ಕುಡಿವ ನೀರಿಗೆ ಆಗ್ರಹಿಸಿ ಕನ್ನಡ ಸೇನೆ ಪ್ರತಿಭಟನೆ
ಬಾಗೇಪಲ್ಲಿ: ಶುದ್ಧವಾದ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವಂತೆ ಒತ್ತಾಯಿಸಿ ಪಟ್ಟಣದ ಪುರಸಭೆಯ ಕಚೇರಿಯ ಮುಂದೆ ಕನ್ನಡ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಸೇನೆಯ ತಾಲ್ಲೂಕು ಅಧ್ಯಕ್ಷ ಬಾಬಾಜಾನ್, ಪುರಸಭೆಯ ಅಧಿಕಾರಿಗಳು ಶುದ್ಧೀಕರಣ ಘಟಕದ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಪಟ್ಟಣದ ನಾಗರೀಕರಿಗೆ ಕೆಂಪು ಮಿಶ್ರಿತ ಮಣ್ಣಿನಿಂದ ಕೂಡಿರುವ ಕೊಳಚೆ ನೀರನ್ನು ಸರಬರಾಜು ಮಾಡುತ್ತಿದ್ದು ಸಾರ್ವಜನಿಕರು ಹಲವಾರು ರೋಗ-ರುಜಿನಗಳಿಗೆ ತುತ್ತಾಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಕಳೆದ ಸುಮಾರು 2 ವರ್ಷಗಳಿಂದಲೂ ಸಮರ್ಪಕವಾಗಿ ಮಳೆ ಬಿದ್ದಿಲ್ಲ. ಕುಡಿಯುವ ನೀರಿಗಾಗಿ ನಿರ್ಮಿಸಿರುವ ಚಿತ್ರಾವತಿ ಬ್ಯಾರೇಜ್ ಖಾಲಿಯಾಗಿದೆ ಎಂದು ಅಧಿಕಾರಿಗಳು ನೆಪ ಹೇಳಿಕೊಂಡು ಪಟ್ಟಣದ ಜನತೆಗೆ ಸಮರ್ಪಕವಾಗಿ ನೀರನ್ನು ಸರಬರಾಜು ಮಾಡುತ್ತಿಲ್ಲ ಎಂದು ದೂರಿದ ಅವರು,ಕುಡಿಯುವ ನೀರಿಗಾಗಿ ಸರ್ಕಾರ ಲಕ್ಷಾಂತರ ರೂ.ಗಳನ್ನು ಬಿಡುಗಡೆ ಮಾಡಿದೆ. ಆದರೆ ಪುರಸಭೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ ಎಂದರು.
ಈ ಭಾಗದಲ್ಲಿ ಇತ್ತೀಚೆಗೆ ಅಲ್ಪಸ್ವಲ್ಪ ಮಳೆಯಾಗಿರುವ ಹಿನ್ನೆಲೆಯಲಿ ಚಿತ್ರಾವತಿ ಬ್ಯಾರೇಜ್ನಲ್ಲಿ ಸ್ವಲ್ಪ ನೀರು ಬಂದಿದೆ. ಆದರೆ, ಬ್ಯಾರೇಜ್ನಲ್ಲಿ ಶೇಖರಣೆಯಾಗಿರುವ ಕೆಸರಿನ ನೀರನ್ನು ಶುದ್ಧೀಕರಣ ಮಾಡದೆ ನೇರವಾಗಿ ಸರಬರಾಜು ಮಾಡುತ್ತಿದ್ದು ಮೊದಲು ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಶ್ರೀಮಂತ ವರ್ಗಕ್ಕೆ ಸೇರಿದವರು ಈ ಕೆಸರಿನ ನೀರನ್ನು ಕುಡಿಯಲಿ ನೋಡೋಣ ಎಂದು ವ್ಯಂಗ್ಯವಾಡಿದರು.
ಸುಮಾರು 2 ವರ್ಷಗಳಿಂದ ಚಿತ್ರಾವತಿ ಬ್ಯಾರೇಜ್ನ ನೀರು ಶುದ್ಧೀಕರಣ ಘಟಕದಲ್ಲಿರುವ ಯಂತ್ರಗಳು ಕೆಟ್ಟು ನಿಂತಿವೆಯಾದರೂ ಇದುವರೆಗೂ ರಿಪೇರಿ ಮಾಡಿಸಿಲ್ಲ. ಜನತೆಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ಲಕ್ಷಕ್ಕೂ ಹೆಚ್ಚಾಗಿ ಶುದ್ಧೀಕರಣ ಘಟಕದ ನಿರ್ವಹಣೆಗಾಗಿ ಹಣ ಬಿಡುಗಡೆಯಾಗುತ್ತಿದೆ. ಆದರೂ ಜನರಿಗೆ ಮಾತ್ರ ಕೊಳಚೆ ನೀರನ್ನು ಪೂರೈಸಲಾಗುತ್ತಿದೆ ಎಂದರು.ಪಟ್ಟಣದ ಸಾರ್ವಜನಿಕರಿಗೆ ಶುದ್ಧವಾದ ಕುಡಿಯುವ ನೀರನ್ನು ಪೂರೈಸಲು ವಿಫಲವಾಗಿರುವುದರಿಂದ ಬಹುತೇಕರು ಖಾಸಗಿಯವರಿಂದ ಕುಡಿಯುವ ನೀರಿನ ಕ್ಯಾನ್ಗೆ 25-30 ರು.ಗಳನ್ನು ನೀಡಿ ಖರೀದಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು. ಒಂದು ವಾರದಲ್ಲಿ ಬ್ಯಾರೇಜ್ನಿಂದ ಬರುವ ನೀರನ್ನು ಶುದ್ಧೀಕರಿಸಿ ಸಮರ್ಪಕವಾಗಿ ಸರಬರಾಜು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆಯ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

