ಸುಂಕ ವಸೂಲಿ ವ್ಯವಸ್ಥಾಪಕರ ಮೇಲೆ ಹಲ್ಲೆ
ಬಾಗೇಪಲ್ಲಿ: ರೈತ ಸಂಘದ ಅಧ್ಯಕ್ಷರು ಮತ್ತು ಅವರ ಬೆಂಬಲಿಗರು ಟೋಲ್ ಫ್ಲಾಜಾ ಸಿಬ್ಬಂದಿಯನ್ನು ಬೆದರಿಸಿ, ಮ್ಯಾನೇಜರ್ ಮೇಲೆ ಮಚ್ಚುಗಳಿಂದ ಹಲ್ಲೆ ನಡೆಸಿದ ಘಟನೆ ಬುಧವಾರ ಮಧ್ಯಾಹ್ನ ಪಟ್ಟಣಕ್ಕೆ ಸಮೀಪದ ಹೆದ್ದಾರಿ 7 ರ ಟೋಲ್ ಫ್ಲ್ಲಾಜಾ ಬಳಿ ನಡೆದಿದೆ.
ಆಂಧ್ರ ಪ್ರದೇಶದ ಕಡೆಯಿಂದ ಬೆಂಗಳೂರಿಗೆ ಹೋಗಲು ಬೊಲೆರೋ ವಾಹನದಲ್ಲಿ ಬಂದ ಪದಾಧಿಕಾರಿಗಳು ಟೋಲ್ ಫ್ಲಾಜಾ ಬಳಿ ಸುಂಕ ನೀಡದೇ ವಿಐಪಿಗಳು ಹಾದು ಹೋಗುವ ದಾರಿಯಲ್ಲಿ ಹೋಗಲು ಯತ್ನಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ಲಾಜಾ ಸಿಬ್ಬಂದಿ, ತಡೆದಿದ್ದರಿಂದ ಕೆರಳಿದ ರೈತ ಸಂಘದ ಅಧ್ಯಕ್ಷ ಮತ್ತು ಅವರ ಬೆಂಬಲಿಗರು ಏಕಾಏಕಿ ತಮ್ಮ ವಾಹನದಲ್ಲಿದ್ದ ಮಚ್ಚನ್ನು ಹೊರ ತೆಗೆದು ಸಿಬ್ಬಂದಿಯನ್ನು ಬೆದರಿಸಿದ್ದಾರೆ.
ಆದರೂ ಸಿಬ್ಬಂದಿ ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದೇ ಬಿಡಲು ಸಾಧ್ಯವಿಲ್ಲ ಎಂದಾಗ ಸುಂಕ ವಸೂಲಾತಿ ಬೂತ್ನ್ನು ಮಚ್ಚಿನಿಂದ ಹೊಡೆಯಲು ಹೋದಾಗ ಸ್ಥಳದಲ್ಲಿಯೇ ಇದ್ದ ಪೊಲೀಸರು ರೈತ ಮುಖಂಡರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಫೋನ್ ಮೂಲಕ ಸ್ಥಳೀಯ ರೈತ ಸಂಘದವರನ್ನು ಸ್ಥಳಕ್ಕೆ ಕರೆಸಿಕೊಂಡ ಆರೋಪಿಗಳು ಮತ್ತೆ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸ್ಥಳಕ್ಕೆ ಬಂದ ಟೋಲ್ ಫ್ಲಾಜಾ ಮೇನೇಜರ್ ನಾಗಲಿಂಗಾರೆಡ್ಡಿ ಮೇಲೆ ಹಲ್ಲೆ ನಡೆಸಿದ್ದಾರೆ. ಮಧ್ಯೆ ಪ್ರವೇಶಿಸಿದ ಪೊಲೀಸರು ರೈತ ಮುಖಂಡರಿಂದ ಮಚ್ಚನ್ನು ಕಸಿದುಕೊಂಡು ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟೋಲ್ ಫ್ಲಾಜಾ ಬಳಿ ರೈತ ಮುಖಂಡರು ಮಚ್ಚುಗಳಿಂದ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿದ್ದರೂ ಮೂಕಪ್ರೇಕ್ಷಕರಂತೆ ಪೊಲೀಸರು ವರ್ತಿಸಿರುವುದಕ್ಕೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸುಂಕ ನೀಡುವ ವಿಚಾರದಲ್ಲಿ ರೈತ ಮುಖಂಡರು ಮಚ್ಚುಗಳನ್ನು ಬಳಸಿ ಹಲ್ಲೆ ನಡೆಸುತ್ತಿರುವವರನ್ನು ಬಂಧಿಸುವುದನ್ನು ಬಿಟ್ಟು ಹಲ್ಲೆಗೆ ಒಳಗಾಗಿರುವ ಟೋಲ್ ಫ್ಲಾಜಾ ಮೇನೇಜರ್ ಮನವೊಲಿಸಿ ಸಂಧಾನ ನಡೆಸಲು ಹೋಗಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಪೊಲೀಸರ ಒತ್ತಡಕ್ಕೆ ಮಣಿದ ಪ್ಲಾಜಾ ಮೇನೇಜರ್ ಹಲ್ಲೆ ಕೋರರು ಕ್ಷಮೆ ಯಾಚಿಸಿದ್ದರಿಂದ ದೂರು ನೀಡದೆ ಬಿಟ್ಟಿದ್ದಾರೆ. ಆದರೆ ಸ್ಥಳದಲ್ಲಿದ್ದ ಸಾರ್ವಜನಿಕರು ಪೊಲೀಸರ ಪಾತ್ರ, ರೈತ ಮುಖಂಡರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

