ಕೋಲಾರ

ಸೋಲಾರ್ ಉಪಕರಣ ವಿತರಣೆ

Published On :

ಮುಳಬಾಗಲು: ವಲಯ ಅರಣ್ಯ ಇಲಾಖೆಯ 2013ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ದುಗ್ಗಸಂದ್ರ ಹೋಬಳಿ ವ್ಯಾಪ್ತಿಯ  ಅಗರ, ಕೊಲದೇವಿ, ಬಿಸನಹಳ್ಳಿ, ತಾವರೆಕೆರೆ, ಬಲ್ಲುಪಲ್ಲಿ, ಬೋವಿಹಳ್ಳಿ, ಸಾತನೂರು, ಲಿಂಗಾಪುರ, ಎಚ್. ಗೊಲ್ಲಹಳ್ಳಿ  ಗ್ರಾಮಗಳ ಪರಿಶಿಷ್ಟ ಜಾತಿ ಮತ್ತು ಪಂಗಡಗಳ 60 ಮಂದಿ ಫಲಾನುಭವಿಗಳಿಗೆ ಉಚಿತವಾಗಿ ಸೋಲಾರ್ ಉಪಕರಣಗಳನ್ನು ಶಾಸಕ ಕೊತ್ತೂರು ಜಿ. ಮಂಜುನಾಥ್ ಮಂಗಳವಾರ ವಿತರಿಸಿದರು.
 ತಾಲೂಕಿನ ಉಳಿದ ಫಲಾನುಭವಿಗಳಿಗೆ ಸೋಲರ್ ಉಪಕರಣಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇದರ ಸದುಪಯೋಗ ಪಡೆಯಲು ಕೋರಿದರು. ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್, ಗೊಲ್ಲಹಳ್ಳಿ ವೆಂಕಟೇಶ್, ಆರಣ್ಯಾಧಿಕಾರಿ ಕೆ. ಸೀನಪ್ಪ ಇದ್ದರು.
ಹಲ್ಲೆ: ಜೆಡಿಎಸ್ ಪ್ರತಿಭಟನೆ
ಚಿಕ್ಕಬಳ್ಳಾಪುರ: ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸೋಲನ್ನಪ್ಪಿದ ಹಿನ್ನೆಲೆಯಲ್ಲಿ ತಮ್ಮ ಪಕ್ಷಕ್ಕೆ ಬೆಂಬಲ ನೀಡಿದವರ ಮೇಲೆ ವಿಪಕ್ಷದವರು ಹಲ್ಲೆ ನಡೆಸಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಲು ಮುಂದಾದ ಘಟನೆ ಬುಧವಾರ ನಡೆಯಿತು.
ಹಲ್ಲೆಗೆ ಗುರಿಯಾದ ವ್ಯಕ್ತಿ ತಾಲೂಕಿನ ಕೊಳವನಹಳ್ಳಿ ಮುನಿರಾಜು.ಈತ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದ. ಇದರಿಂದ ಕುಪಿತಗೊಂಡ ಎದುರಾಳಿಗಳು ದ್ರಾಕ್ಷಿಯನ್ನು ಮಾರಾಟ ಮಾಡಿ ಗ್ರಾಮದತ್ತ ಹೋಗುತ್ತಿದ್ದ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ ದೊಣ್ಣೆಗಳಿಂದ ಹಲ್ಲೆ ನಡೆಸಿದರು ಎನ್ನಲಾಗಿದೆ. ಹಲ್ಲೆಗೆ ಗುರಿಯಾದ ಮುನಿರಾಜು ಗ್ರಾಮಾಂತರ ಠಾಣೆಗೆ ದೂರು ಕೊಟ್ಟಿದ್ದಾರೆ.
20ರಂದು ಸಚಿವ ಮೊಯಿಲಿ ಭೇಟಿ
ಚಿಕ್ಕಬಳ್ಳಾಪುರ: ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಡಾ.ಎಂ.ವೀರಪ್ಪ ಮೊಯಿಲಿ ಅ.20 ರಂದು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಲಿದ್ದು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.  ಅ. 20ರಂದು ಬೆಳಗ್ಗೆ 10.30ಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯಲ್ಲಿ, ಮಧ್ಯಾಹ್ನ 12ಕ್ಕೆ ಮಂಚೇನಹಳ್ಳಿ ಹೋಬಳಿ, ನಂತರ ಮಧ್ಯಾಹ್ನ 2.30ಕ್ಕೆ ಮಂಡಿಕಲ್ ಹೋಬಳಿ ಹಾಗೂ ಸಂಜೆ 4 ಕ್ಕೆ ಚಿಕ್ಕಬಳ್ಳಾಪುರದ ನಗರಸಭೆ ಮತ್ತು ಕಸಬಾ ಹೋಬಳಿಗಳಲ್ಲಿ ಜನಸಂಪರ್ಕ ಸಭೆಯನ್ನು ನಡೆಸಲಿದ್ದಾರೆ.
