ಮನುವಾದಿಗಳ ವಿರುದ್ಧ ಹೋರಾಡಿ: ಸಾಹಿತಿ ಕಾ.ವೆಂ.ಶ್ರೀ
ಕನ್ನಡಪ್ರಭ ವಾರ್ತೆ, ಕೋಲಾರ, ಅ.3
ಮನುವಾದಿಗಳ ವಿರುದ್ಧ ಹೋರಾಟ ನಡೆಸುವಂತಹ ಮನೋಭಾವನೆಯನ್ನು ರೂಡಿಸಿಕೊಳ್ಳದಿದ್ದರೆ ಸಮಾಜದಲ್ಲಿ ಶೋಷಿತರು ಬದುಕಲು ಕಷ್ಯವಾಗುತ್ತದೆ ಎಂದು ಸಾಹಿತಿ ಡಾ.ಕಾ.ವೆಂ. ಶ್ರೀನಿವಾಸ ಮೂರ್ತಿ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸಮತ ಸೈನಿಕ ದಳ ಹಾಗೂ ಭಾರತೀಯ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಆಶ್ರಯದಲ್ಲಿ ಪೆರಿಯಾರ್ ಇ.ವಿ. ರಾಮಸ್ವಾಮಿ ಪ್ರಶಸ್ತಿ ಪುರಸ್ಕೃತ ಎಸ್ಎಸ್ಡಿ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ರವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪುರೋಹಿತಶಾಹಿ ಮತ್ತು ಪ್ರಭುತ್ವದ ಅಪಮೈತ್ರಿಯಿಂದ ಸಮಾಜದಲ್ಲಿ ಶೇ.99 ಮಂದಿ ನೆಮ್ಮದಿಯಿಂದ ಉಸಿರಾಡುವಂತಹ ಪರಿಸ್ಥಿತಿಯಲ್ಲಿದ್ದಾರೆ ಎಂದ ಅವರು, ಸಮಾಜದ ಪಟ್ಟಭದ್ರ ಹಿತಾಸಕ್ತಿಗಳ ಹಿಡಿತದಲ್ಲಿರುವ ಜಾತಿ, ಧರ್ಮ, ಲಿಂಗತಾರತಮ್ಯ ನಿರ್ಮೂಲನೆಗೊಳಿಸುವವರೆಗೂ ಈ ನಮ್ಮ ದೇಶ ಅಭಿವೃದ್ಧಿ ಆಗಲು ಸಾಧ್ಯವಿಲ್ಲ ಎಂದರು.
ಪೆರಿಯಾರ್ ಕೃತಿಗಳು ಸಮಾಜದಲ್ಲಿ ವೈಚಾರಿಕ ಕಿಚ್ಚನ್ನು ಹಚ್ಚಿದ್ದಾರೆ ಎಂದ ಅವರು, ಪೆರಿಯಾರ್ ಕೃತಿಗಳನ್ನು ಓದಿದ್ದಾರೆ ಸಾಕು ನಿದ್ದೆಯನ್ನು ಕಳೆದುಕೊಳ್ಳುತ್ತೇವೆ ಅಂತಹ ವಿಚಾರಗಳನ್ನು ತಮ್ಮ ಕೃತಿಗಳಲ್ಲಿ ಬರೆದಿದ್ದಾರೆ ಎಂದರು.
ಸುಮಾರು 40 ವರ್ಷಗಳ ಕಾಲ ಸೈದ್ಧಾಂತಿಕ ನೆಲೆಯಲ್ಲಿ ರಾಜಿಯಿಲ್ಲದೆ ಶೋಷಿತರ ಪರ ನಿರಂತರವಾಗಿ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿರುವ ಎಂ. ವೆಂಕಟಸ್ವಾಮಿಗೆ ಪೆರಿಯಾರ್ ಪ್ರಶಸ್ತಿ ಲಭಿಸಿರುವುದು ಸಂತೋಷದ ವಿಷಯವಾಗಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ಮಾತನಾಡಿ, ಸಮಾಜದಲ್ಲಿ ಧರ್ಮ, ಹಣ, ಅಧಿಕಾರದ ಸಂಕೋಲೆಗಳು ಮನುಕುಲದ ಮೇಲೆ ಬಲವಂತದ ಕಟ್ಟುಪಾಡುಗಳಿಗೆ ಸಿಲುಕಿಸಿ ತಮ್ಮ ಅನುಕೂಲದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ತತ್ವ ಸಿದ್ಧಾಂತಗಳಿಗೆ ಬೆಲೆಯಿಲ್ಲ, ದಾರ್ಶನಿಕರ ಆದರ್ಶಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವಂತಹ ಸಂಘಟನೆಗಳು ಸಹ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ ಮಾತನಾಡಿ, ಸತ್ಯವನ್ನು ವಿಮರ್ಶೆ ಮಾಡುವಂತಹವರನ್ನು ಸಮಾಜ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ನೋಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇಂದು ಭಾವನೆ, ಭಕ್ತಿ, ಸಂಬಂಧಗಳೆಲ್ಲವೂ ವ್ಯಾಪಾರೀಕರಣವಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಲೇಖಕ ಯೋಗೇಶ್ ಮಾಸ್ಟರ್ ಮಾತನಾಡಿ, ವೈಚಾರಿಕ ಮನೋಭಾವದ ಚರ್ಚೆಗಳು ಆಗುವಂತಹ ಸಂದರ್ಭದಲ್ಲಿ ಜಾತಿ, ಧರ್ಮಗಳು ದೂರವಿರಬೇಕು ಎಂದ ಅವರು, ವೈಚಾರಿಕ ನೆಲೆಗಟ್ಟಿನ ಸಂಶೋಧನೆಗಳು ಅಗತ್ಯವಾಗಿದೆ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್ಎಸ್ಡಿ ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ ಜೋತಿಷ್ಯದಿಂದ ಅನೇಕ ಕುಟುಂಬಗಳು ಇಂದು ಬೀದಿ ಪಾಲಾಗುತ್ತಿದೆ ಇದನ್ನು ತಡೆಯುವಂತಹ ಕೆಲಸ ಆಗಬೇಕಾಗಿದೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜೆ.ಜಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಎಸ್ಎಸ್ಡಿ ಜಿಲ್ಲಾಧ್ಯಕ್ಷ ಕೃಷ್ಣಯ್ಯ, ಪ್ರಭಾವತಿ ಇದ್ದರು. ಆರ್ಣಐ ಜಿಲ್ಲಾಧ್ಯಕ್ಷ ಬಿ.ವಿ.ವಿ. ಗಿರಿ ನಿರೂಪಿಸಿ, ಯುವ ಮುಖಂಡ ಬೆಳಮಾರನಹಳ್ಳಿ ಆನಂದ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

