ಕೋಲಾರ ಜಿಲ್ಲೆ: 20 ಮರಳು ನಿಕ್ಷೇಪಗಳು ಪತ್ತೆ
ಕನ್ನಡಪ್ರಭ ವಾರ್ತೆ, ಕೋಲಾರ, ಅ.14-
ಜಿಲ್ಲೆಯಲ್ಲಿ ಒಟ್ಟು 20 ಮರಳು ನಿಕ್ಷೇಪಗಳು ಇರುವುದಾಗಿ ಸರ್ಕಾರಕ್ಕೆ ಜಿಲ್ಲಾ ಮರಳು ಗಣಿಗಾರಿಕೆ ಪರವಾನಗಿ ಮಂಜೂರಾತಿ ಸಮಿತಿಯು 2011ರಲ್ಲೇ ವರದಿ ಮಾಡಿದೆ.
ಈ ಪೈಕಿ ಮುಳಬಾಗಿಲು ತಾಲೂಕಿನಲ್ಲಿ ಅತಿ ಹೆಚ್ಚು ಮರಳು ನಿಕ್ಷೇಪಗಳು ಇರುವುದಾಗಿ ತಿಳಿಸಿದೆ. ಜಿಲ್ಲೆಯಲ್ಲಿ ಒಟ್ಟು 9,41,500 ಘ.ಮೀ ಮರಳು ಜಿಲ್ಲೆಯ ಐದು ತಾಲೂಕಿನಲ್ಲಿ ಲಭ್ಯವಿದೆ.
ರಾಜ್ಯ ಸರ್ಕಾರ 1994ರ ಮರಳು ನೀತಿಗೆ ತಿದ್ದುಪಡಿ ತಂದು 2011ರ ಜುಲೈ 2 ರಂದು ಹೊಸ ಮರಳು ನೀತಿ ಜಾರಿಗೆ ತಂದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಲಭ್ಯವಿರುವ ಮರಳು ನಿಕ್ಷೇಪಗಳ ಸರ್ಕಾರಕ್ಕೆ ವರದಿ ನೀಡಿರುವ ಮರಳು ಗಣಿಗಾರಿಕೆ ಪರವಾನಗಿ ಮಂಜೂರಾತಿ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಲೋಕೋಪಯೋಗಿ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಸಿ ಒಟ್ಟು 20 ಪ್ರದೇಶಗಳಲ್ಲಿನ ಮರಳು ನಿಕ್ಷೇಪಗಳು ಗಣಿಗಾರಿಕೆಗಾಗಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ಅನುಮೋದಿಸಲ್ಪಟ್ಟಿದೆ ಎಂದು ತಿಳಿಸಿದ್ದಾರೆ.
2011ರಲ್ಲಿ ಜಾರಿಗೆ ತಂದ ಹೊಸ ಮರಳು ನೀತಿಯಡಿ ಲೋಕೋಪಯೋಗಿ ಇಲಾಖೆಯು ಮರಳು ಸಂಗ್ರಹಣೆ ಮಾಡಿ ಟೆಂಡರ್ ಮೂಲಕ ವಿಲೇವಾರಿ ಮಾಡಬೇಕಾಗಿತ್ತು. ಆದರೆ, ಟೆಂಡರ್ ಮೂಲಕ ವಿಲೇವಾರಿ ಮಾಡುವುದಕ್ಕೆ ಹೆಚ್ಚಿನ ಜನರು ಆಸಕ್ತಿ ತೋರಿಲ್ಲ. ಇದರಿಂದಾಗಿ ಅಕ್ರಮ ದಂಧೆ ಮುಂದುರೆದಿದೆ.
