ರಸ್ತೆ ಅಭಿವೃದ್ಧಿಗೆ ಇಚ್ಛಾಶಕ್ತಿ ಕೊರತೆ
ಬಾಗೇಪಲ್ಲಿ: ಪಟ್ಟಣದ ಪ್ರಮುಖ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಿ ವರ್ಷಗಳೇ ಕಳೆದರೂ ರಸ್ತೆ ಅಭಿವೃದ್ಧಿ ಕಾಣದೇ ನೆನೆಗುದಿಗೆ ಬಿದ್ದಿದೆ. ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ.
ರಾಷ್ಟ್ರೀಯ ಹೆದ್ದಾರಿ 7 ರಿಂದ 4 ಕ್ಕೆ ಸಂಪರ್ಕದ ಕೊಂಡಿಯಾಗಿರುವ ಈ ರಸ್ತೆ ಪಟ್ಟಣದ ಮಧ್ಯ ಭಾಗದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯಾಗಿರುವುದರಿಂದ(ಬಾಗೇಪಲ್ಲಿ-ಬಂಗಾರಪೇಟೆ)ಈ ಮಾರ್ಗದಲ್ಲಿ ವಾಹನ ಸಂಚಾರ ಸದಾ ಅಧಿಕ. ಪಟ್ಟಣದ ವ್ಯಾಪ್ತಿಯ ಏಕೈಕ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಆಗುವ ಅಡಚಣೆ ತಪ್ಪಿಸಸಲು ಕೋಟ್ಯಂತರ ರು. ವೆಚ್ಚದಲ್ಲಿ ಎನ್ಎಚ್ 7ರಿಂದ ನ್ಯಾಷನಲ್ ಕಾಲೇಜಿನವರೆಗೂ ರಸ್ತೆ ಅಗಲೀಕರಣ ಮಾಡಲಾಗಿತ್ತು.
ರಸ್ತೆ ಅಗಲೀಕರಣ: ರಸ್ತೆಯ ಮಧ್ಯಭಾಗದಿಂದ 49.5 ಅಡಿಗಳಂತೆ ಎರಡೂ ಬದಿಗಳಲ್ಲಿ 100 ಅಡಿಗಳ ಸರಹದ್ದು ನಿಗಧಿಗೊಳಿಸಿ ರಸ್ತೆಯ ಮಧ್ಯ ಭಾಗದಲ್ಲಿ ವಿಭಜಕ ಹಾಕಿ, ಕಟ್ಟಡಗಳನ್ನು ಮರಗಳನ್ನು ಉರುಳಿಸಿ 8 ವರ್ಷಗಳೇ ಕಳೆದಿದೆ. ಆದರೆ ನಂತರದ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಯಾರೂ ಗಮನ ಹರಿಸಿಲ್ಲ. ರಸ್ತೆ ಅಗಲೀಕರಣದಿಂದ ರಸ್ತೆ ಬದಿಯ ವ್ಯಾಪಾರಸ್ಥರಿಗೆ, ವಾಹನಗಳನ್ನು ನಿಲುಗಡೆ ಮಾಡುವವರಿಗೆ ಅನುಕೂಲವಾಯಿಗಿ ಸಾರ್ವಜನಿಕರಿಗೆ ಕಿರಿಕಿರಿ ತಪ್ಪಲಿಲ್ಲ. ಹಿಂದೆ ರಸ್ತೆಗೆ ಅಡ್ಡಲಾಗಿದ್ದ ಅಂಗಡಿ ಕಟ್ಟಡ ಮಾಲೀಕರಿಗೆ ಪರಿಹಾರ ನೀಡಿ, ಕಟ್ಟಡಗಳನ್ನು ಕೆಡವಿ ರಸ್ತೆ ಅಗಲೀಕರಣ ಮಾಡಲಾಯಿತು. ಆದರೆ ರಸ್ತೆಯ ಎರಡೂ ಬದಿ ಇದ್ದ ವಿದ್ಯುತ್ ಕಂಬಗಳನ್ನು ತೆರೆವುಗೊಳಿಸಲು ಈವರೆಗೂ ಸಾಧ್ಯವಾಗಿಲ್ಲ.
