ಕೋಲಾರ

ಸಿರಿ ಸುವರ್ಣ ತಂತ್ರಜ್ಞಾನ ಪ್ರಾತ್ಯಕ್ಷಿಕೆ

Published On :

ಕೋಲಾರ: ತಾಲೂಕಿನ ಜಂಗಾಲಹಳ್ಳಿಯಲ್ಲಿ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಿಂದ ರೇಷ್ಮೆ ಬೆಳೆಗಾರರ ಅನುಕೂಲಕ್ಕಾಗಿ ಹಾಗೂ ಕೃಷಿ ಕಾರ್ಯಾನುಭವ ಅಂಗವಾಗಿ ಸಿರಿ ಸುವರ್ಣ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರು ಕೃಷಿ ವಿವಿಯ ರೇಷ್ಮೆ ಕೃಷಿ ವಿಭಾಗದ ಸಂಶೋಧಕ ಹಾಗೂ ಕೃಷಿ  ತಜ್ಞರಾದ ಡಾ.ಕೆ.ಪಿ.ಚಿನ್ನಸ್ವಾಮಿ ತಮ್ಮ ಸಂಶೋಧನೆಗಳ ಫಲವಾಗಿ ಯು.ಎ.ಎ ಸ್ ಸಿರಿ ಸುವರ್ಣ ತಂತ್ರಜ್ಞಾನ ಕಂಡುಹಿಡಿದಿದ್ದು, ಇದರಿಂದ ಹಿಪ್ಪುನೇರಳೆ ತೋಟದಲ್ಲಿ ದೀರ್ಘಕಾಲದವರೆಗೆ ತೇವಾಂಶ ಹಿಡಿದಿಟ್ಟುಕೊಳ್ಳುವಲ್ಲಿ ಸಹಕರಿಸುವ ಹಾಗೂ ಸಾವಯವ ಪದಾರ್ಥಗಳನ್ನು ಮಣ್ಣಿನಲ್ಲಿ ಸೇರಿಸಿ ಫಲವತ್ತತೆ ಹೆಚ್ಚಿಸುತ್ತದೆ ಎಂಬುದನ್ನು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ಯಾವುದೇ ಹಾನಿಯಾಗುವುದಿಲ್ಲ: ದೀರ್ಘಕಾಲ ಮಳೆ ಕೊರತೆಯಾದರೂ ರೇಷ್ಮೆಬೆಳೆಗೆ ಯಾವುದೇ ಹಾನಿಯಾಗದೆ ಬೆಳೆಯುವ ಸಾಮರ್ಥ್ಯವನ್ನು ಸಿರಿ ಸುವರ್ಣ ತಂತ್ರಜ್ಞಾನ ನೀಡುತ್ತದೆ.
ಈ ನಿತಗ್ಗು ತೆಗೆಯುವುದು ಹಾಗೂ ಹೊದಿಕೆ ಹಾಕುವುದು ತಂತ್ರಜ್ಞಾನದ ಮೂಲತತ್ವವಾಗಿದ್ದು ಇದರಿಂದ ಹಿಪ್ಪುನೇರಳೆ ಸಾಲಿನ ಅಕ್ಕಪಕ್ಕದ ಬದುಗಳಲ್ಲಿ ಎರಡು ಅಡಿ ಅಗಲ ಒಂದೂವರೆ ಅಡಿ ಆಳದ ತಗ್ಗು ತೆಗೆಯಬೇಕು ಮತ್ತು ತಗ್ಗುಗಳಲ್ಲಿ ಹತ್ತು ಅಡಿ ಅಂತರದಲ್ಲಿ ತಡೆಕಟ್ಟೆ ನಿರ್ಮಿಸಬೇಕು, ಒಂದು ಬದಿಯ ತಗ್ಗನ್ನು ಖಾಲಿ ಬಿಡಬೇಕು, ಈ ತಗ್ಗು ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ತಡೆಹಿಡಿದು ಭೂಮಿಯಲ್ಲಿ ಇಂಗುವಂತೆ ಮಾಡುತ್ತದೆ ಎಂದು ಪ್ರಾತ್ಯಕ್ಷಿಕೆ ನೀಡಲು ಬಂದಿದ್ದ ವಿಜ್ಞಾನಿಗಳು ತಿಳಿಸಿದರು.
ರೇಷ್ಮೆ ತೋಟದಲ್ಲಿನ ತಗ್ಗಿನಲ್ಲಿ ಸಾವಯವ ತ್ಯಾಜ್ಯಗಳನ್ನು ತುಂಬಬೇಕು, ಗುಂಡಿಯ ತಳಭಾಗಕ್ಕೆ ಕತ್ತರಿಸಿದ ಹಸಿರೆಲೆಗಳನ್ನು ತುಂಬಬೇಕು ಮತ್ತು ಕೊಟ್ಟಿಗೆ ಗೊಬ್ಬರ, ಕೊಳೆಯುವಂತಹ ಪದಾರ್ಥಗಳನ್ನು ಬೇರೆ ಬೇರೆ ಪದರಗಳಲ್ಲಿ ತುಂಬಬೇಕು ಮತ್ತು ಅಜೊಟೊಬ್ಯಾಕ್ಟರ್, ಅಜೋಸ್ಪೈರುಲಂ ಎಂಬ ಜೀವಾಣುಗಳನ್ನು ಸೇರಿಸುವುದರಿಂದ ಸಾರಜನಕದ ಸ್ಥಿರೀಕರಣ ಸಾಧ್ಯ ಎಂದು ವಿಜ್ಞಾನಿಗಳು ರೈತರಿಗೆ ಸಲಹೆ ನೀಡಿದರು. ಕೃಷಿ ವಿಜ್ಞಾಗಳಾದ ಡಾ.ಬಿ.ಕೃಷ್ಣಮೂರ್ತಿ, ಡಾ.ನರಸೇಗೌಡ, ಡಾ.ಎನ್.ಬಿ.ಪ್ರಕಾಶ್, ಕೃಷಿ ಅಧಿಕಾರಿ ಮಂಜುನಾಥ್, ವಿದ್ಯಾರ್ಥಿಗಳಾದ ರಮೇಶ್, ಶರತ್ಗೌಡ, ಶಶಿಧರ್, ಶಿವಕುಮಾರ್, ಶಿವರಾಜಕುಮಾರ್,  ರಮ್ಯ, ಶ್ರೀದೇವಿ, ಗ್ರಾಪಂ ಸದಸ್ಯರಾದ ಚಿನ್ನಪ್ಪ, ಕೃಷ್ಣಪ್ಪ, ಜಂಗಾಲಹಳ್ಳಿ ಶ್ರೀನಿವಾಸ್, ಶಿವಶಂಕರಯ್ಯ, ಪ್ರಗತಿಪರ ರೈತರಾದ ಸತ್ಯನಾರಾಯಣರಾವ್, ಮಂಜುನಾಥ್, ಎಚ್.ವಿ.ಶಂಕರಪ್ಪ, ಬಸವರಾಜು, ಶಿವಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.