ಇದನ್ನು ತಡೆಗಟ್ಟಲು ಮತ್ತೆ ಸರ್ಕಾರ ಹೊಸ ಮರಳು ನೀತಿ ಜಾರಿಗೆ ಚಿಂತನೆ ನಡೆಸಿದೆ. ಇದಕ್ಕಾಗಿ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿಯು ವರದಿ ನೀಡುವವರೆಗೆ 2011ರಲ್ಲಿ ಜಾರಿಗೆ ತಂದ ಮರಳು ನೀತಿಯನ್ನು ಪಾಲಿಸಲು ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಿದೆ. ಲಭ್ಯವಿರುವ ಮರಳು ನಿಕ್ಷೇಪಗಳಿಂದ ಮರಳು ವಿಲೇವಾರಿ ಮಾಡುವುದು ಮತ್ತು ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ಆದೇಶಿಸಿರುವುದರಿಂದ ಜಿಲ್ಲಾ ಆಡಳಿತ ಮರಳು ನಿಕ್ಷೇಪಗಳ ಮೂಲಕ ಮರಳು ವಿಲೇವಾರಿಗೆ ಕ್ರಮ ಕೈಗೊಂಡಿದೆ.
ಜಿಲ್ಲಾಧಿಕಾರಿಗಳು ಅಕ್ರಮ ಮರಳು ಸಾಗಾಣೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ಕೆಲವರಿಗೆ ಕಡಿವಾಣ ಬಿದ್ದಿರುವುದರಿಂದ ರಾಜಕಾರಣಿಗಳ ಮೂಲಕ ಲಾಬಿ ನಡೆಸಲಾರಂಭಿಸಿದ್ದಾರೆ. ಮರಳು ಅಕ್ರಮ ಸಾಗಾಣೆಗೆ ಕಡಿವಾಣ ಹಾಕಿ, ನಾವು ಬೆಂಬಲ ನೀಡುತ್ತೇವೆಂದು ಭರವಸೆ ನೀಡಿದ್ದ ಜನಪ್ರತಿನಿಧಿಗಳು ಕೆಲವರು ಒತ್ತಡಗಳಿಗೆ ಮಣಿದು ಮರಳು ಸಾಗಾಣೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ದಮಕಿ ಹಾಕುತ್ತಿದ್ದಾರೆ. ಖಡಕ್ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಅಕ್ರಮವಾಗಿ ಮರಳು ಸಾಗಾಣೆ ಮಾಡುವವರಿಗೆ ಮಣಿಯುತ್ತಾರೋ ಅಥವಾ ಜಿಲ್ಲೆಯ ಅಂತರ್ಜಲ ಸಮಸ್ಯೆ ಈಗಾಗಲೇ ಅರಿತಿರುವುದರಿಂದ ಯಾವುದೇ ಒತ್ತಡಗಳಿಗೆ ಮಣಿಯದೆ ಜನತೆಯ ಹಿತ ಕಾಪಾಡುತ್ತಾರೋ ಎಂಬುದು ಜಿಜ್ಞಾಸೆ ಮೂಡಿಸಿದೆ.
ಮರಳು ನಿಕ್ಷೇಪಗಳ ವಿವರ
ಕೋಲಾರ ತಾಲೂಕಿನ ಮುದುವಡಿ ಕೆರೆ ಪಾತ್ರದಲ್ಲಿನ ವಾನರಾಶಿ ಗ್ರಾಮದ ಬಲಿಯ ಕೆರೆ ಅಂಗಳದಲ್ಲಿ ಸರ್ವೆ ನಂ.72ರ 6 ಎಕರೆ ಪ್ರದೇಶದಲ್ಲಿ 43200 ಘನ ಮೀಟರ್ ಮರಳು ಲಭ್ಯ.