ಓಡಾಟಕ್ಕೆ ತೊಂದರೆ: ಖಾಸಗಿ ಬಸ್ಸುಗಳು, ಲಾರಿ, ಟ್ಯಾಕ್ಸಿ, ಆಟೋ ಸೇರಿದಂತೆ ವಿವಿಧ ವಾಹನಗಳನ್ನು ಪ್ರಮುಖ ರಸೆಯ ಮಧ್ಯೆ ಭಾಗದಲ್ಲಿ ನಿಲ್ಲಿಸುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ವಿವಿಧ ಅಂಗಡಿಗಳನ್ನು ಗೇಟ್ ಮುಂಭಾಗದಲ್ಲೇ ಇಟ್ಟಿರುವುದರಿಂದ ತುರ್ತು ಸಮಯದಲ್ಲಿ ರೋಗಿಗಳನ್ನು ಅ್ಯಂಬುಲೆನ್ಸ್ಗೆ ಸಾಗಿಸಲು ತೊಂದರೆಯಾಗುತ್ತಿದೆ. ಸರ್ಕಾರಿ ಬಸ್ಸು ನಿಲ್ದಾಣದ ಮುಂದೆ, ತಾಲೂಕು ಕಚೇರಿ ಮುಂಭಾಗ, ಪೊಲೀಸ್ ಠಾಣೆಯ ಮುಂಭಾಗದಲ್ಲಿ, ಸರ್ಕಾರಿ ಆಸ್ಪತ್ರೆ, ಉರ್ದು ಶಾಲೆಯ ಮುಂಭಾಗ ಸೇರಿದಂತೆ ರಸ್ತೆಯ ಉದ್ದಗಲಕ್ಕೂ ರಸ್ತೆಯ ಬದಿಯಲ್ಲಿ ಬೀದಿ ವ್ಯಾಪಾರಸ್ಥರು ರಸ್ತೆಯನೇನು ಅಕ್ರಮಿಸಿಕೊಂಡಿದ್ದಾರೆ.
ಮಧ್ಯ ರಸ್ತೆಯೇ ಮಾರುಕಟ್ಟೆ: ಖಾಸಗಿ ಬಸ್ಸುಗಳು ಮಧ್ಯೆರಸ್ತೆಯಲ್ಲಿಯೇ ಗಂಟೆಗಟ್ಟಲೇ ನಿಲ್ಲಿಸಿದ್ದರೂ, ರಸ್ತೆಗೆ ಅಡ್ಡವಾಗಿ ಅಂಗಡಿ ಮುಂಗ್ಗಟ್ಟುಗಳನ್ನಿಟ್ಟು ವ್ಯಾಪಾರ ಮಾಡುತ್ತಿದ್ದರೂ, ಆಟೋ ಚಾಲಕರು ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಚಾಲನೆ ಮಾಡುತ್ತಿದ್ದರೂ ಪೊಲೀಸರು ಗಮನ ಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಪೊಲೀಸರನ್ನು ವಿಚಾರಿಸಿದರೆ ರಸ್ತೆ ಅಗಲೀಕರಣ ಮುಗಿದಿದೆ, ಫುಟ್ ಪಾತ್ ರಸ್ತೆ ನಿರ್ಮಾಣವಾಗುವವರೆಗೂ ಸಂಚಾರ ವ್ಯವಸ್ಥೆ ಸರಿಪಡಿಸಲು ಸಾಧ್ಯವಿಲ್ಲ ಎಂದು ಉತ್ತರ ನೀಡುತ್ತಾರೆ. ಶಾಸಕರಾದರೂ ಇತ್ತ ಗಮನ ಹರಿಸಿ ರಸ್ತೆಯನ್ನು ಅಭಿವೃದ್ಧಿಪಡಿಸಿ ಕಿರಿಕಿರಿ ತಪ್ಪಿಸುವರೇ ಕಾದು ನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

