ಜೈಲು ಪಾಲಾದ ಸ್ವಾಮೀಜಿ
ಚಿಕ್ಕಬಳ್ಳಾಪುರ: ಸ್ವಯಂ ಘೋಷಿತ ದೇವಮಾನವ ಬಾಪನಹಳ್ಳಿಯ ಶ್ರೀ ಶಾಪವಿಮೋಚನೇಶ್ವರ ಸ್ವಾಮಿ ದೇವಾಲಯದ ಶ್ರೀನಿವಾಸ ಗುರೂಜಿ ಇದೀಗ ಹಸುಗೂಸನ್ನು ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದ್ದಾನೆ.
ಈತನ ಜತೆಗೆ ಇಬ್ಬರು ಮಹಿಳೆಯರು ಸೇರಿದಂತೆ ಈ ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಪೊಲೀಸರು ಗುರುವಾರ ಬಂಧಿಸಿದ್ದು, ಇವರ ಹಿಂದೆ ದೊಡ್ಡ ಜಾಲವೇ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ತಾಲೂಕಿನ ಬಾಪನಹಳ್ಳಿ ಪುಟ್ಟ ಗ್ರಾಮ. ಇದಕ್ಕೆ ಖ್ಯಾತಿ ಮತ್ತು ಕುಖ್ಯಾತಿ ಎರಡನ್ನೂ ತಂದಿರುವ ಶ್ರೀನಿವಾಸ ಗುರೂಜಿ ತಮ್ಮ ಆಶ್ರಮದಲ್ಲಿ ಸುಮಾರು 25 ದಿನದ ಹೆಣ್ಣು ಮಗುವನ್ನು 20 ಸಾವಿರ ರು.ಗಳಿಗೆ ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದ್ದಾನೆ. ಈತನ ದಂಧೆಗೆ ಸಹಕರಿಸಿದ ವೆಂಕಟೇಶ್, ಮುರಳಿ, ರೀನಾ ಮತ್ತು ಗ್ಲಾಡೀಸ್ ಅವರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಇನ್ನೂ ಹಲವರನ್ನು ಬಂಧಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಘಟನೆ ಹಿನ್ನೆಲೆ: ಬಾಪನಹಳ್ಳಿಯಲ್ಲಿ ಆಶ್ರಮವನ್ನು ನಡೆಸುತ್ತಿರುವ ಶ್ರೀನಿವಾಸ ಗುರೂಜಿ ಹಣಕ್ಕಾಗಿ ಮಕ್ಕಳನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ಆರೋಪಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಸುವರ್ಣ ಸುದ್ದಿ ವಾಹಿನಿ ಈತನ ಬಂಡವಾಳವನ್ನು ಬಯಲು ಮಾಡಲು ಕಾರ್ಯಾಚರಣೆ ಕೈಗೊಂಡಿದ್ದು ಯೋಜನೆಗೆ ಅನುಗುಣವಾಗಿ ಮಕ್ಕಳಿಲ್ಲದವರಂತೆ ಹೋಗಿ, ಎಷ್ಟೇ ಹಣ ಖರ್ಚಾದರೂ ಒಂದು ಮಗು ಬೇಕೆಂದು ಈತನನ್ನು ಕೇಳಲಾಯಿತು. ಆಗ ಹೆಣ್ಣು ಮಗುವಿಗೆ ಒಂದು ಬೆಲೆ, ಗಂಡು ಮಗುವಿಗೆ ಮತ್ತೊಂದು ಬೆಲೆ ಕಟ್ಟಿದ ಈತ 20 ಸಾವಿರ ರು.ಗಳನ್ನು ಪಡೆದು ಹೆಣ್ಣು ಮಗುವನ್ನು ಮಾರಾಟ ಮಾಡಿದ. ಕುಟುಕು ಕಾರ್ಯಾಚರಣೆಯ ಬಗ್ಗೆ ಮೊದಲೇ ತಿಳಿದುಕೊಂಡು ಕಾದು ಕುಳಿತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಮತ್ತು ಪಾಲನಾ ಸಮಿತಿ, ಸ್ಥಳೀಯ ಪೊಲೀಸರು ಸಾಕ್ಷಿ ಸಮೇತ ಆರೋಪಿ ಶ್ರೀನಿವಾಸ ಗುರೂಜಿಯ ಜತೆಗೆ ನಾಲ್ವರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ನೂರಕ್ಕೂ ಅಧಿಕ: ಶ್ರೀನಿವಾಸ ಗುರೂಜಿ ಈವರೆಗೂ 100 ಕ್ಕೂ ಹೆಚ್ಚು ಹಸುಗೂಸುಗಳನ್ನು ಹಣಕ್ಕಾಗಿ ಮಾರಾಟ ಮಾಡಿರುವ ಬಗ್ಗೆ ಮಾತುಗಳು ಕೇಳಿ ಬಂದಿವೆ. ದಂಧೆಗಾಗಿ ಮಕ್ಕಳು ಸುಲಭವಾಗಿ ಎಲ್ಲೆಲ್ಲಿ ಸಿಗುತ್ತವೆ ಎಂದು ಹೊಂಚು ಹಾಕಲಾಗುತ್ತಿತ್ತು. ಆರ್ರ್ಥಿಕ ಸಮಸ್ಯೆಯಿಂದ ತಮ್ಮ ಮಗುವನ್ನು ಪೋಷಣೆ ಮಾಡಲು ಹೆಣಗಾಡುವುದು ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಮಗು