ಉದ್ಯೋಗ ಖಾತ್ರಿ: ಜಿಲ್ಲೆಗಿಲ್ಲ ಖಾತ್ರಿ
ಕನ್ನಡಪ್ರಭ ವಾರ್ತೆ, ಕೋಲಾರ, ಅ.3
ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಕೋಲಾರ ಜಿಲ್ಲೆಗೆ ವರದಾನವಾಗಬೇಕಾಗಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಶಾಪವಾಗಿ ಪರಿಣಮಿಸಿದೆ.
ನರೇಗಾ ಯೋಜನೆ ಜಾರಿಗೆ ಬಂದ ಹೊಸದರಲ್ಲಿ ಜಿಲ್ಲೆಯಲ್ಲಿ ಸುಮಾರು 57 ಕೋಟಿ ರು.ಗಳ ವಿವಿಧ ಕಾಮಗಾರಿ ನಡೆದು ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿತ್ತು. ಆದರೆ, ಸದರಿ ಯೋಜನೆಯನ್ನು ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಮುಂದುವರೆಸಲು ಮಧ್ಯವರ್ತಿಗಳು, ರಾಜಕಾರಣಿಗಳು, ಗುತ್ತಿಗೆದಾರರು ಅವಕಾಶ ನೀಡದ ಕಾರಣ ಸಾಕಷ್ಟು ಅವ್ಯವಹಾರ ನಡೆದು ಜಿಲ್ಲೆಗೆ ಕೆಟ್ಟ ಹೆಸರು ಬರುವಂತಾಯಿತು.
ರಾಜ್ಯ ಸರ್ಕಾರ ನರೇಗಾ ಕಾಮಗಾರಿಗಳ ಮೇಲೆ ನಿಗಾವಹಿಸಲು ಜಿಲ್ಲೆಗೆ ಕಳುಹಿಸಿಕೊಟ್ಟಿದ್ದ ಒಂಬುಡ್ಸಮನ್ನ್ನಿಂದಲೂ ಅವ್ಯವಹಾರ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕೆಲವರು ಬಡ ಕೂಲಿ ಕಾರ್ಮಿಕರ ಹೆಸರಿನಲ್ಲಿ ನಕಲಿ ಜಾಬ್ ಕಾರ್ಡುಗಳನ್ನು ಮಾಡಿಸಿ ಕಾಮಗಾರಿ ಮಾಡದಿದ್ದರೂ ಬಿಲ್ ಮಾಡಿಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಹಲವು ತಿದ್ದುಪಡಿಗಳನ್ನು ಮಾಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧನೆ ಆಗಿಲ್ಲ.
ರಾಜ್ಯದ ಯಾದಗಿರಿ ಸೇರಿದಂತೆ ಆರು ಜಿಲ್ಲೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಕನಿಷ್ಠ ಸಾಧನೆ ದಾಖಲು ಆಗಿದ್ದು ಈ ಪೈಕಿ ಕೋಲಾರ ಜಿಲ್ಲೆಯೂ ಒಂದಾಗಿದೆ.
ಕೇಂದ್ರ ಸರ್ಕಾರ ಗ್ರಾಮೀಣಾಭಿವೃದ್ಧಿ ಇಲಾಖೆಯು ಇತ್ತೀಚೆಗೆ ತನ್ನ ವೈಬ್ಸೈಟ್ನಲ್ಲಿ ಕೋಲಾರ ಜಿಲ್ಲೆಯ ಉದ್ಯೋಗ ಖಾತ್ರಿ ಯೋಜನೆಯ ಸಾಧನೆ ಪ್ರಕಟಿಸಿದ್ದು 24 ಗ್ರಾಮ ಪಂಚಾಯಿತಿಗಳಲ್ಲಿ ಶೂನ್ಯ ಸಾಧನೆ ದಾಖಲು ಆಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಬಂಗಾರಪೇಟೆ ತಾಲೂಕಿನ ಎನ್.ಜಿ ಹುಲ್ಕೂರು, ಕಾಮಸಮುದ್ರ, ಪಾರಂಡಹಳ್ಳಿ, ಮಾಗೊಂದಿ, ಹುನ್ಕುಂದ, ಮಾರಿಕುಪ್ಪ, ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್, ಗೌನಿಪಲ್ಲಿ, ದಳಸನೂರು, ರಾಯಲ್ಪಾಡು, ಲಕ್ಷ್ಮೀಪುರ, ಮಾಸ್ತೇನಹಳ್ಳಿ, ಕೋಲಾರ ತಾಲೂಕಿನ ಹೋಳೂರು, ಹರಟಿ, ಶಾಪೂರು, ಅರಹಳ್ಳಿ, ನರಸಾಪುರ, ಐತರಾಸನಹಳ್ಳಿ,ಮಾರ್ಜೇನಹಳ್ಳಿ, ವಡಗೂರು ಗ್ರಾಪಂಗಳಲ್ಲಿ ಶೂನ್ಯ ಸಾಧನೆಯಾಗಿದೆ.
