ಶಾಶ್ವತ ನೀರಾವರಿಗೆ ಆಗ್ರಹಿಸಿ ಒಂದು ದಿನದ ಉಪವಾಸ
ಚಿಕ್ಕಬಳ್ಳಾಪುರ: ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗುತ್ತಿರುವ ನೀರಾವರಿ ಯೋಜನೆಯ ಅನುಷ್ಠಾನ ವಿಚಾರದಲ್ಲಿ ಗೊಂದಲಕ್ಕೆ ಅವಕಾಶ ನೀಡದೇ ರಾಜ್ಯ ಸರ್ಕಾರ ಸ್ಪಷ್ಟ ಭರವಸೆ ನೀಡಬೇಕೆಂದು ಒತ್ತಾಯಿಸಿ ಗಾಂಧಿ ಜಯಂತಿ ದಿನ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ನಗರದ ಚೆನ್ನಯ್ಯ ಪಾರ್ಕಿನ ಮುಂಭಾಗದಲ್ಲಿ ಕರ್ನಾಟಕ ವಿಕಲಚೇತನರ ಸಂಘಟನೆ, ನಿಸರ್ಗ ಸೊಸೈಟಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯತರ ಸಮುದಾಯ ನೇತೃತ್ವದಲ್ಲಿ ಒಂದು ದಿನ ಉಪವಾಸ ಸತ್ಯಾಗ್ರಹ ಕುಳಿತ ಹೋರಾಟಗಾರರು,ಗಾಂಧಿ ಮಾರ್ಗದಲ್ಲಿ ಧರಣಿ ಕುಳಿತರು.
ಬಯಲು ಸೀಮೆ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳ ಸೇರುತ್ತಿದೆ. ಮಳೆಯೂ ಕೈ ಕೊಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ. ಈ ನಿಟ್ಟಿನಲ್ಲಿ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಡಾ. ಪರಮಶಿವಯ್ಯನವರ ವರದಿ ಅನುಷ್ಠಾನಗೊಳಿಸಬೇಕು. ಪ್ರಸ್ತುತ ಎತ್ತಿನಹೊಳೆ ಯೋಜನೆಯಲ್ಲಿ ಪೈಪ್ ಲೈನ್ ಅಳವಡಿಸಿ ನೀರು ಹರಿಸುವುದನ್ನು ನಿಲ್ಲಿಸಬೇಕು. ಕಾಲುವೆಗಳ ಮೂಲಕವೇ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಎತ್ತಿನಹೊಳೆ ಯೋಜನೆ ಹೆಸರನ್ನೇಳಿಕೊಂಡು ಪರಮಶಿವಯ್ಯನವರ ವರದಿಯನ್ನು ಮೂಲೆಗುಂಪು ಮಾಡಬಾರದೆಂದು ಒತ್ತಾಯಿಸಿದರು.
ಬಜೆಟ್ನಲ್ಲಿ ಶಾಶ್ವತ ನೀರಾವರಿ ಯೋಜನೆಗೆ ಕೇವಲ ಹಣವನ್ನು ಮೀಸಲಿಡಲಾಗಿದೆ. ಕಾರ್ಯ ರೂಪದಲ್ಲಿ ನಿರೀಕ್ಷಿತ ಮಟ್ಟದ ಸಾಧನೆ ಕಂಡು ಬಂದಿಲ್ಲ. ಎತ್ತಿನಹೊಳೆ ಯೋಜನೆ ಉದ್ಘಾಟನೆ ಕೆಲಸವನ್ನು ಮುಂದೂಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಕಳೆದ ಬಜೆಟ್ನಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ತಿಳಿಸಿದ್ದು ಕೂಡಲೇ ಪ್ರಾಧಿಕಾರವನ್ನು ಕಾರ್ಯ ರೂಪಕ್ಕೆ ತರಬೇಕು. ಜಿಲ್ಲೆಗಳಲ್ಲಿ ಬಹುತೇಕ ಕೆರೆಗಳು ಒತ್ತುವರಿ ಸೇರಿದಂತೆ ನಾನಾ ಕಾರಣಗಳಿಂದ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಇವುಗಳನ್ನು ಮೇಲ್ದರ್ಜೆಗೇರಿಸಿ ನೀರಿನ ಮೂಲಗಳನ್ನು ಕಾಪಾಡಲು ಮುಂದಾಗಬೇಕೆಂದು ಆಗ್ರಹಿಸಿದರು.
ಕಳೆದ ವರ್ಷ ಅ.2 ರಂದು ಉಪ ವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಅನಿರ್ದಿಷ್ಠಾವಧಿ ಧರಣಿ ಹಮ್ಮಿಕೊಂಡು ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಲಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರು ನೀರಾವರಿ ಹೋರಾಟಗಾರರ ಸಭೆ ಕರೆದು ಸಕಾರತ್ಮಾಕ ಭರವಸೆ ನೀಡಿದ್ದರು.ಇದರ ನೆನೆಪಿಗಾಗಿ ಈ ವರ್ಷ ಗಾಂಧಿ ಜಯಂತಿ ದಿನ ಸಾಂಕೇತಿಕವಾಗಿ ಒಂದು ದಿನ ಉಪವಾಸ ಸತ್ಯಾಗ್ರಹ ಕೈಗೊಂಡು ನೀರಾವರಿ ಸೌಲಭ್ಯಕ್ಕೆ ಸಂಬಂಧಪಟ್ಟಂತೆ ಬೇಡಿಕೆ ಈಡೇರಿಸಲು ಒತ್ತಾಯಿಸುತ್ತಿದ್ದು ಸರ್ಕಾರ ಕೂಡಲೇ ತಮ್ಮ ಹೋರಾಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಶಾಸಕ ಎಂ. ರಾಜಣ್ಣ ಸಂಜೆ ಹೋರಾಟಗಾರರಿಗೆ ಜ್ಯೂಸ್ ಕುಡಿಸುವ ಮೂಲಕ ಸತ್ಯಾಗ್ರಹಕ್ಕೆ ತೆರೆ ಎಳೆದರು. ಪ್ರತಿಭಟನೆಯಲ್ಲಿ ನೀರಾವರಿ ಹೋರಾಟಗಾರರಾದ ಆರ್. ಆಂಜನೇಯರೆಡ್ಡಿ, ಕೆ.ಸಿ. ರಾಜಾಕಾಂತ್, ನಾರಾಯಣಸ್ವಾಮಿ, ಚಂದ್ರಶೇಖರ್, ಹರೀಶ್, ಸುಷ್ಮಾ ಶ್ರೀನಿವಾಸ್, ಎಸ್. ಲಕ್ಷ್ಮಯ್ಯ, ಉಷಾಕಿರಣ್, ಕೆ.ಜಿ. ಸುಬ್ರಮಣಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

