ಜಿಲ್ಲಾಡಳಿತಕ್ಕಿಲ್ಲ ರಾಜಕಾಲುವೆ ಒತ್ತು'ವರಿ'
-ಎನ್. ವೆಂಕಟೇಶ್
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಅ. 20
ದಿನೇ ದಿನೇ ಅಂತರ್ಜಲ ಮಟ್ಟ ಕುಸಿತದ ಸಮಸ್ಯೆ ಹೆಚ್ಚಳವಾಗುತ್ತಿರುವ ಜಿಲ್ಲೆಯಲ್ಲಿ ಕೆಲವರ ದುರಾಸೆಯಿಂದ ಕೆರೆಗಳು ಮತ್ತು ರಾಜಕಾಲುವೆಗಳು ಅಕ್ರಮ ಒತ್ತುವರಿಗೆ ನಲುಗುತ್ತಿವೆ.
ಈಗಾಗಲೇ ಅನೇಕ ವರ್ಷಗಳಿಂದ ಇದ್ದ ಬಹುತೇಕ ರಾಜಕಾಲುವೆಗಳು ಮಾಯವಾಗಿವೆ. ಜತೆಗೆ ರಾಜಕಾಲುವೆಗಳ ಮೂಲಕ ಸರಾಗವಾಗಿ ಹರಿದು ಬಂದು ಸಮರ್ಪಕ ರೀತಿಯಲ್ಲಿ ನೀರು ಸಂಗ್ರಹವಾಗದೇ ಕೆರೆಗಳು ನಿಧಾನವಾಗಿ ಬರಡು ಮೈದಾನಗಳಾಗುತ್ತಿವೆ. ಜಿಲ್ಲಾಡಳಿತ ಅಕ್ರಮ ಒತ್ತುವರಿ ತೆರವುಗೊಳಿಸಿ ಕೆರೆ ಮತ್ತು ರಾಜಕಾಲುವೆಗಳನ್ನು ಸಂರಕ್ಷಿಸುವಲ್ಲಿ ಮಂದ ಧೋರಣೆಯನ್ನು ಅನುಸರಿಸುತ್ತಿದೆ.
ಯಾವುದೇ ಶಾಶ್ವತ ನೀರಾವರಿ ಮೂಲಗಳನ್ನು ಹೊಂದಿರದ ಜಿಲ್ಲೆಯಲ್ಲಿ ಮಳೆ ಮತ್ತು ಅಂತರ್ಜಲ ನಂಬಿ ರೈತರು ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದಾರೆ. ಆದರೆ, ಕಳೆದ ಕೆಲ ವರ್ಷಗಳಿಂದ ಮಳೆ ಕೈ ಕೊಡುತ್ತಿರುವುದೇ ಹೆಚ್ಚಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ವಾಡಿಕೆ ಮಳೆ 730 ಮಿ.ಮೀ ಆಗಿದ್ದರೂ ಪ್ರತಿ ವರ್ಷ ಮಳೆ ಬೀಳುವ ಪ್ರಮಾಣದಲ್ಲಿ ಕೊರತೆ ಕಂಡು ಬರುತ್ತಿದೆ. ಅದು ಸಕಾಲದಲ್ಲಿ ಮಳೆಯಾಗುವುದಿಲ್ಲ. ಮತ್ತೊಂದೆಡೆ ಅಂತರ್ಜಲ ಮಟ್ಟ ದಿನೇ ದಿನೇ ಕುಸಿದು ಪಾತಾಳ ಸೇರುತ್ತಿದೆ. ಹಿಂದೆ 500 ಅಡಿ ಅಳ ಕೊರೆದರೆ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿತ್ತು. ಈಗ ಸಾವಿರಾರು ಅಡಿ ಕೊಳವೆ ಬಾವಿ ಕೊರೆದರೂ ಸರಿಯಾಗಿ ನೀರು ಸಿಗುತ್ತಿಲ್ಲ. ಶೇ.62 ರಷ್ಟು ಕೊಳವೆ ಬಾವಿಗಳು ವಿಫಲವಾಗುತ್ತಿದ್ದು ಶೇ.30 ರಷ್ಟು ಕೊಳವೆ ಬಾವಿಗಳು ನೀರು ಸಿಕ್ಕಿದರೂ ಎರಡ್ಮೂರು ತಿಂಗಳು ಕಳೆಯುವುದರೊಳಗೆ ಬತ್ತಿ ಹೋಗುತ್ತಿವೆ.
