ಕೋಲಾರ

ಫ್ಲೋರೈಡ್ ನೀರು ಸಮಸ್ಯೆಗೆ ಶುದ್ಧೀಕರಣ ಘಟಕ

Published On :

ಕ.ಪ್ರ.ವಾರ್ತೆ   ಚಿಕ್ಕಬಳ್ಳಾಪುರ   ಸೆ.2
ಜಿಲ್ಲೆಯಲ್ಲಿ ಜನರನ್ನು ಕಾಡುತ್ತಿರುವ ಫ್ಲೋರೈಡ್ ನೀರಿನ ಸಮಸ್ಯೆ ನಿವಾರಣೆಗೆ ತಾತ್ಕಾಲಿಕವಾಗಿ ಪ್ರಮುಖ ಕಡೆಗಳಲ್ಲಿ ಫ್ಲೋರೈಡ್ ನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡಲು ಮುಂದಾಗುತ್ತಿದ್ದು, ಜನರಲ್ಲಿ ಕೊಂಚ ಸಮಾಧಾನ ಮೂಡಿಸಿದೆ.
ಯಾವುದೇ ಶಾಶ್ವತ ನೀರಾವರಿ ಸೌಲಭ್ಯ ಹೊಂದಿರದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ದಿನೇ ದಿನೇ ಪಾತಾಳ ತಲುಪುತ್ತಿದೆ. ಕಳೆದ ಕೆಲ ದಶಕಗಳ ಹಿಂದೆ 500 ಅಡಿಗಳಿಗೆಲ್ಲಾ ನೀರು ಸಿಗುತ್ತಿದ್ದ ವಾತಾವರಣ ಇದೀಗ ಬದಲಾಗಿದೆ. ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಮರ್ಪಕವಾಗಿ ಸಿಗುತ್ತಿಲ್ಲ.
ಕೊಳವೆ ಬಾವಿ ವಿಫಲ: ಬಹಳಷ್ಟು ಸಂಖ್ಯೆಯಲ್ಲಿ ಕೊರೆಸಿದ ಕೊಳವೆ ಬಾವಿಗಳು ವಿಫಲವಾಗುತ್ತಿವೆ. ಇನ್ನೂ ಪ್ರಾರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಲಭ್ಯವಾದರೂ ಕೆಲ ತಿಂಗಳುಗಳಲ್ಲಿಯೇ ಶೇ. 60ರಷ್ಟು ಕೊಳವೆ ಬಾವಿಗಳಲ್ಲಿ ನೀರು ಇಂಗಿ ಹೋಗುತ್ತಿರುವಂತಹುದಾಗುತ್ತಿದೆ.
ಇಂತಹ ಸಮಸ್ಯೆಯ ನಡುವೆ ಜನರು ಸಿಗುವ ನೀರನ್ನು ಅನಿವಾರ್ಯವಾಗಿ ಬಳಕೆ ಮಾಡುತ್ತಿದ್ದು, ಈ ನೀರಿನಲ್ಲಿ ಯಥೇಚ್ಛ ಪ್ರಮಾಣದಲ್ಲಿ ನೈಟ್ರೈಟ್, ಫ್ಲೋರೈಡ್ ಸೇರಿದಂತೆ ಮಾರಕ ಲವಣಾಂಶ ಹೆಚ್ಚಿನ ಪ್ರಮಾಣದಲ್ಲಿರುವುದು ಗಂಭೀರ ಸಮಸ್ಯೆಗೆ ಕಾರಣವಾಗಿದೆ.
ದೈಹಿಕ ಸಮಸ್ಯೆ: ಈ ನೀರನ್ನು ಸೇವಿಸಿದ ಜನರು ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾರೆ. ಚಿಕ್ಕ ಮಕ್ಕಳು ಮೂಳೆ ಸವೆತ, ಕೀಲು ನೋವು, ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದು, ಅಂಗವೈಕಲ್ಯ ಸೇರಿದಂತೆ ದೈಹಿಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಇನ್ನೂ ವೃದ್ಧರ ಸಮಸ್ಯೆ ಹೇಳುವುದೇ ಬೇಡ. ಹೀಗೆ ಫ್ಲೋರೈಡ್ ನೀರಿನ ಸಮಸ್ಯೆ ಜಿಲ್ಲೆಯ ಜನರನ್ನು ನಾನಾ ರೀತಿಯಲ್ಲಿ ಬಾಧಿಸುತ್ತಿದೆ. ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳಲ್ಲಿ ಒಮ್ಮೆ ಸಮೀಕ್ಷಾ ಕಾರ್ಯ ಕೈಗೊಂಡು ಜನರನ್ನು ಮಾತನಾಡಿಸಿದಾಗ ಸಮಸ್ಯೆಯು ಅರಿವಿಗೆ ಬರಲಿದ್ದು, ಇಂದಿನ ಪರಿಸ್ಥಿತಿಯೇ ಕಷ್ಟಕರವಾಗಿದ್ದು, ಈಗಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಫ್ಲೋರೈಡ್ ನೀರಿನ ಸಮಸ್ಯೆಯು ಜನರ ಮೇಲೆ ಇನ್ನಷ್ಟು ಗಂಭೀರವಾಗಿ ಬೀರುವ ದುಷ್ಪರಿಣಾಮ ಊಹಿಸಿಕೊಂಡರೇನೇ ಭಯವಾಗುತ್ತದೆ.
ಶುದ್ಧೀಕರಣ ಘಟಕ: ಕಳೆದ ಕೆಲ ತಿಂಗಳುಗಳಿಂದ ಚಿಕ್ಕಬಳ್ಳಾಪುರ ತಾಲೂಕಿನ ತುಮಕಲಹಳ್ಳಿಯಲ್ಲಿ ಕೊರೆಸಿದ ಕೊಳವೆ ಬಾವಿಗಳಲ್ಲಿ ಸಿಗುತ್ತಿರುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಬಿಳಿ ಬಣ್ಣಕ್ಕೆ ತಿರುಗಿದ್ದ ಅಶುದ್ಧ ನೀರನ್ನು ಅನಿವಾರ್ರ್ಯವಾಗಿ ಸೇವಿಸಬೇಕಾಗಿತ್ತು. ಇದರಿಂದ ಶುದ್ಧ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರ ನಡುವೆ ಇದೀಗ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿರವರ ಸಲಹೆಯಂತೆ ಗೇಲ್ ಕಂಪನಿಯು 8 ಲಕ್ಷ ವೆಚ್ಚದಲ್ಲಿ ಶುದ್ಧೀಕರಣ ಘಟಕ ಸ್ಥಾಪಿಸಿದೆ. ಶನಿವಾರ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ತುಮಕಲಹಳ್ಳಿಯ ನೀರು ಶುದ್ಧೀಕರಣ ಘಟಕದ ಕಾರ್ಯ ನಿರ್ವಹಣೆಗೆ ಚಾಲನೆ ನೀಡಿದರು.
ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಈಗಾಗಲೇ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದ್ದು, ಅನುಮೋದನೆ ಪಡೆದುಕೊಂಡು ಟೆಂಡರ್ ಸಹ ಕರೆಯಲಾಗಿದೆ. ಇನ್ನೂ ಆದಷ್ಟು ಬೇಗ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅಲ್ಲಿಯವರೆಗೂ ಫ್ಲೋರೈಡ್ ನೀರಿನ ಸಮಸ್ಯೆ ಇರುವ ಪ್ರದೇಶ ಗುರುತಿಸಿ ಗೇಲ್ ಕಂಪನಿ ಸಹಕಾರದೊಂದಿಗೆ ನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.  
ತಲಾ 8 ಲಕ್ಷ ವೆಚ್ಚದಲ್ಲಿ 10 ಕಡೆ ಘಟಕ ಸ್ಥಾಪನೆ ಮಾಡಲಿದ್ದು, ಮುಂದಿನ ದಿನಗಳಲ್ಲಿ ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳಲ್ಲೂ ಘಟಕ ಸ್ಥಾಪಿಸಲು ಕಂಪನಿ ಮುಂದಾಗಿದೆ. ಘಟಕಗಳ ನಿರ್ವಹಣೆಯು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಇದಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಜಿಪಂ ಮತ್ತು ಆಯಾ ಗ್ರಾಪಂಗಳ ಉಸ್ತುವಾರಿಯಲ್ಲಿ ಘಟಕದ ನಿರ್ವಹಣೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.   
ನಿರ್ವಹಣೆ ಮುಖ್ಯ: ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆ ಬಾವಿಗಳು ವಿಫಲವಾಗಿ ನೀರಿನ ಸಮಸ್ಯೆ ಕಂಡುಬರುತ್ತಿರುವ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಸಿಗಲು ಇನ್ನೂ ಕೆಲ ವರ್ಷಗಳೇ ಬೇಕಾಗುತ್ತದೆ. ಅಲ್ಲಿಯವರೆಗೂ ಜನರು ಫ್ಲೋರೈಡ್ ನೀರನ್ನು ಸೇವಿಸಿ ತೊಂದರೆಗೆ ಸಿಲುಕಿಕೊಳ್ಳದಿರಲು ಎಲ್ಲೆಲ್ಲಿ ಫ್ಲೋರೈಡ್ ನೀರಿನ ಸಮಸ್ಯೆಯು ಹೆಚ್ಚಿಗೆ ಕಂಡು ಬರುತ್ತಿದೆಯೋ ಅಲ್ಲಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡಬೇಕಾಗಿದೆ. ಈ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜಾಗುವಂತೆ ನೋಡಿಕೊಳ್ಳಬೇಕು. ಪ್ರಮುಖವಾಗಿ ನೀರಿನ ಶುದ್ಧೀಕರಣ ಘಟಕ ಸ್ಥಾಪನೆ ಮಾಡಿ ಬಿಟ್ಟರೆ ಸಾಲದು. ಸಮರ್ಪಕ ನಿರ್ವಹಣೆ ಕೈಗೊಳ್ಳುವುದು ಮುಖ್ಯ. ಈ ಹಿಂದೆ ಕೆಲವೆಡೆ ಶಾಸ್ತ್ರಕ್ಕಾಗಿ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲಾಯಿತಾದರೂ ನಿರ್ವಹಣೆಯಿಲ್ಲದೆ ಘಟಕಗಳು ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗಿವೆ. ಇದು ಇದೀಗ ಹೊಸದಾಗಿ ನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡುತ್ತಿರುವ ವಿಷಯದಲ್ಲೂ ಆಗಬಾರದು. ಕೇವಲ ಘಟಕ ಸ್ಥಾಪನೆ ಮಾಡಲಾಗಿದೆ ಎಂದು ಕೂರದೇ ಜಿಲ್ಲಾಡಳಿತ ಜವಾಬ್ದಾರಿ ವಹಿಸಿಕೊಂಡು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಈ ಮೂಲಕ ಫ್ಲೋರೈಡ್ ನೀರಿನ ಸೇವನೆಯಿಂದ ಜನರು ಅನಾರೋಗ್ಯ ಸಮಸ್ಯೆಗಳಿಗೆ ಗುರಿಯಾಗದಂತೆ, ನೀರು ಶುದ್ಧೀಕರಣ ಘಟಕಗಳು ನಿರ್ವಹಣೆಯಿಲ್ಲದೆ ಹಾಳಾಗದಂತೆ ನೋಡಿಕೊಳ್ಳಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.