ಎಪಿಎಂಸಿ ಚುನಾವಣೆ; ಕಾಂಗ್ರೆಸ್- ಜೆಡಿಎಸ್ ಬಿರುಸಿನ ಪೈಪೋಟಿ
ಚಿಕ್ಕಬಳ್ಳಾಪುರ: ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್)್ಚುನಾವಣೆ ಅ.15 ರಂದು ನಡೆಯಲಿದ್ದು, ಸಂಘವನ್ನು ತಮ್ಮ ತೆಕ್ಕೆಗೆ ಪಡೆದುಕೊಳ್ಳುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮದೇ ಆದ ರೀತಿಯಲ್ಲಿ ಮತದಾರರನ್ನು ಸೆಳೆಯಲು ಬಿರುಸಿನ ಪ್ರಚಾರ ಕೈಗೊಂಡಿದ್ದು, ಚುನಾವಣೆ ಕುತೂಹಲ ಮೂಡಿಸಿದೆ.
ಚಿಕ್ಕಬಳ್ಳಾಪುರ ಟಿಎಪಿಸಿಎಂಎಸ್ನಲ್ಲಿ ಒಟ್ಟು 13 ನಿರ್ದೇಶಕ ಸ್ಥಾನಗಳಿಗೆ ಆಯ್ಕೆ ನಡೆಯಬೇಕಾಗಿದ್ದು ಇದೀಗ ಎ ವರ್ಗಕ್ಕೆ ಮೀಸಲಾಗಿರುವ 5 ಸ್ಥಾನಗಳನ್ನು ಹೊರತುಪಡಿಸಿ 8 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇಲ್ಲಿ ಸದಸ್ಯತ್ವ ಪಡೆದುಕೊಂಡಿರುವ ಒಟ್ಟು 2,700 ಮಂದಿ ಮತದಾರರು ತಮ್ಮ ಮತವನ್ನು ಚಲಾಯಿಸಿ ತಮಗೆ ಸೂಕ್ತವೆನಿಸಿದ 8 ನಿರ್ದೇಶಕರನ್ನು ಆಯ್ಕೆ ಮಾಡಲಿದ್ದಾರೆ. ಒಬ್ಬ ಮತದಾರ ಒಂದೇ ಬಾರಿಗೆ 8 ಮಂದಿಗೆ ಮತ ಚಲಾಯಿಸಬಹುದಾಗಿದೆ. ಇನ್ನೂ 8 ಸ್ಥಾನದಲ್ಲಿ 4 ಸಾಮಾನ್ಯ, 2 ಮಹಿಳೆ, 1 ಎಸ್ಸಿಎಸ್ಟಿ ಹಾಗೂ 1 ಬಿಸಿಎಂಬಿ ವರ್ಗಕ್ಕೆ ಮೀಸಲಾಗಿದ್ದು ಒಟ್ಟು 52 ನಾಮಪತ್ರಗಳನ್ನು ಸಲ್ಲಿಸಲಾಗಿತ್ತು. ಅಂತಿಮವಾಗಿ ಪಿ.ಎನ್. ಕೃಷ್ಣಪ್ಪ, ಎ.ಎನ್. ಕೃಷ್ಣಪ್ಪ, ಶ್ರೀರಾಮರೆಡ್ಡಿ, ರಾಮಚಂದ್ರಪ್ಪ, ಕವಿತಾ, ರತ್ನಮ್ಮ, ಗೋವಿಂದರೆಡ್ಡಿ, ಡಿ. ಕೃಷ್ಣಪ್ಪ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಾಗಿದ್ದಾರೆ.