ಎಲ್ಲೆಡೆ ಅಕ್ರಮ ದಾಳಿ: ಪೂರ್ವಜರು ಗ್ರಾಮಕ್ಕೊಂದು ಕೆರೆ ಕಟ್ಟಿಸುತ್ತಿದ್ದರು. ಕೆರೆಗಳಲ್ಲಿ ಹೆಚ್ಚಿಗೆ ನೀರು ಸಂಗ್ರಹವಾಗುವ ನಿಟ್ಟಿನಲ್ಲಿ ರಾಜಕಾಲುವೆಗಳನ್ನು ಸಂರಕ್ಷಿಸುತ್ತಿದ್ದರು. ಈ ಕಾರಣದಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತಿತ್ತು. ನೀರಾವರಿ ಸೌಲಭ್ಯದ ಸಮಸ್ಯೆಯೂ ಅಷ್ಟಾಗಿ ಕಾಡುತ್ತಿರಲಿಲ್ಲ. ಆದರೆ, ಈಗ ಜನರು ಬದುಕಿನ ಜೀವನಾಡಿಯಾಗಿರುವ ಕೆರೆಗಳ ಮೇಲೆ ಅಕ್ರಮ ಒತ್ತುವರಿ ಮೂಲಕ ದಾಳಿ ಮಾಡಲಾಗುತ್ತಿದೆ. ಕುರುಹುಗಳೇ ಇಲ್ಲದಂತೆ ರಾಜಕಾಲುವೆಗಳನ್ನು ನುಂಗಿ ಹಾಕಲಾಗುತ್ತಿದೆ. ಜಿಲ್ಲೆಯಲ್ಲಿರುವ ಕೆರೆಗಳ ಸ್ವರೂಪವೇ ಬದಲಾಗುತ್ತಿವೆ.ಚಿಕ್ಕಬಳ್ಳಾಪುರ ತಾಲೂಕಿನ ಕಣಿವೆನಾರಾಯಣಪುರದ ಬಳಿ ಅಕ್ರಮ ಗಣಿಗಾರಿಕೆಗಾಗಿ ಸಂಪೂರ್ಣವಾಗಿ ಕೆರೆಯನ್ನೇ ಮುಚ್ಚಿ ದಾರಿಯನ್ನು ನಿರ್ಮಿಸಲಾಗಿದೆ. ರಾಮದೇವನಗುಡಿ ಬಳಿ ಇರುವ ಕೆರೆಯೊಳಗೆ ಬಂದು ಕೃಷಿ ಚಟುವಟಿಕೆ ಕೈಗೊಂಡು ಕೆರೆಯ ಬಹಳಷ್ಟು ಜಾಗ ಕೃಷಿ ಜಮೀನನ್ನಾಗಿ ಪರಿವರ್ತಿಸಿಕೊಳ್ಳಲಾಗಿದೆ. ಕೇವಲ ಇವುಗಳು ಮಾತ್ರವಲ್ಲ. ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಕೆರೆಗಳ ಅಕ್ರಮ ಒತ್ತುವರಿ ಗುರುತಿಸಿದರೆ ದೊಡ್ಡ ಪಟ್ಟಿಯೇ ಆಗುತ್ತದೆ. ಇದರ ಜತೆಗೆ ರಾಜಾರೋಷದಿಂದಲೇ ಮರಳನ್ನು ಅಕ್ರಮವಾಗಿ ಲೂಟಿ ಮಾಡಿ ಇನ್ನೊಂದು ರೀತಿಯಲ್ಲಿ ಕೆರೆಗಳಿಗೆ ಪೆಟ್ಟು ಕೊಡಲಾಗುತ್ತಿದೆ. ಶೇ.80 ರಷ್ಟು ಒತ್ತುವರಿಗೆ ತುತ್ತಾಗಿರುವ ರಾಜಕಾಲುವೆಗಳನ್ನು ಈಗ ಗುರುತಿಸುವುದೇ ದೊಡ್ಡ ತಲೆನೋವು ಎಂಬ ವಾತಾವರಣವಿದೆ. ರಾಜಕಾಲುವೆಗಳು ನೆಲಸಮವಾಗಿ ಕೃಷಿ ಜಮೀನುಗಳಾಗಿ ಪರಿವರ್ತನೆಯಾಗಿದ್ದು ಜನರು ರಾಜಕಾಲುವೆಗಳ ಮಾರ್ಗದ ದಿಕ್ಕು ತಪ್ಪಿಸಿರುವುದರಿಂದ ಯಾವುದೇ ಕೆರೆಗಳಿಗೆ ನೀರು ಬರುತ್ತಿಲ್ಲ. ಇದಕ್ಕೆ ತಾಜಾ ನಿದರ್ಶನ ನಗರದ ಪ್ರಮುಖ ಕೆರೆ ಕಂದವಾರ. ಇದರ ಸಂಪರ್ಕ ಪಡೆದಿರುವ ರಾಜಕಾಲುವೆಗಳು ಅಕ್ರಮ ಒತ್ತುವರಿಗೆ ಗುರಿಯಾದ ಕಾರಣ ಇತ್ತೀಚೆಗೆ ಸುರಿದ ಮಳೆಯ ನೀರು ಎಲ್ಲೆಂದರಲ್ಲಿ ನುಗ್ಗಿ ಕುಂಟೆಯನ್ನಾಗಿಸಿತ್ತು.
