ಕೋಲಾರ

ನನಸಾಗದ ಗಾಂಧೀಜಿ ಕಂಡ ಕನಸು

Published On :

ಚಿಕ್ಕಬಳ್ಳಾಪುರ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಕಂಡಿದ್ದ ರಾಮರಾಜ್ಯ ನಿರ್ಮಾಣ ಕನಸು ಇಂದಿಗೂ ನನಸಾಗಿಲ್ಲ. ಮತ್ತೊಂದೆಡೆ ಮಾನವೀಯ ಮೌಲ್ಯಗಳು ಕುಸಿಯುತ್ತ ತಮ್ಮ ದೇಶದ ಸನಾತನ ಸಂಸ್ಕೃತಿ,ಪರಂಪರೆಯನ್ನು ಮರೆಯುವಂತಾಗುತ್ತಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಕರ್ನಾಟಕ-ಆಂಧ್ರ ಉಪ ವಲಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಪದ್ಮಾಜಿ ವಿಷಾದ ವ್ಯಕ್ತಪಡಿಸಿದರು.
ನಗರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ಉಜ್ವಲ ಭಾರತಕ್ಕಾಗಿ ಶಾಂತಿದೂತ ಯುವ ಸೈಕಲ್‌ಯಾತ್ರೆ ಸಂಚಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸತ್ಯ ಮತ್ತು ಅಹಿಂಸೆ ಅಸ್ತ್ರಗಳಿಂದ ಮಹಾತ್ಮ ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು 65 ವರ್ಷಗಳೇ ಕಳೆದರೂ ಅವರ ಕನಸನ್ನು ನನಸು ಮಾಡುವ ಕೆಲಸವಾಗಿಲ್ಲ. ದೈತ್ಯ ಸಂಸ್ಕೃತಿಯು ಜನರ ದಿಕ್ಕು ತಪ್ಪಿಸುತ್ತಿದ್ದು ಈ ನಿಟ್ಟಿನಲ್ಲಿ ನಾವು ಎಚ್ಚೆತ್ತುಕೊಂಡು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ದೂರವಿಡುವುದರ ಜತೆಗೆ ಗಾಂಧೀಜಿಯವರು ಕಂಡ ಕನಸನ್ನು ನನಸು ಮಾಡಬೇಕು. ಸಾಮಾಜಿಕ ಆರ್ಥಿಕ ಉನ್ನತಿ ಹಾಗೂ ಸಚ್ಚಾರಿತ್ರ್ಯವುಳ್ಳ ಸದೃಢ ಸಮಾಜ ನಿರ್ಮಾಣವಾಗಬೇಕೆಂದು ತಿಳಿಸಿದರು.
ಶಾಸಕ ಡಾ.ಕೆ. ಸುಧಾಕರ್ ಮಾತನಾಡಿ, ಅಹಿಂಸೆಯ ಮೂಲಕ ಸ್ವಾತಂತ್ರ ಗಳಿಸಿ ಇಡೀ ವಿಶ್ವಕ್ಕೆ ಶಾಂತಿಯ ಪಾಠ ಕಲಿಸಿದ ಶಾಂತಿದೂತ ರಾಷ್ಟ್ರ ನಮ್ಮದು. ಶಾಂತಿ, ಅಹಿಂಸೆ, ಮಾನವೀಯ ಮೌಲ್ಯಗಳು ಭಾರತೀಯರಿಗೆ ರಕ್ತಗತವಾಗಿದೆ ಎಂದ ಅವರು, ಯುವ ಸಮೂಹ ದೇಶವನ್ನು ಮುನ್ನಡೆಸುವ ಕಾಲ ಇದೀಗ ಪಕ್ವವಾಗಿದೆ. ಅಭಿವೃದ್ಧಿ ಸಾಧಿಸುವ ಮೂಲಕ ಇತರೆ ದೇಶಗಳಿಗೆ ನಾವು ಮಾದರಿಯಾಗಬೇಕು ಎಂದು ಹೇಳಿದರು.
ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೋಡಿರಂಗಪ್ಪ ಮಾತನಾಡಿ, ಹಣದಿಂದ ಸಮರ್ಥ ಮತ್ತು ಸಬಲ ದೇಶವನ್ನು ಕಟ್ಟಲು, ಶಾಂತಿ ನೆಲೆಸುವಂತೆ ಮಾಡಲು ಸಾಧ್ಯವಿಲ್ಲ. ಬದಲಿಗೆ ಜನರು ಇಚ್ಛಾಶಕ್ತಿಯನ್ನು ಹೊಂದಿರಬೇಕು ಎಂದರು. ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ಯಲುವಹಳ್ಳಿ ಸೊಣ್ಣೆಗೌಡ ಮಾತನಾಡಿ, ಭಾರತೀಯ ಸಂಸ್ಕೃತಿಗೆ ದೊಡ್ಡ ಇತಿಹಾಸವೇ ಇದೆ. ಇಲ್ಲಿ ವಿಶ್ವ ಸಂದೇಶವನ್ನು ವಿಶ್ವದಾದ್ಯಂತ ಪಸರಿಸುತ್ತ ಬಂದಿರುವ ಪ್ರಜಾಪಿತ ಬ್ರಹ್ಮಕುಮಾರಿ ಮಾತೆಯರ ಕೆಲಸ ಶ್ಲಾಘನೀಯ ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಕಡಪ ಕುಮಾರರಿಂದ ಶಾಂತಿ ಪರಿಪಾಲಿಸುವ ಕುರಿತಾದ 'ಪರಿಷ್ಕಾರಂ ಒಕಟೇ' ಎನ್ನುವ ಒಂದು ಪ್ರದರ್ಶನ ನಡೆಯಿತು. ಶಿವನು ಭಿಕ್ಷೆಗೆ ಬಂದ ನೀಡು ಬಾರೆ ಅವನಂಥ ಚಲ್ವನಿಲ್ಲ ನೋಡು ಬಾರೆ ಎನ್ನುವ ಭಕ್ತಿಪ್ರಧಾನವಾದ ಗೀತೆಗೆ ಕುಮಾರ ನೃತ್ಯವಾಡಿ ಗಮನ ಸೆಳೆದರು. ಇದಕ್ಕೂ ಮುನ್ನ ಕಡಪಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಉಜ್ವಲ ಭಾರತಕ್ಕಾಗಿ ಶಾಂತಿದೂತ ಯುವ ಸೈಕಲ್ ಯಾತ್ರೆ ಸೇನಾನಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.
ರಾಜಯೋಗಿನಿ ಬಿ.ಕೆ.ರತ್ನಕ್ಕ, ನಗರಸಭಾ ಸದಸ್ಯರಾದ ಸುಬ್ರಮಣ್ಯಾಚಾರಿ, ಗಜೇಂದ್ರ, ಪ್ರಜಾಪಿತ ಬ್ರಹ್ಮಕುಮಾರರಾದ ವೆಂಕಟೇಶಣ್ಣ, ಬ್ರಹ್ಮಕುಮಾರಿ ಬಿ.ಕೆ.ಲಲಿತಕ್ಕ, ಅಂಬಿಕಾ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.