ಸಂತ್ರಸ್ಥರಿಂದ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 2013-14ನೇ ಸಾಲಿನ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಸಂತ್ರಸ್ಥರಿಗೆ ಸಹಾಯಧನ ಮತ್ತು ಪುನರ್ವಸತಿ ಕಲ್ಪಿಸಲು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಹಾರ ಪಡೆದುಕೊಂಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂತ್ರಸ್ಥರಿಗೆ ಸಹಾಯಧನ ಮತ್ತು ಪುನರ್ವಸತಿ ಕಲ್ಪಿಸಲಾಗುವುದು. ಅರ್ಹರು ಅ. 25ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ದೂ.ಸಂಖ್ಯೆ 08156-274535,275531 ಸಂಪರ್ಕಿಸಬಹುದೆಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕುಂದುಕೊರತೆ ಸಭೆ
ಮುಳಬಾಗಲು: ಪಟ್ಟಣದ ಶಾಸಕರ ಕಚೇರಿಯಲ್ಲಿ ಶಾಸಕ ಕೊತ್ತೂರು ಜಿ. ಮಂಜುನಾಥ್ ಅವರು ಮಂಗಳವಾರ ಸಾರ್ವಜನಿಕರಿಂದ ಕುಂದುಕೊರತೆಗಳ ಆಲಿಸಿದರು. ಸರ್ಕಾರಿ ನೌಕರರು ಸಾರ್ವಜನಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ವಿಳಂಬ ಮಾಡದೆ ತಲುಪಿಸಬೇಕು ಎಂದು ಸೂಚಿಸಿದರು.
ಅಕ್ರಮ ಸೀಮೆಎಣ್ಣೆ ಸಾಗಣೆ: ವ್ಯಕ್ತಿ ಪರಾರಿ
ಶಿಡ್ಲಘಟ್ಟ: ಅಶೋಕ ರಸ್ತೆಯಲ್ಲಿ ಅಪರಿಚಿತರು 35 ಲೀ ಸೀಮೆಎಣ್ಣೆ ಸಾಗಿಸುತ್ತಿದ್ದು ಅವರನ್ನು ಮಂಜುನಾಥ್ ಎಂಬುವರರು ವಿಚಾರಿಸಲಾಗಿ ಸೀಮೆಎಣ್ಣೆಯನ್ನು ಬಿಟ್ಟು ಪರಾರಿಯಾದ ಘಟನೆ ನಡೆದಿದೆ. ಅಶೋಕ ರಸ್ತೆಯಲ್ಲಿ ಅಪರಿಚಿತರಿಬ್ಬರು 35 ಲೀ ಸೀಮೆಎಣ್ಣೆಯನ್ನು ಸಾಗಿಸುತ್ತಿದ್ದಾಗ ಶಂಕೆಗೊಂಡ ಮಂಜುನಾಥ್ ಎಂಬುವವರು ನಿಲ್ಲಿಸಿ ಕೇಳಿದಾಗ ಅಪರಿಚಿತರು ಸೀಮೆಎಣ್ಣೆ ಬಿಟ್ಟು ಪರಾರಿಯಾಗಿದ್ದಾರೆ. ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದ್ದು ಪುರ ಠಾಣೆಯ ಪಿ.ಎಸ್.ಐ ಪುರುಷೋತ್ತಮ್ ತನಿಖೆಯನ್ನು ನಡೆಸುತ್ತಿದ್ದಾರೆ.
ಡಿವೈಎಸ್ಪಿಯಾಗಿ ರಾಜಣ್ಣ ಅಧಿಕಾರ
ಕೆಜಿಎಫ್: ಕ್ಷೇತ್ರಕ್ಕೆ ಮತ್ತೆ ಡಿವೈಎಸ್ಪಿಯಾಗಿ ಎಚ್.ಪಿ. ರಾಜಣ್ಣ ಅಧಿಕಾರ ವಹಿಸಿಕೊಂಡರು. ಕೆಜಿಎಫ್‌ನಿಂದ ಬೆಂಗಳೂರಿನ ಸಿಐಡಿ ವಿಭಾಗಕ್ಕೆ ರಾಜಣ್ಣ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿವೇಕಾನಂದ ಅವರನ್ನು ಕೆಜಿಎಫ್‌ನ ಡಿಎಸ್ಪಿಯಾಗಿ ವರ್ಗಾವಣೆ ಮಾಡಲು ಸರ್ಕಾರ ಆದೇಶಿಸಿತ್ತು. ಎಚ್.ಪಿ.ರಾಜಣ್ಣ ಅವರು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೆ.ಎ.ಟಿಗೆ ಮೇಲ್ಮನವಿ ಸಲ್ಲಿಸಿದ್ದು ತಮ್ಮ ನಿವೃತ್ತಿಗೆ 8 ತಿಂಗಳು ಇರುವಾಗ ಪೊಲೀಸ್ ಕಾಯ್ದೆಯನ್ವಯ ವರ್ಗಾವಣೆಗೆ ತಡೆಯಾಜ್ಞೆ ನೀಡಲು ಕೋರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.