ಕೋಲಾರ

ವಿದ್ಯಾರ್ಥಿನಿಯರಿಗೆ ಒಕ್ಕಲಿಗರ ಸಂಘದ ಹಾಸ್ಟೆಲ್ ಸೌಲಭ್ಯ: ಕೆಂಚಪ್ಪಗೌಡ

Published On :

ಚಿಕ್ಕಬಳ್ಳಾಪುರ: ಸುಮಾರು 4 ಕೋಟಿ ರು. ವೆಚ್ಚದಲ್ಲಿ ನಗರದ ಹೊರವಲಯದ ನೂತನ ಜಿಲ್ಲಾ ಕಚೇರಿಗಳ ಸಂಕೀರ್ಣ ಬಳಿ ರಾಜ್ಯ ಒಕ್ಕಲಿಗರ ಸಂಘದ ಹೆಣ್ಣು ಮಕ್ಕಳ ಉಚಿತ ವಿದ್ಯಾರ್ಥಿ ನಿಲಯ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಂದ ವ್ಯಾಸಂಗ ಮಾಡಲು ನಗರ ಪ್ರದೇಶಕ್ಕೆ ಆಗಮಿಸುವ ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಗರದ ಹೊರವಲಯದ ನೂತನ ಜಿಲ್ಲಾಧಿಕಾರಿ ಕಚೇರಿ ಬಳಿಯ ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಯಲುವಹಳ್ಳಿ ಎನ್. ರಮೇಶ್ ಅವರು ತಮ್ಮ ಸ್ವಂತ 2 ಎಕರೆ ಜಮೀನನ್ನು ಒಕ್ಕಲಿಗರ ಹೆಣ್ಣು ಮಕ್ಕಳ ಉಚಿತ ವಿದ್ಯಾರ್ಥಿ ನಿಲಯ ನಿರ್ಮಿಸುವ ಉದ್ದೇಶಕ್ಕಾಗಿ ಮಾರುಕಟ್ಟೆ ಬೆಲೆಯಲ್ಲಿ ಅರ್ಧ ಬೆಲೆಗೆ ಸಂಘಕ್ಕೆ ಕೊಟ್ಟಿದ್ದು, ಈ ಸ್ಥಳದಲ್ಲಿ ಹೆಣ್ಣು ಮಕ್ಕಳ ಉಚಿತ ವಿದ್ಯಾರ್ಥಿ ನಿಲಯ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲಾಗುವುದೆಂದು ತಿಳಿಸಿದರು.
ರಾಜ್ಯ ಒಕ್ಕಲಿಗರ ಸಂಘ 1906ರಲ್ಲಿ ಸ್ಥಾಪನೆಯಾಗಿದ್ದು, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂಬ ಕನಸನ್ನು ನಮ್ಮ ಹಿರಿಯರು ಕಂಡಿದ್ದರು. 106 ವರ್ಷಗಳ ನಂತರ ಅವರ ಕನಸು ನನಸು ಮಾಡಲು ಸಾಧ್ಯವಾಯಿತು. ಈಗಾಗಲೇ 9 ಜಿಲ್ಲೆಗಳಲ್ಲಿ ಅವಶ್ಯಕತೆ ಇರುವ ಕಡೆ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಿದ್ದೇವೆ. 4 ಕೋಟಿ ವೆಚ್ಚದಲ್ಲಿ ಮೈಸೂರು ಬೆಂಗಳೂರಿನಲ್ಲಿ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲಾಗಿದ್ದು ನೂರಾರು ವಿದ್ಯಾರ್ಥಿಗಳು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. 11 ಜಿಲ್ಲೆಗಳಿಂದ ಸಂಘಕ್ಕೆ ಆಯ್ಕೆಯಾಗಿರುವ ಪದಾಧಿಕಾರಿಗಳ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡಿ ಈಗಾಗಲೇ ಜಮೀನು ಖರೀದಿಸಿದ್ದೇವೆ. ರಾಮನಗರ, ಮೈಸೂರು, ಮಂಡ್ಯದಲ್ಲಿ ಜಮೀನು ಖರೀದಿಸಿದ್ದು ಶೀಘ್ರದಲ್ಲೆ ನಿರ್ಮಿಸಲಾಗುವುದು, ಬಡ ಮಕ್ಕಳಿಗೆ ಸಹಾಯವಾಗಬೇಕು ಎಂದು ರಮೇಶ್ ಅವರು ಜಮೀನು ನೀಡಿದ್ದು, ಸಂಘದಿಂದ ಕಟ್ಟಡ ನಿರ್ಮಾಣ ಮಾಡಲು ಹಣದ ಅವಶ್ಯಕತೆ ಇದೆ ಆದರಿಂದ ದಾನಿಗಳು ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ಮಾಡಬಹುದು. 2 ಎಕರೆ ಜಮೀನಿನಲ್ಲಿ 10 ಗುಂಟೆ ಜಾಗದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುವುದು ಉಳಿದ ಜಾಗದಲ್ಲಿ ಉನ್ನತ ಮಟ್ಟದ ಶಿಕ್ಷಣ ಕೇಂದ್ರಗಳನ್ನು ತೆರೆಯಲಾಗುವುದು ಎಂದರು.
ರಾಜ್ಯ ಸಂಘದ ಖಜಾಂಚಿ ಯಲುವಹಳ್ಳಿ ಎನ್. ರಮೇಶ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯ ಅವಶ್ಯಕತೆಯಿದೆ. ಜಿಲ್ಲಾ ಕೇಂದ್ರದ ಸಮೀಪ ಸುಮಾರು 4 ಎಂಜಿನಿಯರಿಂಗ್ ಕಾಲೇಜು, ಫಾರ್ಮಸಿ ಕಾಲೇಜು ಸೇರಿದಂತೆ ಹಲವಾರು ವಿದ್ಯಾ ಕೇಂದ್ರಗಳಿವೆ. ಇಲ್ಲಿ ವ್ಯಾಸಂಗ ಮಾಡಲು ಗ್ರಾಮೀಣ ಪ್ರದೇಶದಿಂದ ಹಾಗೂ ದೂರದ ಪ್ರದೇಶಗಳಿಂದ ಹೆಣ್ಣು ಮಕ್ಕಳು ಆಗಮಿಸುತ್ತಾರೆ. ಇವರಿಗೆ ವಿದ್ಯಾರ್ಥಿನಿಲಯಗಳ ಅವಶ್ಯಕತೆಯಿದೆ. ಬಡ ವಿದ್ಯಾರ್ಥಿನಿಯರೂ ಪೇಯಿಂಗ್ ಹಾಸ್ಟೆಲ್‌ಗಳಲ್ಲಿ ವರ್ಷಕ್ಕೆ 60 ಸಾವಿರ ಹಣ ನೀಡಿ ಉಳಿಯಲು ಸಾಧ್ಯವಿಲ್ಲ ಇದನ್ನು ಅರಿತು ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸುತ್ತೀದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಮಹದೇವ್, ನಿರ್ದೇಶಕರಾದ ಡಾ. ನವೀನ್, ನಂಜೇಗೌಡ, ಕೃಷ್ಣಪ್ಪ, ವೆಂಕಟೇಶ್, ಮುಖಂಡರಾದ ಮಂಚನಬಲೆ ಶ್ರೀಧರ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.