ಚುನಾವಣೆ ಮುನ್ನ ಸಮಿತಿ ಮಂತ್ರ
ಕ.ಪ್ರ.ವಾರ್ತೆ , ಕೋಲಾರ , ಅ.16
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಕೋಲಾರ ಮೀಸಲು ಕ್ಷೇತ್ರದಿಂದಲೇ ಮತ್ತೆ ಸ್ಪರ್ಧಿಸಲು ನಿರ್ಧರಿಸಿರುವ ಹಾಲಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪನವರು ಎದುರಾಳಿಗಳನ್ನು ಮಣಿಸಲು ಸಿದ್ಧತೆ ನಡೆಸಿದ್ದಾರೆ.
ತಮ್ಮದೇ ಆದ ಜಾಣ ರಾಜಕೀಯ ನಡೆ, ತಂತ್ರ ಪ್ರತಿತಂತ್ರ, ರಾಜಕೀಯ ಒಳ ಒಪ್ಪಂದ, ಒಡಂಬಡಿಕೆಯ ಮೂಲಕ ಸತತವಾಗಿ ಆರು ಬಾರಿ ಸಂಸತ್ ಪ್ರವೇಶಿಸಿ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಮುನಿಯಪ್ಪ, ಮುಂದಿನ ಚುನಾವಣೆಯಲ್ಲೂ ಎದುರಾಳಿಗಳ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ದಾಖಲೆ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ.
ಬಿಜೆಪಿ ಈ ಬಾರಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ, ನಮೋ ಅಲೆಯ ಮೂಲಕ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯಲು ಉದ್ದೇಶಿಸಿದೆ. ಕೋಲಾರದಲ್ಲೂ ನಮೋ ಅಲೆಯ ಮೂಲಕ ಖಾತೆ ತೆರೆಯಲು ಬಿಜೆಪಿ ಮುಖಂಡರು ಲೆಕ್ಕಾಚಾರ ಹಾಕುತ್ತಿರುವುದರಿಂದ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಈಗಿನಿಂದಲೇ ಗೆಲ್ಲಲು ಬೇಕಾದ ಎಲ್ಲಾ ರೀತಿಯ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.
ಜೆಡಿಎಸ್ ಸಹಾಯ: ಬಿಜೆಪಿ ಒಂದು ವೇಳೆ ಜೆಡಿಎಸ್ ಸಹಾಯ ಪಡೆಯಲು ಯತ್ನಿಸಿದರೆ ಕ್ಷೇತ್ರವನ್ನು ಉಳಿಸಿಕೊಳ್ಳಲು ಲೆಕ್ಕಾಚಾರ ಹಾಕು ತ್ತಿರುವ ಮುನಿಯಪ್ಪ, ಬಿಜೆಪಿ ಮತ್ತು ಜೆಡಿಎಸ್ನಲ್ಲಿನ ತಮ್ಮ ಅಪ್ತರ ಮನವೊಲಿಸಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವಂತೆ ಲಾಬಿ ನಡೆಸುತ್ತಾರೆ ಎನ್ನಲಾಗಿದೆ. ಒಂದು ವೇಳೆ ಬಿಜೆಪಿಯಲ್ಲಿನ ಸ್ನೇಹಿತರು ಕೈಕೊಟ್ಟಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಬಳಿ ಮಂಡಿಯೂರಿ ಕುಳಿತು ಜೆಡಿಎಸ್ಸ್ಹಾಯ ಪಡೆಯುವುದಕ್ಕೂ ಗಂಭೀರ ಚಿಂತನೆ ನಡೆಸಿದ್ದಾರೆ.
ಆರು ಬಾರಿ ಕೋಲಾರ ಕ್ಷೇತ್ರದಿಂದ ಗೆದ್ದು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲವೆಂದು ವಿರೋಧಿಗಳು ಮಾಡುತ್ತಿರುವ ಅಪಪ್ರಚಾರಕ್ಕೆ ತಿರುಗೇಟು ನೀಡಲು ಮುಂದಾಗಿರುವ ಮುನಿಯಪ್ಪನವರು ಹೆದ್ದಾರಿ, ರೇಲ್ವೆ ಹಾಗೂ ಸಣ್ಣ ಕೈಗಾರಿಕೆಗಳ ಸಚಿವರಾದ ಮೇಲೆ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ತಿಳಿಸಲು ಯೋಜನೆ ರೂಪಿಸುತ್ತಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರಿದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಭಾವಿ ಮುಖಂಡರನ್ನು ಒಳಗೊಂಡ ಪ್ರಚಾರ ಮತ್ತು ಸಮನ್ವಯ ಸಮಿತಿ ರಚನೆಗೆ ತೀರ್ಮಾನಿಸಿದ್ದು ನವೆಂಬರ್ ಮೊದಲ ವಾರದಲ್ಲಿ ಸಮಿತಿಯ ರಚನೆಗಾಗಿ ಪ್ರಕ್ರಿಯೆ ಆರಂಭಿಸಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ನಲ್ಲೂ ಕೆಲವರು ತಮ್ಮ ವಿರುದ್ಧ ಕತ್ತಿ ಮಸೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುನಿಯಪ್ಪ, ಮೊದಲು ತಮ್ಮ ಮನೆಯನ್ನು ಸರಿಮಾಡಿಕೊಂಡು ನಂತರ ಬಿಜೆಪಿ, ಜೆಡಿಎಸ್ ಹಾಗೂ ಇನ್ನಿತರ ಪಕ್ಷಗಳ ನಾಯಕರಿಗೆ ಗಾಳ ಹಾಕಿ ತಮ್ಮ ಕ್ಷೇತ್ರ ಭದ್ರಪಡಿಸಿಕೊಳ್ಳುವುದಕ್ಕೆ ಕಸರತ್ತು ನಡೆಸಿದ್ದಾರೆ.
