕೆರೆಗಳು ಅಂದಾಜು ವೆಚ್ಚ ಕಲ್ಯಾಣಿಗಳು ಅಂದಾಜು ವೆಚ್ಚ ಒಟ್ಟು ಕಾಮಗಾರಿ ಒಟ್ಟು ಮೊತ್ತ
ಕೋಲಾರ 36 360 ಲಕ್ಷ ರು. 36 180 ಲಕ್ಷ ರು 72 540ಲಕ್ಷ ರು.
ಮಾಲೂರು 28 280 28 140 56 420
ಬಂಗಾರಪೇಟೆ 37 370 37 185 74 555
ಮುಳಬಾಗಿಲು 31 240 30 120 61 360
ಶ್ರೀನಿವಾಸಪುರ 25 250 33 92 58 342
ಒಟ್ಟು 187 1500 ಲಕ್ಷ 164 717 321 2217 ಲಕ್ಷ
7 ಕೆರೆ ಭೂಮಿ ಪೂಜೆ
ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಅ.2 ರಂದು ಸಾಂಕೇತಿಕವಾಗಿ 7 ಕೆರೆಗಳ ಅಭಿವೃದ್ಧಿಗೆ ಭೂಮಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.
ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಚಿನ್ನಸಂದ್ರ ಗ್ರಾಪಂಗೆ ಸೇರಿದ ಕುರಗಟ್ಟೂರು ಕೆರೆ, ಮಾಲೂರಿನ ನೊಸಗೆರೆ ಗ್ರಾಪಂನ ಹುರುಳುಗೆರೆ ಮತ್ತು ಮಾದನಹಟ್ಟೆ ಕೆರೆ, ಬಂಗಾರಪೇಟೆಯ ಘಟ್ಟಕಾಮಧೇನಹಳ್ಳಿ ಗ್ರಾಪಂನ ಭೂಮಿಗುಡ್ಡಕೆರೆ, ಮುಳಬಾಗಿಲಿನ ಎಮ್ಮೆನತ್ತ ಗ್ರಾಪಂನ ಪದಕಾಷ್ಟಿಗ್ರಾಮ ಕೆರೆ, ಕೆಜಿಎಫ್‌ನ ಘಟ್ಟಮಾದಮಂಗಲ ಗ್ರಾಪಂನ ದೊಡ್ಡಕಲ್ಲಹಳ್ಳಿ ಕೆರೆ ಹಾಗೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ರೋಣೂರು ಗ್ರಾಪಂನ ನಾದಮಾಕಲಹಳ್ಳಿ ಕೆರೆಯ ಅಭಿವೃದ್ಧಿಗೆ ಭೂಮಿ ಪೂಜೆಗೆ ಸಿದ್ಧತೆ ನಡೆದಿದೆ.
ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