ಶ್ರೀನಿವಾಸಪುರ ತಾಲೂಕಿನ ಪಿಟಿಎಂ ಹಳ್ಳಿ ಪಾತ್ರದ ಮರಸನಹಳ್ಳಿಯ ಹಳ್ಳದಲ್ಲಿ 5.36 ಎಕರೆ ಪ್ರದೇಶದಲ್ಲಿ 24600 ಘ.ಮೀ. ಇದೇ ತಾಲೂಕಿನ ಗೌನಿಪಲ್ಲಿ ಗ್ರಾಮದ ಬಳಿಯ ಹಳ್ಳದ 1.02 ಎಕರೆಯಲ್ಲಿ 4200 ಘ.ಮೀ., ಮುಳಬಾಗಿಲು ತಾಲೂಕಿನ ಕೌಂಡಿನ್ಯ ನದಿ ಪಾತ್ರದ ಬ್ಯಾಟನೂರಿನ 23,24,25,44,314 ಸೇರಿದಂತೆ ವಿವಿಧ ಸರ್ವೆ ನಂ.ಗಳ 27.24 ಎಕರೆಯಲ್ಲಿ 65700 ಘ.ಮೀ, ಇದೇ ತಾಲೂಕಿನ ಬ್ಯಾಟನೂರು ಗ್ರಾಮದ ಮಲ್ಲಪ್ಪನ ಕೆರೆ ಬಳಿ ಸರ್ವೆ ನಂ 48,50,100,109ರ 14.92 ಎಕರೆಯಲ್ಲಿ 46200 ಘ.ಮೀ., ಉಪ್ಪಾರಹಳ್ಳಿಯ ನಗವಾರದ ವಿವಿಧ ಸರ್ವೆ ನಂ.ಗಳಲ್ಲಿನ 2.31 ಎಕರೆ ಪ್ರದೇಶದಲ್ಲಿ 19600 ಘ.ಮೀ., ನಂಗಲಿಯ ವಿವಿಧ ಸರ್ವೆ ನಂಬರಿನ 56.16 ಎಕರೆಯಲ್ಲಿನ 4.32 ಲಕ್ಷ ಘ.ಮೀ., ಹಾಗೂ ಇದೇ ತಾಲೂಕಿನ ಮುಷ್ಟೂರು ಕೆರೆ ಪಾತ್ರದ ಮುಷ್ಟೂರು ಗ್ರಾಮದ ವಿವಿಧ ಸರ್ವೆ ನಂ.ಗಳಲ್ಲಿನ 44.82 ಎಕರೆಯಲ್ಲಿನ 2,67,600 ಘ.ಮೀ., ಮಾಲೂರು ತಾಲೂಕಿನ ಮಾರ್ಕಂಡೇಯ ನದಿ ಪಾತ್ರದ ಅವಲಹಳ್ಳಿ ಬಳಿಯ ತೊರಲಕ್ಕಿಯ 0.30 ಎಕರೆ ಪ್ರದೇಶದಲ್ಲಿ 3 ಸಾವಿರ ಘ.ಮೀ.,ಬಂಗಾರಪೇಟೆ ತಾಲೂಕಿನ ಗಾರೆಒಡ್ಡು ಹಳ್ಳದ ಪಾತ್ರದ ಮಾಗೊಂದಿಯಲ್ಲಿ 0.4 ಎಕರೆಯಲ್ಲಿ 4500 ಘ.ಮೀ.,ಇದೇ ತಾಲೂಕಿನ ಪಾಲಾರ್ ನದಿ ಪಾತ್ರಕ್ಕೆ ಸೇರಿದ ಗೋಪೇನಹಳ್ಳಿಯ 2.19ರಲ್ಲಿ 9900 ಘ.ಮೀ ಹಾಗೂ ತೊಂಗಲುಕೊಪ್ಪತಾತಪಲ್ಲಿಯ 5.08 ಎಕರೆಯಲ್ಲಿ 21000 ಸಾವಿರ ಘ.ಮೀ ಮರಳು ಲಭ್ಯವಿದೆ ಎಂದು ಸರ್ಕಾರಕ್ಕೆ ವರದಿ ಮಾಡಲಾಗಿದೆ. ಜಿಲ್ಲಾ ಆಡಳಿತ ನೀಡಿರುವ ವರದಿಯನ್ನು ರಾಜ್ಯ ಸರ್ಕಾರ ಪುನರ್ ಅಂಗೀಕಾರ ನೀಡಿದಲ್ಲಿ ಲಭ್ಯವಿರುವ ಮರಳನ್ನು ಟೆಂಡರ್ ಮೂಲಕ ವಿವೇವಾರಿ ಮಾಡಿದಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಸಿಗುವುದಲ್ಲದೆ, ಗ್ರಾಹಕರಿಗೂ ಅನುಕೂಲವಾಗುತ್ತದೆ.
- ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

