ಕೋಲಾರ

'ನಾಟಿ ವೈದ್ಯ ಪದ್ಧತಿ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯ'

Published On :

ಕ.ಪ್ರ. ವಾರ್ತೆ, ಕೋಲಾರ,ಅ.14
ದೇಶೀಯ ನಾಟಿ ವೈದ್ಯ ಪದ್ಧತಿಯ ಕುರಿತು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆಯ ರಾಜ್ಯಾಧ್ಯಕ್ಷ ಹಾಗೂ ವಕೀಲ ಕೆ. ನರೇಂದ್ರಬಾಬು ಹೇಳಿದರು.
ನಗರದ ಹೊರವಲಯದಲ್ಲಿರುವ ನಿಸಾರ್ ನಗರದ ನಾಟಿ ವೈದ್ಯ ಪೀರ್ಸಾಬ್ ಸಭಾಂಗಣದಲ್ಲಿ ಸೋಮವಾರ ವಿಜಯದಶಮಿ ದಿನದಂದು ನಾಟಿ ವೈದ್ಯ ಪರಿಷತ್ತಿನಿಂದ ಏರ್ಪಡಿಸಿದ್ದ ಪಾರಂಪರಿಕ ನಾಟಿ ವೈದ್ಯ ವಿಚಾರ ಸಂಕಿರಣವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಿಸರ್ಗದಲ್ಲಿ ಬೆಳೆದ ಪ್ರತಿಯೊಂದು ಗಿಡ-ಗಡ್ಡೆಗೂ ತನ್ನದೇ ಆದ ಗುಣಗಳಿರುತ್ತವೆ. ಇವನ್ನು ಗುರ್ತಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದೇ ನಾಟಿ ವೈಧ್ಯವಾಗಿದೆ. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ನಾಟಿ ವೈದ್ಯ ಪರಂಪರೆ ನಿಲ್ಲದೇ ಮುಂದುವರೆದಿದೆ. ಕಳೆದ 60 ವರ್ಷಗಳಿಂದೀಚೆಗೆ ನಮ್ಮಲ್ಲಿ ಬಳಕೆಯಲ್ಲಿರುವ ಅಲೋಪತಿಕ್ ವೈದ್ಯ ಪದ್ಧತಿಯು ಇಂದಿಗೂ ನಾಟಿ ವೈದ್ಯಪದ್ಧತಿಯನ್ನು ಹಿಮ್ಮೆಟ್ಟಿಸಲು ಸಂಪೂರ್ಣ ವಿಫಲವಾಗಿರುವುದಕ್ಕೆ ನಾಟಿ ವೈದ್ಯದಲ್ಲಿರುವ ಅನುಭವವೇ ಕಾರಣ ಎಂದರು.
ದನಗಾಹಿಗಳು, ಕಾಡುಮೇಡು ಸುತ್ತುವವರಿಗೆ ಸಾಕಷ್ಟು ಗಿಡಮೂಲಿಕೆಗಳ ಪರಿಚಯವಿದೆ. ಇನ್ನೂ ಲಕ್ಷಾಂತರ ಗಿಡಮೂಲಿಕೆಗಳು ಉಪಯೋಗಕ್ಕೆ ಬಾರದೇ ಮೂಲೆಗುಂಪಾಗಿವೆ. ಏಕೆಂದರೆ ಒಂದೊಂದು ಕಡೆ ಒಂದೊಂದು ಗಿಡವನ್ನು ಒಂದೊಂದು ಹೆಸರಿನಿಂದ ಗುರ್ತಿಸುತ್ತಾರೆ. ಹೀಗೆ ವ್ಯವಹಾರಿಕ ಹೆಸರಿನಿಂದ ಗಿಡಗಳನ್ನು ಗುರ್ತಿಸುವುದರಿಂದ ಗಿಡಗಳು ಕ್ರಮೇಣ ಅಪರಿಚಿತವಾಗುಳಿಯುತ್ತಿವೆ. ಆದ್ದರಿಂದ ನಾಟಿ ವೈದ್ಯ ಪದ್ಧತಿಗೆ ತಕ್ಕ ಬುನಾದಿಯನ್ನು ಕಲ್ಪಿಸಿದ್ದಲ್ಲಿ ಸಾಕಷ್ಟು ಗಿಡಮೂಲಿಕೆಗಳ ಬಳಕೆ ಬೆಳಕಿಗೆ ಬರುತ್ತದೆ. ಸಂಶೋಧನೆ ನಡೆಸಿ ಇನ್ನಷ್ಟು ನಿಜಾಂಶವನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪಾರಂಪರಿಕ ನಾಟಿ ವೈದ್ಯ ಪರಿಷತ್ ಅಧ್ಯಕ್ಷ ಪೀರ್ಸಾಬ್ ಮಾತನಾಡಿ ಅನುಭವದಿಂದಷ್ಟೇ ನಾಟಿ ವೈದ್ಯ ಸಾಧ್ಯ. ಮಾನವನು ಶಿಲಾಯುಗದ ಕಾಲದಿಂದಲೂ ತನ್ನ ಯಾವುದೇ ರೋಗರುಜಿನ ಪರಿಹಾರಕ್ಕೆ ನಾಟಿ ವೈದ್ಯವನ್ನೇ ಅವಲಂಭಿಸಿದ್ದನು. ಹೀಗೆ ಲಕ್ಷಾಂತರ ವರ್ಷ ಕಾಲದಿಂದ ನಿರಂತರ ಬಳಕೆಯಲ್ಲಿರುವ ಜಾನಪದೀಯ ನಾಟಿ ವೈದ್ಯವು ಇಂಜೆಕ್ಷನ್ಗಳು ಬಂದ ಕೂಡಲೇ ಅವೈಜ್ಞಾನಿಕ, ಅಪಾಯಕಾರಿ ಎಂದೆನ್ನಿಸಿರುವುದು ಶೋಚನೀಯ ಎಂದು ವಿಷಾಧಿಸಿದರು.
ನಾಟಿ ವೈದ್ಯ ಪದ್ಧತಿಯನ್ನು ಸರ್ಕಾರವು ಸಂಶೋಧನೆಗೆ ಒಳಪಡಿಸಿದರೆ ಲಕ್ಷಾಂತರ ಗಿಡಮೂಲಿಕೆಯ ಔಷಧೀಯ ಗುಣಗಳನ್ನು ಬೆಳಕಿಗೆ ತರಲು ಸಾಧ್ಯ. ಇದಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ನಾಟಿ ವೈದ್ಯರನ್ನು ಗಣತಿ ಮಾಡಿ, ಸಂಘಟಿಸಿ, ಅವರಿಂದ ಗಿಡಮೂಲಿಕೆಗಳ ಗುರ್ತಿಸುವಿಕೆ, ಅವುಗಳ ಸಂಸ್ಕರಣೆ, ಅವುಗಳ ಬಳಕೆ ಕುರಿತು ಅಧ್ಯಯನ ನಡೆಸಲಿ ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಾರಂಪರಿಕ ನಾಟಿ ವೈದ್ಯ ಪರಿಷತ್ ಕಾರ್ಯದರ್ಶಿ ಮಹಮದ್ ಅತೀಖ್ ಉರ್ ರಹಮಾನ್, ಉಪಾಧ್ಯಕ್ಷ ಅಶ್ವತ್ಥಪ್ಪ, ಖಜಾಂಚಿ ಅಯಾಜ್ಬಿ, ಮುನೀರ್ ಬಾಷ, ಜಾಕೀರ್, ನೂರ್ಜಾನ್, ಇಲಿಯಾಜ್ ಪಾಷ, ಎಂ.ಯಲ್ಲಮ್ಮ, ಉಸೇನ್ಸಾಬ್, ಅಪ್ರೋಜ್ಪಾಷ, ಶಂಶಾದ್ ಬೇಗಂ, ನಸ್ರೀನ್ ತಾಜ್, ಕೃಷ್ಣಪ್ಪ, ಅಶ್ವತ್ಥನಾರಾಯಣ, ಎನ್.ಕೆ.ಪ್ರಕಾಶ, ಖಾದರ್ಪಾಷ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.