ಕೋಲಾರ

ದೇಶದ ಸುರಕ್ಷತೆಗಾಗಿ ನರೇಂದ್ರ ಮೋದಿಯನ್ನು ಬೆಂಬಲಿಸಿ

Published On :

ಕನ್ನಡಪ್ರಭವಾರ್ತ್ಣೆ ಕೋಲಾರ , ಅ.16
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕೆಲವರು ಮಾಡಿದ ತಪ್ಪಿನಿಂದ ಪಾಠ ಕಲಿತಿದ್ದೇವೆ, ಮತ್ತೆ ಆ ರೀತಿಯ ತಪ್ಪುಗಳು ಆಗದಂತೆ ಪಕ್ಷದ ಹಿರಿಯ ನಾಯಕರು ಎಚ್ಚರಿಕೆ ವಹಿಸಿದ್ದಾರೆ, ದೇಶದ ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ಪ್ರಾಮಾಣಿಕ ವ್ಯಕ್ತಿ ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡಲು ಯುವಕರು ಬಿಜೆಪಿಗೆ ಬೆಂಬಲ ನೀಡಬೇಕೆಂದು ಬಿಜೆಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಬಿಬಿಎಂಪಿ ಸದಸ್ಯ ಶಿವಕುಮಾರ್ ತಿ ಳಿಸಿದರು.
ನಗರದಲ್ಲಿ ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರವಿದ್ದಾಗ ತಪ್ಪು ಮಾಡಿದವರಿಗೆ ಈಗ ಅರಿವಾಗಿದೆ. ಮತ್ತೆ ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ವರಿಷ್ಟರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದೆ. ತಪ್ಪು ಮಾಡಿದವರಿಗೆ ಪರಿವರ್ತನೆ ಆಗುವುದಕ್ಕೆ ಅವಕಾಶ ನೀಡುವುದು ಧರ್ಮ. ಆದರೆ, ಪಕ್ಷಕ್ಕೆ ಯಾವುದೇ ವ್ಯಕ್ತಿಗಿಂತ ಕಾರ್ಯಕರ್ತರೇ ಮುಖ್ಯವೆಂಬುದನ್ನು ಅರಿಯಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷ ಬಿಟ್ಟವರ ಬಗ್ಗೆ ಮಾರ್ಮಿಕವಾಗಿ ನುಡಿದರು.
ಮುಸ್ಲಿಮರ ಓಲೈಕೆ: ಕಾಂಗ್ರೆಸ್ ಮುಂಚಿನಿಂದಲೂ ಓಟಿಗಾಗಿ ಮುಸ್ಲಿಮರನ್ನು ಓಲೈಕೆ ಮಾಡಲು ಪ್ರಯತ್ನಿಸುತ್ತಾ ಬಂದಿದೆ. ಓಟು ನೀಡಿದ ನಂತರ ಮುಸ್ಲಿಂರನ್ನು ಕಡೆಗಣಿಸಲಾಗುತ್ತಿದೆ. ಈ ವಿಚಾರ ಗೊತ್ತಾಗಿರುವುದರಿಂದಲೇ ಮುಸ್ಲಿಂ ಸಮುದಾಯದ ಪ್ರಮುಖ ನಾಯಕ ಮೌಲಾನಾ ಮೆಹಮೂದ್ ಮದನಿ ಅವರು ಮತಕ್ಕಾಗಿ ಮೋದಿ ಭೀತಿ ಉಂಟು ಮಾಡಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದಾರೆ. ನರೇಂದ್ರ ಮೋದಿಯವರ ಕಾರ್ಯ ವೈಖರಿಯ ಬಗ್ಗೆ ಈಗ ದೇಶದಲ್ಲಿ ಪ್ರತಿಯೊಬ್ಬರಿಗೂ ಅರಿವಾಗುತ್ತಿರುವುದರಿಂದಲೇ ಅಭೂತಪೂರ್ವ ಸ್ವಾಗತ, ಬೆಂಬಲ ಮೋದಿ ಅವರಿಗೆ ವ್ಯಕ್ತವಾಗುತ್ತಿರುವುದರಿಂದ ಕಾಂಗ್ರೆಸ್ ನಾಯಕರು ಮತ್ತೆ ಮುಸ್ಲಿಂರ ತುಷ್ಟೀಕರಣಕ್ಕೆ ಯತ್ನಿಸುತ್ತಿದ್ದಾರೆಂದು ಆರೋಪಿಸಿದರು.
