ಜಾತಿ-ಧರ್ಮಕ್ಕಿಂತ ಮನುಷ್ಯತ್ವಕ್ಕೆ ಗೌರವ ನೀಡಿ'
ಕೋಲಾರ: ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ, ಸಮುದ್ರ ಮಂಥನದಲ್ಲಿ ಅಮೃತ ಘಳಿಗೆಯು ಕಾಣುತ್ತಿದ್ದು ಇದೇ ರೀತಿಯ ಕಾಲೇಜಿನ ಪ್ರಗತಿ ಮುಂದುವರೆಯಬೇಕೆಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ. ಗೋಪಿನಾಥ ಅಭಿಪ್ರಾಯಪಟ್ಟರು.
ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಮಾವೇಶ ಹಾಗೂ ಕೋಮು ಸೌಹಾರ್ದ ಪಾಕ್ಷಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕಳೆದ ತಿಂಗಳು ನಡೆದ ಅಹಿತಕರ ಘಟನೆಯಿಂದ ಕಾಲೇಜಿನ ವರ್ಚಸ್ಸಿಗೆ ಕೊಂಚ ಧಕ್ಕೆಯಾಗಿತ್ತು. ಈಗ ಕಾಲೇಜಿನ ಆಡಳಿತ ವರ್ಗ, ವಿದ್ಯಾರ್ಥಿ ವೃಂದ ಹಾಗೂ ವಿವಿಧ ಸಂಸ್ಥೆಗಳ ಸಹಕಾರದಿಂದ ಕಾಲೇಜು ಅಭಿವೃದ್ಧಿಯತ್ತ ಸಾಗುವಂತಾಗಿದೆ ಎಂದರು.
ಈ ಕಾಲೇಜಿಗೆ ದೊಡ್ಡ ಪರಂಪರೆ ಇದೆ, ರಾಮಕೃಷ್ಣ ಉಡುಪ ಅವರಂತಹ ಧೀಮಂತ ಪ್ರಾಂಶುಪಾಲರಿಂದಾಗಿ ಕಾಲೇಜಿಗೆ ಕೀರ್ತಿ ಬಂದಿದೆ. ಈ ಪರಂಪರೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಮನ್ವಂತರ ಪ್ರಕಾಶ , ಪತ್ರಕರ್ತರ ಸಂಘ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಕಾಲೇಜಿನ ಅಭಿವೃದ್ಧಿಗಾಗಿ ಸಹಕಾರ ನೀಡಲು ಬದ್ಧವಾಗಿದೆ. ಆದರೆ ವಿದ್ಯಾರ್ಥಿಗಳು ಶಿಸ್ತು ಕಾಪಾಡಬೇಕು, ಉತ್ತಮ ಶಿಕ್ಷಣಕ್ಕಾಗಿ ಪ್ರಯತ್ನಿಬೇಕೆಂದು ಸಲಹೆ ನೀಡಿದರು.
ಮತ್ತೊಬ್ಬ ಅತಿಥಿ ಹಾಗೂ ಪತ್ರಕರ್ತ ವಿಶ್ವ ಕುಂದಾಪುರ ಮಾತನಾಡಿ, ಹಳ್ಳಿ ಗಾಡಿನಿಂದ ಬರುವ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾಲೇಜಿನ ಪ್ರಗತಿ ಹೆಚ್ಚಿಸಬೇಕು, ತಂದೆ-ತಾಯಿಗಳ ಪರಿಶ್ರಮದ ಫಲದಿಂದಾಗಿ ಕಾಲೇಜಿಗೆ ಬರುವ ನೀವು ಚೆನ್ನಾಗಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ತಂದೆ-ತಾಯಿ ಹಾಗೂ ಸಮಾಜದ ಋಣ ತೀರಿಸಬೇಕೆಂದರು.
ದೇಶದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿದ್ದು ವಿದ್ಯಾರ್ಥಿಗಳು ಇದಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಕಾರ್ಯಮಗ್ನರಾಗಬೇಕೆಂದರು. ಕೋಮು ಸೌಹಾರ್ದ ಪಾಕ್ಷಿಕ ಮತ್ತು ಸದ್ಭಾವನಾ ದಿನಾಚರಣೆಯನ್ನು ಉದ್ಘಾಟಿಸಿದ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ವೆಂಕಟೇಶಮೂರ್ತಿ ವಿದ್ಯಾರ್ಥಿಗಳು ಜಾತಿ-ಧರ್ಮಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಮಾನವೀಯತೆಗೆ ಪ್ರಾಮುಖ್ಯತೆ ನೀಡಬೇಕೆಂದರು.
ಕೋಮು ಸೌಹಾರ್ದತೆಗಾಗಿ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಎನ್.ಎಸ್.ಎಸ್ ಅಧಿಕಾರಿ ರಾಮಕೃಷ್ಣಪ್ಪ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲ ವೆಂಕಟೇಸು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನಲ್ಲಿ ನೀರಿನ ಸಮಸ್ಯೆ ಇರುವುದರಿಂದ ಪರ್ಯಾಯ ವ್ಯವಸ್ಥೆ ಮಾಡುವಂತೆ ಕಾಲೇಜಿನ ಪ್ರಾಂಶುಪಾಲರು, ವಿದ್ಯಾರ್ಥಿಗಳು ಅಪರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಕಾಲೇಜಿನ ಪರವಾಗಿ ವಿಶೇಷ ಮನವಿ ಮಾಡಿದ ಮನ್ವಂತರ ಪ್ರಕಾಶನ, ಕಳೆದ ಮೂರು ದಿನಗಳ ಹಿಂದೆ ಕೊರೆಸಿರುವ ಕೊಳವೆ ಬಾವಿ ವಿಫಲವಾಗಿದೆ. ನೀರಿನ ಸಮಸ್ಯೆಯಿಂದ ತೊಂದರೆ ಆಗುತ್ತಿರುವುದರಿಂದ ಕನಿಷ್ಟ ಶಾಶ್ವತ ಪರಿಹಾರ ಕಲ್ಪಿಸುವವರೆಗೆ ಪ್ರತಿನಿತ್ಯ ಒಂದು ಇಲ್ಲವೇ ಎರಡು ಟ್ಯಾಂಕರ್ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದಾಗ, ಅಪರ ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವಿಷಯ ತಿಳಿಸುವುದಾಗಿ ಭರವಸೆ ನೀಡಿದರು.
ಲೋಕಾಯುಕ್ತರ ಭೇಟಿಯ ನಂತರ ಕಾಲೇಜಿನಲ್ಲಿ ಪರಿವರ್ತನೆಯ ಗಾಳಿಯ ಜೊತೆಗೆ ಪ್ರತಿ ಗುರುವಾರ ನಡೆಯುತ್ತಿರುವ ವಿದ್ಯಾರ್ಥಿ ಸಮಾವೇಶದಿಂದಾಗಿ ಕೊಂಚ ಬದಲಾವಣೆ ಕಾಣುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ಉಂಟಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