ಈರಚಿನ್ನಪ್ಪ, ಡಿ.ವಿ. ಕೌಸಲ್ಯ, ಕೆ.ಆರ್. ಚಂದ್ರಶೇಖರ್, ಟಿ.ಜೆ. ಸಬಿತಬಾಬು, ಆರ್. ಚಂದ್ರಶೇಖರ್, ರಾಮಚಂದ್ರ, ಕೆ.ವಿ. ವಾಸುದೇವ್, ಕೆ.ಎನ್. ಶ್ರೀನಿವಾಸ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ. ಅಭ್ಯರ್ಥಿಗಳು ಗ್ರಾಮಗಳಿಗೆ ತೆರಳಿ ತಮ್ಮ ಚಿಹ್ನೆಯನ್ನು ತೋರಿಸಿ ಮತ ಕೋರುತ್ತಿದ್ದಾರೆ. ಅಲ್ಲದೇ ತಮ್ಮ ಹಿಂದೆ ಇರುವ ಪ್ರಭಾವಿ ಮುಖಂಡರ ಬಲವನ್ನು ಸದುಪಯೋಗಪಡಿಸಿಕೊಂಡು ಗೆಲುವಿಗೆ ಕಸರತ್ತು ನಡೆಸುತ್ತಿದ್ದಾರೆ.
ಮುಖಂಡರ ವಿಶ್ವಾಸ: ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಇದ್ದು ಸಂಘ ತಮ್ಮ ತೆಕ್ಕೆಗೆ ಬೀಳಲಿದೆ ಎಂಬ ವಿಶ್ವಾಸದಲ್ಲಿ ಮುಖಂಡರಿದ್ದಾರೆ. ಹಿಂದೆ ಸಂಘ ಹೆಚ್ಚಿಗೆ ಜೆಡಿಎಸ್ ಹಿಡಿತದಲ್ಲಿದ್ದು ಈ ನಡುವೆ ಕಾಂಗ್ರೆಸ್ ಹೊಡೆತ ನೀಡಿ ತನ್ನ ವಶದಲ್ಲಿಟ್ಟುಕೊಂಡಿತ್ತು. ಇದರಿಂದ ಆಗಾಗ ಗೆಲುವು ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ವಾಲಿಕೊಂಡು ಬಂದಿದ್ದು ಈಗ ರಾಜಕೀಯ ಪ್ರಭಾವ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಎರಡೂ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಅದರಂತೆ ಟಿಎಪಿಸಿಎಂಎಸ್ನಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿಗೆ ಗೆಲ್ಲಿಸಿದರೆ ಸಂಘದ ಅಭಿವೃದ್ಧಿ ತ್ವರಿತಗತಿಯಲ್ಲಿ ನಡೆದು ರೈತರಿಗೆ ಹೆಚ್ಚಿಗೆ ನೆರವಾಗಲಿದೆ. ಇದನ್ನರಿತು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಶಾಸಕ ಕೆ. ಸುಧಾಕರ್ ಆತ್ಮವಿಶ್ವಾಸ ವ್ಯಕ್ತಪಡಿಸಿದರೆ, ರೈತನಾಯಕ ದಿವಂಗತ ಪಿಳ್ಳಪ್ಪರವರು ತಮ್ಮ ಅನೇಕ ಹೋರಾಟಗಳ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅದೇ ರೀತಿ ಶಾಸಕರಾಗಿದ್ದಾಗ ಕೆ.ಪಿ. ಬಚ್ಚೇಗೌಡ ರೈತರ ಧ್ವನಿಯಾಗಿ ಕೆಲಸ ಮಾಡಿದ್ದು ಇದು ತಮಗೆ ವರದಾಯಕವಾಗಲಿದೆ ಎಂದು ಜೆಡಿಎಸ್ ವಿಶ್ವಾಸವನ್ನು ವ್ಯಕ್ತಪಡಿಸಿದೆ. ತೀವ್ರ ಕುತೂಹಲ ಮೂಡಿಸಿರುವ ಟಿಎಪಿಸಿಎಂಎಸ್ ಚುನಾವಣೆ ಅ.15 ರಂದು ನಡೆಯಲಿದ್ದು ಕಡಿಮೆ ಮತದಾರರಿರುವ ಹಿನ್ನೆಲೆಯಲ್ಲಿ ಅಂದು ಸಂಜೆಯೇ ಮತ ಎಣಿಕೆ ನಡೆದು ಫಲಿತಾಶ ಹೊರ ಬೀಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