ತಯಾರಿ: ನರೇಂದ್ರ ಮೋದಿ ಪ್ರಧಾನಿಯಾಗಬೇಕಾದರೆ ಕರ್ನಾಟಕದಿಂದ ಹೆಚ್ಚು ಬಿಜೆಪಿ ಸಂಸದರು ಆಯ್ಕೆಯಾಗಬೇಕಾಗಿದೆ. ಅದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ, ಮೋದಿ ಅವರು ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುತ್ತಿರುವುದರಿಂದ ಕಾಂಗ್ರೆಸ್ ನಾಯಕರಿಗೆ ನಡುಕ ಉಂಟಾಗಿರುವುದರಿಂದ ಇಲ್ಲಸಲ್ಲದ ಗುಮ್ಮ ಸೃಷ್ಟಿಸುತ್ತಿದ್ದಾರೆಂದು ಆರೋಪಿಸಿದರು.
ಕೇಂದ್ರ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ದೂರುವ ಬಿಜೆಪಿಯ ನಾಯಕರು ಕರ್ನಾಟಕದಲ್ಲಿ ನಿಮ್ಮದೇ ಪಕ್ಷದ ಸರ್ಕಾರ ನಡೆಸಿದ ಹಗರಣಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲವೆಂಬ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ವಿಕಾಸ್ ಪುತ್ತೂರು ಅವರು, ತಪ್ಪು ಮಾಡಿದಕ್ಕಾಗಿ ಮತದಾರರು ಶಿಕ್ಷೆ ನೀಡಿದ್ದಾರೆ. ಯಾರೋ ಒಂದಿಬ್ಬರು ಮಾಡಿದ ತಪ್ಪಿಗೆ ಇಡೀ ಬಿಜೆಪಿಯನ್ನು ಟೀಕಿಸುವುದು ಸರಿಯಲ್ಲ. ಕೇಂದ್ರ ಸರ್ಕಾರದ ಮಾಡಿರುವ ತಪ್ಪಿನಿಂದ ದೇಶದ ಸಮಗ್ರತೆ, ಐಕ್ಯತೆಗೆ ಧಕ್ಕೆಯಾಗಿದೆ, ಅಭಿವೃದ್ಧಿ ಕ್ಷೀಣಿಸಿದೆ, ನರೇಂದ್ರ ಮೋದಿ ಪ್ರಧಾನಿಯಾದಲ್ಲಿ ದೇಶದ ಚಿತ್ರಣ ಬದಲಾಗುತ್ತದೆ ಎಂದು ಅಭಿಪ್ರಾಯಿಸಿದರು.
ಪರಿಹಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಜನತೆಯ ನಿರೀಕ್ಷೆಗಳು ಈಡೇರಿಲ್ಲ, ಕಾಲುಬಾಯಿ ಜ್ವರದಿಂದ ನೂರಾರು ರಾಸುಗಳು ಸತ್ತಿವೆ. ಜಿಲ್ಲೆಯಲ್ಲೂ ಅನೇಕ ಹಸುಗಳು ಮೃತಪಟ್ಟಿವೆ. ಜಿಲ್ಲಾಧಿಕಾರಿಗಳು ಸರ್ಕಾರದ ಮೇಲೆ ಒತ್ತಡ ತಂದು ರೈತರಿಗೆ ಪರಿಹಾರ ಸಿಗುವಂತೆ ಮಾಡಬೇಕೆಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಯುವ ಮೋರ್ಚಾ ನೂತನ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಉಪಾಧ್ಯಕ್ಷ ಕಿಶೋರ್ ಕುಮಾರ್, ಹಿರಿಯ ಮುಖಂಡ ರಂಗಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ್, ಕಾರ್ಯದರ್ಶಿಗಳಾದ ಶ್ರೀನಾಥ್, ನರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.