ಮುಶಬಾಗಿಲು ತಾಲೂಕಿನ ಬಲ್ಲ, ಗುಡಿಪಲ್ಲಿ, ರಾಜೇಂದ್ರ ಹಳ್ಳಿ ಹಾಗೂ ಹೆಚ್. ಗೊಲ್ಲಹಳ್ಳಿ ಗ್ರಾಪಂನಲ್ಲೂ ಸಾಧನೆ ಆಗಿಲ್ಲ. ಕೆಲವು ಕಡೆ ಕ್ರಮಬದ್ಧವಾಗಿ ಕಾಮಗಾರಿಗಳು ಆಗಿದ್ದರೂ ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೊರತೆಯಿಂದ ನಡೆದಿರುವ ಕಾಮಗಾರಿಗೆ ಸಂಬಂಧಿಸಿದ ಮಾಹಿತಿ ಎಂ.ಐ.ಎಸ್.ನಲ್ಲಿ ದಾಖಲು ಆಗದಿರುವುದರಿಂದ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯು ಶೂನ್ಯ ಸಾಧನೆ ಎಂದು ಪರಿಗಣಿಸಿದೆ. ಆದರೆ, ಈ ಲೋಪ ಸರಿಪಡಿಸಲು ಅಧಿಕಾರಿಗಳು ಆಸಕ್ತಿ ತೋರದ ಕಾರಣ ಜಿಲ್ಲೆಯು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ.
2013-14ನೇ ಸಾಲಿನಲ್ಲಿ ಕೇವಲ 24 ಕುಟುಂಬಗಳಿಗೆ ಮಾತ್ರ 100 ದಿನ ಕೆಲಸ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 192778 ಕುಟುಂಬಗಳ 586474 ಮಂದಿ ಕೆಲಸಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ, ಈ ಪೈಕಿ 192310 ಜನರಿಗೆ ಮಾತ್ರ ಜಾಬಬ್ಕಾರ್ಡುಗಳನ್ನು ವಿತರಿಸಲಾಗಿದ್ದು ಉಳಿದವರು ಉದ್ಯೋಗಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಜಾಬಬ್ಕಾರ್ಡು ಪಡೆದವರ ಪೈಕಿ 15119 ಕುಟುಂಬಗಳ ಪೈಕಿ 27552 ಜನರಿಗೆ ಮಾತ್ರ ಕೆಲಸ ಕೇಳಿದ್ದಾರೆ. ಇವರ ಪೈಕಿ 14908 ಕುಟುಂಬಗಳ 27134 ಮಂದಿ ಕೆಲಸ ನಿಯೋಜಿಸಲಾಗಿದ್ದು ಈ ಪೈಕಿ 6685 ಕುಟುಂಬಗಳ 11182 ಮಂದಿ 144329 ದಿನಗಳು ಕೆಲಸ ಮಾಡಿದ್ದಾರೆ.
ನರೇಗಾ ಯೋಜನೆಯಡಿ ಪ್ರಸ್ತುತ 8291 ಕಾಮಗಾರಿಗಳು ಮುಂದುವರೆದಿದೆ. ಬಂಗಾರಪೇಟೆಯಲ್ಲಿ 43798 ಕುಟುಂಬಗಳ 122480 ಮಂದಿ ಕೆಲಸಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದು 43734 ಮಂದಿಗೆ ಜಾಬಬ್ಕಾರ್ಡು ನೀಡಲಾಗಿದೆ.
