ಕೋಲಾರ

ಪುರಾತನ ಕಲ್ಯಾಣಿ ಪುನಶ್ಚೇತನಕ್ಕೆ ಚಾಲನೆ

Published On :

ಕ.ಪ್ರ.ವಾರ್ತೆ   ಕೋಲಾರ   ಅ. 2
ತಾಲೂಕಿನ ಚನ್ನಸಂದ್ರ ಗ್ರಾಪಂಗೆ ಸೇರಿದ ಕಡಗಟ್ಟೂರು ಗ್ರಾಮದ ಸುಮಾರು ನಾಲ್ಕು ನೂರು ವರ್ಷಗಳ ಹಳೆಯದಾದ ಕಲ್ಯಾಣಿಯ ಪುನಶ್ಚೇತನ ಕಾಮಗಾರಿಗೆ ಜಿಲ್ಲಾಧಿಕಾರಿ ಡಿ.ಕೆ. ರವಿ ಚಾಲನೆ ನೀಡಿದರು.
ರಾಜ್ಯ ಸರ್ಕಾರ 2013-14ನೇ ಬಜೆಟ್ನಲ್ಲಿ ರಾಜ್ಯದ 12 ಸಾವಿರ ಕರೆಗಳು, ಕಲ್ಯಾಣಿಗಳು, ಗೋಗುಂಟೆಗಳ ಪುನಶ್ಚೇತನಕ್ಕೆ ಭರವಸೆ ನೀಡಿತ್ತು. ಮಹಾತ್ಮಗಾಂಧಿ ಜಯಂತಿಯ ದಿನವಾದ ಅ.2 ರಂದು ಯೋಜನೆಗೆ ಅಧಿಕೃತ ಚಾಲನೆ ನೀಡಲಾಗಿದ್ದು. ಜಿಲ್ಲೆಯ 157 ಕೆರೆಗಳು ಮತ್ತು 164 ಕಲ್ಯಾಣಿಗಳ ಜೀರ್ಣೋದ್ಧಾರಕ್ಕೂ ಚಾಲನೆ ಸಿಕ್ಕಿದೆ.
ಕಲ್ಯಾಣಿಯ ಪುನಶ್ಚೇತನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿಗಳು, ಪೂರ್ವಿಕರು ನೀರಿನ ಸಮಸ್ಯೆ ನಿವಾರಣೆಗಾಗಿ ಕಲ್ಯಾಣಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಆದರೆ, ನಾನೊಬ್ಬನೇ ಬೆಳೆಯಬೇಕೆಂಬ ದುರಾಸೆ, ಸ್ವಾರ್ಥದಿಂದಾಗಿ ಇಂದು ಕೆರೆ ಮತ್ತು ಕಲ್ಯಾಣಿಗಳು ಮರೆಯುವಂತಾಗಿದೆ ಎಂದರು.
ಅಭಿವೃದ್ಧಿಗೆ ಅವಕಾಶ: ಕಲ್ಯಾಣಿಗಳ ಕಲ್ಯಾಣಕ್ಕೆ ಪಂಚಾಯಿತಿ ರಾಜ್ ಇಲಾಖೆ ನರೇಗಾ ಯೋಜನೆಯಡಿ ಹಣ ನೀಡುತ್ತದೆ, ಕಾಯಕ ಸಂಘ ಮತ್ತು ಕಾಯಕ ಬಂಧುವಿನ ಸಹಕಾರದೊಂದಿಗೆ ಕಲ್ಯಾಣಿ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಗುತ್ತಿಗೆದಾರನ ಮಧ್ಯಸ್ಥಿಕೆ ಇಲ್ಲದೆ ಗ್ರಾಮೀಣ ಜನತೆಯೇ ಒಗ್ಗೂಡಿ ಕಾಮಗಾರಿ ನಡೆಸಿ ಕಲ್ಯಾಣಿಯ ಕಾಮಗಾರಿಗೆ ನಿಗದಿ ಪಡಿಸಿರುವ ರು. 18.50 ಲಕ್ಷ ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಶೌಚಾಲಯ ನಿರ್ಮಾಣ: ನರೇಗಾ ಯೋಜನೆಯಡಿ ಪ್ರತಿಯೊಬ್ಬ ಕೂಲಿಕಾರರು 100 ದಿನ ಕೆಲಸ ಮಾಡಬಹುದಾಗಿದೆ. ಕಡಗಟ್ಟೂರು ಕಲ್ಯಾಣಿಯ ಕೆಲಸ 100 ದನಕ್ಕೆ ಮುಂಚೆ ಮುಗಿಸಿ ಇನ್ನುಷ್ಟು ದಿನಗಳು ಬಾಕಿ ಉಳಿದಲ್ಲಿ ಅದನ್ನು ತಮ್ಮ ಹೊಲ ಗದ್ದೆಯಲ್ಲಿ ಅಭಿವೃದ್ಧಿ, ವೈಯುಕ್ತಿಕ ಶೌಚಾಲಯ ನಿರ್ಮಾಣ ಕೆಲಸಕ್ಕೆ ಬಳಕೆ ಮಾಡಿ ಸರ್ಕಾರ ನಿಗದಿ ಮಾಡಿರುವ ಕೂಲಿ ಹಣವನ್ನು ಪಡೆಯಬಹುದಾಗಿದೆ ಎಂದರು.
ನರೇಗಾ ಯೋಜನೆ: ಮಾನವ ಶಕ್ತಿಯ ಜೊತೆಗೆ ಕೆಲವು ಸಂದರ್ಭದಲ್ಲಿ ಯಂತ್ರಗಳನ್ನು ಬಳಕೆ ಮಾಡಿಕೊಳ್ಳುವುದು ಅನಿವಾರ್ಯ, ಇದಕ್ಕೂ ಸರ್ಕಾರ ಅವಕಾಶ ಮಾಡಿದೆ, ಈ ಹಿಂದೆ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಆಗಿರುವ ಕಾಮಗಾರಿಗಳಲ್ಲಿ ಲೋಪವಾಗಿರುವುದು ನನ್ನ ಗಮನಕ್ಕೆ ಬಂದಿದೆ ಮತ್ತೆ ಅದೇ ರೀತಿಯ ತಪ್ಪುಗಳು ಆಗದಂತೆ ಜನತೆಯೇ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುವ ಮೂಲಕ ಸರ್ಕಾರದ ಉದ್ದೇಶ ಸಾಕಾರಗೊಳಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ನಿವಾಸ್ ಸಫಟ್, ತಹಸೀಲ್ದಾರ್ ನಾಗರಾಜು, ತಾಪಂ ಇಒ ಕೆ.ಎಸ್. ಭಟ್, ತಾಪಂ ಎಇಇ ಮಂಜುನಾಥ್, ಚನ್ನಸಂದ್ರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎನ್.ವಿ. ಬಾಬು, ಕಾರ್ಯದರ್ಶಿ ವಿ.ಎಸ್. ನಿರ್ಮಲ, ಗ್ರಾಪಂ ಅಧ್ಯಕ್ಷೆ ಸುಧಾ ರಾಜಣ್ಣ, ಸದಸ್ಯರಾದ ದೇವರಾಜು, ಹೊಸಹಳ್ಳಿ ಆಂಜನಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.