8 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದಿರುವುದು ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ. ಉಳಿದ ಆರು ಕ್ಷೇತ್ರಗಳಲ್ಲಿ ಜೆಡಿಎಸ್ 3, ಬಿಜೆಪಿ 1 ಹಾಗೂ ಪಕ್ಷೇತರರು 2 ಕ್ಷೇತ್ರಗಳಲ್ಲಿ ಗೆದ್ದಿದ್ದು ಮುಳಬಾಗಿಲು ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಸಹ ಸದಸ್ಯರನ್ನಾಗಿ ಸೇರಿಸಿಕೊಂಡು ಡ್ಯಾಮೇಜ್ ಕಂಟ್ರೋಲ್ಗೆ ಮುನಿಯಪ್ಪ ಮುಂದಾಗಿದ್ದಾರೆ.
ಮುನಿಸಿಕೊಂಡವರ ಮೇಲೆ ಕಣ್ಣು: ಮಾಲೂರು ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವ ಇರುವುದರಿಂದ ಇಲ್ಲಿಯೂ ತಮ್ಮ ವರ್ಚಸ್ಸು ಉಳಿಸಿಕೊಳ್ಳುವುದಕ್ಕಾಗಿ ಅನ್ಯ ಪಕ್ಷಗಳ ಮುಖಂಡರನ್ನು ಹಾಗೂ ಮುನಿಸಿಕೊಂಡಿರುವ ಸ್ವಪಕ್ಷದವನ್ನು ಮನವೊಲಿಸಲು ಪ್ರಯತ್ನ ಮುಂದುವರಿಸಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಶಕ್ತಿ ವೃದ್ಧಿಗಾಗಿ ರಚಿಸಲು ಉದ್ದೇಶಿಸಿರುವ ಸಮನ್ವಯ ಸಮಿತಿಗೆ ಹಿರಿಯ ಶಾಸಕ ಕೆ.ಆರ್.ರಮೇಶ್ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ಶಾಸಕರಾದ ಕೆ.ಎಂ.ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್, ಚಿಂತಾಮಣಿಯ ವಾಣಿ ಕೃಷ್ಣಾರೆಡ್ಡಿ, ಮಾಜಿ ಸಚಿವ ವಿ.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ಕುಮಾರ್, ರೇಷ್ಮೆ ಮಂಡಳಿಯ ಅಧ್ಯಕ್ಷೆ ಬಿಸ್ಸೇಗೌಡ, ಜಿಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ, ಅಶೋಕ್ ಕೃಷ್ಣಪ್ಪ, ರೂಪಾ ಶಶಿಕಲಾ, ಜಿಪಂ ಸದಸ್ಯರಾದ ಅ.ಮು.ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ, ವಡಗೂರು ಹರೀಶ್, ಎಸ್.ಎ.ಪಾರ್ಥಸಾರಥಿ, ಮಾಜಿ ಶಾಸಕರಾದ ಎ.ನಾಗರಾಜ್, ಎಸ್.ಎನ್.ಕೃಷ್ಣಯ್ಯಶೆಟ್ಟಿ, ಮಾಜಿ ಸಚಿವ ನಿಸಾರ್ ಅಹಮ್ಮದ್, ಕೋಮುಲ್ ಅಧ್ಯಕ್ಷ ಗುಡಿಯಪ್ಪ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮುಖಂಡರನ್ನು ಒಳಗೊಂಡ ಸಮಿತಿ ರಚನೆಗೆ ಮುಂದಾಗಿರುವ ಮುನಿಯಪ್ಪನವರು ನವೆಂಬರ್ ಎರಡನೇ ವಾರದಲ್ಲಿ ಸಮಿತಿ ರಚನೆಗೆ ಚಾಲನೆ ನೀಡಲು ನಿರ್ಧರಿಸಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