ಕೋಲಾರದಲ್ಲಿ 377771 ಕುಟುಂಬಗಳ 115631 ಮಂದಿಯ ಪೈಕಿ 37742 ಜನರಿಗೆ ಜಾಬಬ್ಕಾರ್ಡು ನೀಡಲಾಗಿದೆ. ಮಾಲೂರಿನ 26179 ಕುಟುಂಬಗಳು, 73517 ಮಂದಿಯ ಪೈಕಿ 26114 ಜನರಿಗೆ ಜಾಬ್ಕಾರ್ಡ್ ಸಿಕ್ಕಿದೆ. ಮುಳಬಾಗಿಲು ತಾಲೂಕಿನಲ್ಲಿ ನರೇಗಾ ಯೋಜನೆ ಸಮಾಧಾನಕರವಾಗಿದೆ. 49969 ಕುಟುಂಬಗಳ 177242 ಮಂದಿಯ ಪೈಕಿ 49735 ಜನರಿಗೆ ಜಾಬ್ಕಾರ್ಡು ನೀಡಲಾಗಿದೆ. ಶ್ರೀನಿವಾಸಪುರ ತಾಲೂಕಿನ 35061 ಕುಟುಂಬಗಳ 97604 ಜನರು ಉದ್ಯೋಗಕ್ಕಾಗಿ ನೋಂದಣಿ ಮಾಡಿದ್ದು 34985 ಜನರಿಗೆ ಜಾಬಬ್ಕಾರ್ಡು ನೀಡಲಾಗಿದೆ.
ಜಿಲ್ಲೆಯಲ್ಲಿ ನರೇಗಾ ಯೋಜನೆಗೆ ಹಿಡಿದ ಗ್ರಹಣ ಬಿಡಿಸಲು ಜಿ.ಪಂ ಸಿಇಒ ಝುಲ್ಫಿಖಾರ್ ಉಲ್ಲಾ ಹಾಗೂ ಜಿಲ್ಲಾಧಿಕಾರಿ ಡಿ.ಕೆ. ರವಿ ನಿರ್ಧರಿಸಿದ್ದಾರೆ.
ಕಾಯಕ ಸಂಘ ಮತ್ತು ಕಾಯಕ ಬಂಧುವಿನ ಸಹಕಾರದಿಂದ ಇನ್ನು ಮುಂದೆ ನಡೆಯುವ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೊಂಡು ಫಲಾನುಭವಿಗಳಿಗೆ ಸಕಾಲಕ್ಕೆ ಹಣ ತಲುಪಿಸುವುದು ಮತ್ತು ಎಂ.ಇ.ಎಸ್.ನಲ್ಲಿ ಪ್ರಗತಿ ಸಕಾಲಕ್ಕೆ ದಾಖಲು ಮಾಡಿ ಹಿಂದಿನ ರೀತಿಯಲ್ಲಿ ಲೋಪಗಳು ಆಗದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ.
ಕಾಮಗಾರಿಗಳ ಮಾಹಿತಿ, ಜಾಬ್ಕಾರ್ಡುಗಳ ದಾಖಲಾತಿ ಸೇರಿದಂತೆ ಇನ್ನಿತರ ವಿವರಗಳನ್ನು ಎಂ.ಐ.ಎಸ್.ನಲ್ಲಿ ದಾಖಲು ಮಾಡಲು ಹೊರ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಮೂಲಕ ವಿಳಂಬ ತಡೆಯಲು ಹಾಗೂ ಕೇಂದ್ರ ಸರ್ಕಾರಕ್ಕೆ ಸಕಾಲಕ್ಕೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಕಳೆದ ಸೆಪ್ಟೆಂಬರ್ನಲ್ಲಿ 3 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಬೇಕಾಗಿತ್ತು. ಆದರೆ ಕೆಲಸ ನೀಡಿರುವುದು 1.30 ಜನರಿಗೆ ಮಾತ್ರ. ಕೇಂದ್ರ ಸರ್ಕಾರದ ಪ್ರಕಾರ ಜಿಲ್ಲೆಯ 24 ಗ್ರಾಪಂಗಳಲ್ಲಿ ಶೂನ್ಯ ಸಾಧನೆ ಎಂದು ದಾಖಲು ಆಗಿದೆ. ಆದರೆ, ಎಂ.ಐ.ಎಸ್.ನಲ್ಲಿ ದಾಖಲು ಆಗದೆ ಇರುವ ಮಾಹಿತಿ ನಮ್ಮ ಬಳಿ ಇದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಎಲ್ಲ ಮಾಹಿತಿ ನೀಡುವ ಮೂಲಕ ಗೊಂದಲ ನಿವಾರಿಸುತ್ತೇವೆ. ಕೋಲಾರ ತಾಲೂಕಿನ ನರಸಾಪುರ ಹಾಗೂ ಮಾರ್ಜೇನಹಳ್ಳಿಯಲ್ಲಿ ಶೂನ್ಯ ಸಾಧನೆಗೆ ಕಾರಣ ತಿಳಿದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿ.ಪಂ ಸಿಇಒ ಝುಲ್ಫಿಖಾರ್ ಉಲ್ಲಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

