ಮೋದಿ ಪ್ರಧಾನಿಯಾಗಲು ಬಿಜೆಪಿ ಬೆಂಬಲಿಸಿ
ಬಂಗಾರಪೇಟೆ: ಕೋಲಾರ ಜಿಲ್ಲೆಯನ್ನು ಸತತವಾಗಿ ಆರು ಪ್ರತಿನಿಧಿಸಿ ಎರಡು ಬಾರಿ ಕೇಂದ್ರ ಸಚಿವರೂ ಆಗಿರುವ ಕೆ.ಎಚ್. ಮುನಿಯಪ್ಪ ಜಿಲ್ಲೆಗೆ ನೀಡಿರುವ ಕೊಡುಗೆ ಏನೂ ಇಲ್ಲ. ಆದ್ದರಿಂದ ಈ ಬಾರಿ ಬದಲಾವಣೆಗಾಗಿ ನರೇಂದ್ರ ಮೋದಿರನ್ನು ಪ್ರಧಾನಿಯಾಗಿ ಮಾಡಲು ಬಿಜೆಪಿ ಬೆಂಬಲಿಸಬೇಕೆಂದು ಲೋಕಸಭೆ ಚುನಾವಣೆಯ ಪ್ರಬಲ ಆಕಾಂಕ್ಷಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಮನವಿ ಮಾಡಿದ್ದಾರೆ.
ಕಾಣದ ಸಾಧನೆ: ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಲವೆಡೆ ಪ್ರಚಾರ ಕೈಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೇಂದ್ರ ಸಚಿವ ಮುನಿಯಪ್ಪ ಮೇಲೆ ವಿಶ್ವಾಸವಿಟ್ಟು ಕ್ಷೇತ್ರದ ಜನರು ಆರು ಬಾರಿ ಲೋಕಸಭೆಗೆ ಕಳುಹಿಸಿದ್ದರೂ, ಜನರ ವಿಶ್ವಾಸಕ್ಕೆ ತಕ್ಕಂತೆ ಅವರು ನಡೆದುಕೊಳ್ಳಲಿಲ್ಲ. 30ವರ್ಷಗಳಿಂದ ಬರೀ ಜನರ ಮೂಗಿಗೆ ಬೆಣ್ಣೆ ಸವರುವ ಕೆಲಸವನ್ನು ಮಾತ್ರ ಮಾಡಿಕೊಂಡು ಬರುತ್ತಿದ್ದಾರೆಂದು ಮುನಿಯಪ್ಪ ಸಾಧನೆ ಬಗ್ಗೆ ಕಿಡಿಕಾರಿದರು. ನಾನು ವಿಧಾನಪರಿಷತ್ ಸದಸ್ಯರಾಗಿ ಹತ್ತಾರು ಜನಪರ ಸೇವೆಗಳನ್ನು ಮಾಡಿಕೊಂಡು ಜನರೊಂದಿಗೆ ಹತ್ತಿರವಾಗಿರುವೆ. ಕ್ಷೇತ್ರದ ಜನರು ಸಹ ಈ ಬಾರಿ ರಾಷ್ಚ್ರ ರಾಜಕಾರಣದಲ್ಲಿ ಬದಲಾವಣೆ ತರಲು ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿರನ್ನು ಪ್ರಧಾನಿ ಮಾಡಲು ತುದಿಗಾಲಲ್ಲಿ ನಿಂತಿದ್ದು, ಅದರಂತೆ ಜಿಲ್ಲೆಯಲ್ಲಿಯೂ ಈ ಬಾರಿ ಬಿಜೆಪಿ ಅಲೆ ವ್ಯಾಪಕವಾಗಿ ಬೀಸುತ್ತಿರುವುದರಿಂದ ಕಾಂಗ್ರೆಸ್ ಕೋಟೆಗೆ ಈ ಬಾರಿ ಲಗ್ಗೆ ಹಾಕುವುದು ಖಚಿತ.