ಎಚ್ಚೆತ್ತುಕೊಳ್ಳದಿದ್ದರೆ ಹೇಗೆ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಉಂಟಾದ ನಾನಾ ಸಮಸ್ಯೆಗಳಿಂದ ಎಚ್ಚೆತ್ತುಕೊಂಡ ಸಹೋದರ ಜಿಲ್ಲೆ ಕೋಲಾರದಲ್ಲಿ ಜಿಲ್ಲಾಡಳಿತ ಕೆರೆಗಳ ಮತ್ತು ರಾಜಕಾಲುವೆಗಳ ಅಕ್ರಮ ಒತ್ತುವರಿ ತೆರವುಗೊಳಿಸಲು ಕಾರ್ಯಾಚರಣೆ ಚುರುಕುಗೊಳಿಸಿದ್ದು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ಆದರೆ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕಣ್ಣು ತೆರೆದಿಲ್ಲ. ಕೇವಲ ಚಿಕ್ಕಬಳ್ಳಾಪುರ ತಾಲೂಕು ಕೇಂದ್ರದಲ್ಲಿ ಮಾತ್ರ ರಾಜಕಾಲುವೆಗಳ ಅಕ್ರಮ ಒತ್ತುವರಿ ತೆರವುಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಇತರೆ ತಾಲೂಕುಗಳ ವ್ಯಾಪ್ತಿಯ ಕೆರೆಗಳು ಮತ್ತು ರಾಜುಕಾಲುವೆಗಳ ಅಕ್ರಮ ಒತ್ತುವರಿ ಬಗ್ಗೆ ಯೋಚನೆ ಮಾಡುತ್ತಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹೊಸದಾಗಿ ಸಮೀಕ್ಷಾ ಕಾರ್ಯ ಕೈಗೊಳ್ಳುವುದರ ಜತೆಗೆ ಕೆರೆಗಳಲ್ಲಿ ಹೂಳು ತೆಗೆಸಬೇಕು. ಕೇವಲ ಜಿಲ್ಲಾ ಕೇಂದ್ರದಲ್ಲಿ ಮಾತ್ರವಲ್ಲ, ಇಡೀ ಜಿಲ್ಲೆಯ ಕೆರೆಗಳು ಮತ್ತು ರಾಜಕಾಲುವೆಗಳ ಅಕ್ರಮ ಒತ್ತುವರಿ ತೆರವುಗೊಳಿಸಬೇಕೆಂದು ಕರವೇ, ಜಯ ಕರ್ನಾಟಕ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈಗಾಗಲೇ ಉಪ ವಿಭಾಗಾಧಿಕಾರಿಗಳು ಮತ್ತು ಆಯಾ ತಹಸೀಲ್ದಾರ್ಗಳಿಗೆ ಅಕ್ರಮ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಸದ್ಯ ಸರ್ವೆ ಕಾರ್ಯ, ಅಕ್ರಮ ಒತ್ತುವರಿಯನ್ನು ಗುರುತಿಸುವ ಕೆಲಸವಾಗುತ್ತಿದೆ.
-ಡಾ. ವಿಶಾಲ್. ಆರ್, ಜಿಲ್ಲಾಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