ಬೇಡ ಎಂದು ಅನಾಥವಾಗಿ ಬಿಟ್ಟು ಹೋಗುವ ಪ್ರಕರಣಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿತ್ತು. ಈ ಕೆಲಸಕ್ಕಾಗಿ ಕೆಲವರನ್ನು ನಿಯೋಜಿಸಿ ಮಗುವನ್ನು ತರಿಸಿಕೊಳ್ಳಲಾಗುತ್ತಿತ್ತಲ್ಲದೇ ಕೆಲವರಿಗೆ ಹಣದಾಸೆಯನ್ನು ತೋರಿಸಿ ಮಗುವನ್ನು ಪಡೆದುಕೊಳ್ಳಲಾಗುತ್ತಿತ್ತು. ಈ ನಡುವೆ ಗುರೂಜಿ ಆಶ್ರಮಕ್ಕೆ ಸಂತಾನ ಭಾಗ್ಯವಿಲ್ಲ ಎಂದು ಹೇಳಿಕೊಂಡು ಬರುವವರನ್ನು ಗುರಿಯನ್ನಾಗಿಸಿಕೊಂಡು ಪ್ರಾರಂಭದಲ್ಲಿ ಪೂಜೆ ಪುನಸ್ಕಾರಗಳಲ್ಲಿ ಕಾಲ ಕಳೆಯುತ್ತಿದ್ದ. ನಂತರ ಒಂದು ಮಗುವಿದೆ. ಚೆನ್ನಾಗಿ ನೋಡಿಕೊಳ್ಳಿ, ನಿಮಗೆ ಒಳ್ಳೆಯದಾಗುತ್ತದೆ ಎಂದು ಪುಸಲಾಯಿಸಿ ಮಗುವನ್ನು ಮಾರಾಟ ಮಾಡುತ್ತಿದ್ದ. ಮಕ್ಕಳಿಗಾಗಿ ಹಾತೊರೆಯುವವರ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಹಣ ವಸೂಲಿ ಮಾಡಲಾಗುತ್ತಿತ್ತು.
ಲಿಂಗ ದರ್ಶನವನ್ನು ಮಾಡಿಸುವ ಅಸಾಮಿ: ನಿಧಿಯಾಸೆಯಿಂದ ಶ್ರೀನಿವಾಸ ಗುರೂಜಿ ಆಂಧ್ರದಿಂದ ಬಾಪನಹಳ್ಳಿಗೆ ಬಂದಿದ್ದ. ಕೆಲವರಿಗೆ ಇಲ್ಲಿ ನಿಧಿ ಇದೆ ಎಂದು ಹೇಳಿ ಪೂಜೆ ಪುನಸ್ಕಾರಗಳನ್ನು ನಡೆಸುತ್ತಿದ್ದ. ಹೀಗೆ ದಿನೇ ದಿನೇ ಗೂರೂಜಿ ಎನಿಸಿಕೊಂಡು ಸ್ವಯಂ ಘೋಷಿತ ದೇವಮಾನವಾಗಿ ಬೆಳೆದು ಬಿಟ್ಟಿದ್ದು ಗ್ರಾಮದ ಜಮೀನೊಂದರಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಿ ಅದಕ್ಕೆ ಶಾಪ ವಿಮೋಚನೇಶ್ವರ ಹೆಸರಿಟ್ಟು ಆಶ್ರಮವನ್ನು ಕಟ್ಟಿದ. ನಂತರ ಕಿಡ್ನಿ ಸಮಸ್ಯೆ, ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಎಂತಹ ಕಾಯಿಲೆಗಳನ್ನು ವಾಸಿ ಮಾಡಬಲ್ಲೆ. ಲಿಂಗದಲ್ಲಿ ಶಿವನ ದರ್ಶನ ಮಾಡಿಸುತ್ತೇನೆ ಎಂಬ ಮಾತುಗಳನ್ನು ಹೇಳಿ ಖ್ಯಾತಿ ಪಡೆದುಕೊಂಡ. ಇದನ್ನು ತಿಳಿದು ರಾಜ್ಯ ಮಾತ್ರವಲ್ಲದೇ ಇತರೆ ರಾಜ್ಯಗಳಿಂದಲೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ ಈತನ ದರ್ಶನಕ್ಕಾಗಿ ಕಾಯುತ್ತಿದ್ದರು. ಈ ನಡುವೆ ತಮ್ಮ ಸಂಬಂಧಿಕರನ್ನು ಕರೆಸಿಕೊಂಡು ರಿಯಲ್ ಎಸ್ಟೇಟ್ ದಂಧೆ ಮತ್ತು ಶ್ರೀಮಂತರ ಮನೆಯಲ್ಲಿ ಪೂಜೆ ಪುನಸ್ಕಾರಗಳಲ್ಲಿ ತೊಡಗಿಸಿಕೊಂಡು ಹೆಚ್ಚಿಗೆ ವಸೂಲಿ ಮಾಡುತ್ತಿದ್ದ. ಇದರಿಂದ ತನ್ನ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತಿದ್ದಂತೆ ಬಾಪನಹಳ್ಳಿಯ ಶ್ರೀಶಾಪ ವಿಮೋಚೇನಶ್ವರ ಟ್ರಸ್ಟ್ ಸದಸ್ಯರೊಂದಿಗೆ ಹಣ ಹಂಚಿಕೆ ವಿಷಯದಲ್ಲಿ ಗಲಾಟೆ ಮಾಡಿಕೊಂಡಿದ್ದ. ಇದು ಹಣ ಲೂಟಿ, ಹಲ್ಲೆಯವರೆಗೂ ಹೋಗಿ ಜೈಲು ಸೇರಿದ್ದ. ಈ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ಆಶ್ರಮಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಮಕ್ಕಳ ಮಾರಾಟದಲ್ಲಿ ಮತ್ತೊಮ್ಮೆ ಗುರೂಜಿ ಜೈಲುಪಾಲಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