ಸಂಪೂರ್ಣ ವಿಫಲ: ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ, ಜಿಲ್ಲೆಗೆ ಬೇಕಾಗಿರುವ ಶಾಶ್ವತ ನೀರಾವರಿ ಯೋಜನೆಗಳನ್ನು ಕಲ್ಪಿಸಿಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ನಾಲ್ಕು ತಾಲೂಕು ಜನರಿಗೆ ನೆರವಾಗುವ ಯರಗೋಳ್ ಯೋಜನೆಗೆ ಅರಣ್ಯ ಭೂಮಿ ವಶಪಡಿಸಿಕೊಳ್ಳಲು ಇರುವ ಅಡ್ಡಿಯನ್ನು ಮುನಿಯಪ್ಪ ತಮ್ಮ ಪ್ರಭಾವ ಬಳಸಿ ನಿವಾಸಿಲು ಮುಂದಾಗಿಲ್ಲ. ಅಂತೆಯೇ ಚಿನ್ನದ ಗಣಿ ವಿಷಯದಲ್ಲಿಯೂ ಜನರಿಗೆ ಸುಳ್ಳು ಮಾತುಗಳನ್ನು ಹೇಳಿ ಕಾಲಹರಣ ಮಾಡುತ್ತಿದ್ದಾರೆಯೇ ವಿನಃ ಗಣಿ ಪುನರಾಂಭಕ್ಕೆ ಈಗ ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ನೀಡುತ್ತಿಲ್ಲ.
ಸವಾಲು: ಚುನಾವಣೆಗಾಗಿ ಮಾತ್ರ ರಾಜಕಾರಣ ಮಾಡುವ ಮುನಿಯಪ್ಪ ಇಂತಹ ಕೀಲು ಮಟ್ಟದ ರಾಜಕೀಯ ಬಿಟ್ಟು ಜನರ ಸಮಸ್ಯೆಗಳತ್ತ ಗಮನಹರಿಸಲಿ. ಮುನಿಯಪ್ಪ ಮತ್ತು ತಮ್ಮ ಸಾಧನೆಗಳ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಬರುವಂತೆ ವೀರಯ್ಯ ಸವಾಲು ಹಾಕಿದ್ದಾರೆ. ರಾಜ್ಯ ಸರ್ಕಾರ ಸಹ ನಾಲ್ಕು ತಿಂಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಯೋಜನೆಗಳಿಗೆ ಕಾಂಗ್ರೆಸ್ ನಾಮಫಲಕ ಹಾಕಿಕೊಳ್ಳುತ್ತಿದೆ. ಅನ್ನಭಾಗ್ಯ, ಕ್ಷೀರಭಾಗ್ಯ ಜನರಿಗೆ ಸಾಕಾಗಿದೆ. ಶಾಶ್ವತ ನೀರಾವರಿ ಭಾಗ್ಯ ಕೊಟ್ಟರೆ ಸಾಕು ಎಂದು ರಾಜ್ಯ ಸರ್ಕಾರದ ಕಾರ್ಯವೈಖರಿ ಟೀಕಿಸಿದರು. ದೇಶದ ಸುಭದ್ರತೆಗಾಗಿ ಈ ಬಾರಿ ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿ ಎರಡು ಬಾರಿ ಅಲ್ಪ ಮತಗಳ ಅಂತರದಿಂದ ಸೋತಿರುವ ನನಗೆ ಕೊನೆ ಸಲ ಸ್ಪರ್ಧಿಸಲು ಹೈಕಮಾಂಡ್ ಅವಕಾಶ ನೀಡಲಿದೆ ಎಂಬ ಭರವಸೆ ವ್ಯಕ್ತಪಡಿಸಿ, ಟಿಕೆಟ್ ನೀಡದಿದ್ದರೂ, ಪಕ್ಷಕ್ಕಾಗಿ ಶ್ರಮಿಸುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

